ಮಂಗಳೂರು: ಬಂಟ್ವಾಳ ತಾಲೂಕಿನ ಬಿಸಿ ರೋಡಿನಲ್ಲಿ ಗುರುವಾರ ರಾತ್ರಿ ಯುವಕನಿಗೆ ಅಪರಿಚಿತ ಕಿಡಿಗೇಡಿಗಳು ಇರಿದು ಕೊಲೆ ಮಾಡಿದ ಕೃತ್ಯ ಹಾಗೂ ಮಡಿಕೇರಿಯಲ್ಲಿ ಹಿಂದೂ ಕಾರ್ಯಕರ್ತನ ಕೊಲೆಯನ್ನು ವಿರೋದಿಸಿ ಹಿಂದು ಸಂಘಟನೆಗಳು ಕರೆ ನೀಡಿದ ಬಂದ್ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಕಂಡಿದೆ.
ಜಿಲ್ಲೆಯಾದ್ಯಂತ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಅಂಗಡಿ ಮುಂಗಟ್ಟು ಶಾಲಾ ಕಾಲೇಜುಗಳು, ಸಂಪೂರ್ಣ ಮುಚ್ಚಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ದೂರದ ಊರಿನಿಂದ ನಗರಕ್ಕೆ ಬಂದ ಜನರು ಪರದಾಡುತ್ತಿದ್ದು, ಹಿಂದೂ ಸಂಘಟನೆಗಳು ಅಲ್ಲಲ್ಲಿ ರಸ್ತೆ ತಡೆ ನಡೆಸಿದ್ದಾರೆ. ಕೆಲವೊಂದು ಕಿಡಿಗೇಡಿಗಳು ಬಸ್ಸುಗಳಿಗೆ ಕಲ್ಲೂ ತೂರಾಟ ನಡೆಸಿದ್ದು ಹಲವು ವಾಹನಗಳು ಜಖಂಗೊಂಡಿವೆ. ಗುರುವಾರ ತಡರಾತ್ರಿ ಸರಕಾರಿ ಬಸ್ಸಿಗೆ ಬೆಂಕಿ ಕೊಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದು, ಹಲವೆಡೆ ರಸ್ತೆಯಲ್ಲಿ ಟೈರ್ ಗಳಿಗೆ ಬೆಂಕಿ ನೀಡಿ ಪ್ರತಿಭಟನೆ ನಡೆದಿದೆ.
ಮುಂಜಾಗ್ರತಾ ಕ್ರಮವಾಗಿ ಪೋಲಿಸರು ಭಾರಿ ಬಂದೋಬಸ್ತನ್ನು ಮಾಡಿದ್ದು, ಎಲ್ಲಾ ಖಾಸಗಿ ವಾಹನಗಳನ್ನು ತಪಾಸಣೆ ನಡೆಸಿ ನಗರದೊಳಗೆ ಬಿಡುತ್ತಿದ್ದಾರೆ.
ಜಿಲ್ಲಾಡಳಿತ ಗುರುವಾರ ರಾತ್ರಿಯಿಂದ ಶುಕ್ರವಾರ ರಾತ್ರಿಯ ತನಕ ನಿಷೇಧಾಜ್ಞೆಯನ್ನು ಘೋಷಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಿದೆ. ನಿಗದಿತ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿಲಾಗಿದ್ದು, ಹೆಚ್ಚಿನ ಪೋಲಿಸ್ ಪಡೆಯನ್ನು ನಗರಕ್ಕೆ ಕರೆಯಿಸಿಕೊಳ್ಳಲಾಗಿದೆ.