ಮಂಗಳೂರು ಧರ್ಮ‌ಪ್ರಾಂತ್ಯದ 14ನೇ ಧರ್ಮಾಧ್ಯಕ್ಷರಾಗಿ   ವಂ.ಡಾ.ಪೀಟರ್ ಪಾವ್ಲ್ ಸಲ್ದಾನ ಅಧಿಕಾರ ಸ್ವೀಕಾರ

Spread the love

ಮಂಗಳೂರು ಧರ್ಮ‌ಪ್ರಾಂತ್ಯದ 14ನೇ ಧರ್ಮಾಧ್ಯಕ್ಷರಾಗಿ   ವಂ.ಡಾ.ಪೀಟರ್ ಪಾವ್ಲ್ ಸಲ್ದಾನ ಅಧಿಕಾರ ಸ್ವೀಕಾರ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ 2.5 ಲಕ್ಷ ಕೆಥೋಲಿಕ್‌ ಕ್ರಿಶ್ಚಿಯನ್‌ರನ್ನು ಹೊಂದಿರುವ ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್‌ ಆಗಿ ರೆ.ಡಾ. ಪೀಟರ್‌ ಪಾವ್ಲ್‌ ಸಲ್ಡಾನ ಅವರು ಅಧಿಕಾರ ಸ್ವೀಕರಿಸಿದರು.‌

ಮಂಗಳೂರು ಧರ್ಮ ಪ್ರಾಂತ್ಯದಲ್ಲಿ 22 ವರ್ಷಗಳ‌ ಬಳಿಕ ನಡೆದ ಈ ಐತಿಹಾಸಿಕ ಸಮಾರಂಭಕ್ಕೆ ಬೆಂಗಳೂರು, ಗೋವಾದ ಆರ್ಚ್ ಬಿಷಪ್ ಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಬಿಷಪ್ ಗಳು, ನೂರಾರು ಧರ್ಮ ಗುರುಗಳು, ಧರ್ಮ ಭಗಿನಿಯರು, ಸಹಸ್ರಾರು ಕ್ರೈಸ್ತ ಬಾಂಧವರು, ಗಣ್ಯರು, ಸಾರ್ವಜನಿಕರು ಸಾಕ್ಷಿಯಾದರು.

ವಿಶೇಷ ಬಲಿಪೂಜೆ ಸಹಿತ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ನೂತನ ಬಿಷಪ್ ಗೆ ನಿರ್ಗಮನ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಹಾಗೂ ವೇದಿಕೆಯಲ್ಲಿದ್ದ ಆರ್ಚ್ ಬಿಷಪ್ ಗಳು ಮತ್ತು ಬಿಷಪರು ದೀಕ್ಷೆ ವಿಧಿ ವಿಧಾನ ನೆರವೇರಿಸಿದರು.

ರೋಮ್ ನ ಪೋಪ್ ಪ್ರತಿನಿಧಿ ಮೊನ್ಸಿಂಜರ್ ಝೇವಿಯರ್ ಡಿ. ಫೆರ್ನಾಂಡಿಸ್ ರವರು ಬಿಷಪ್ ನೇಮಕಾತಿಯ ಲ್ಯಾಟಿನ್ ಭಾಷೆಯ ಆದೇಶ ಪತ್ರ ವಾಚಿಸಿದರು. ಫಾ. ಜೋಸೆಫ್ ಮಾರ್ಟಿಸ್ ಇಂಗ್ಲಿಷ್ ನಲ್ಲಿ, ಫಾ. ವಿಕ್ಟರ್ ಡಿಮೆಲ್ಲೊ ಕೊಂಕಣಿಯಲ್ಲಿ ಆದೇಶವನ್ನು ಭಾಷಾಂತರಿಸಿದರು.

ಈ ವೇಳೆ ಆಶೀರ್ವಚನ ನೀಡಿದ ನೂತನ ಧರ್ಮಾಧ್ಯಕ್ಷರು ದೇವರ ಅನುಗ್ರಹ ಪ್ರತಿಯೊಬ್ಬರಲ್ಲೂ ಕಾರ್ಯನಿತರವಾಗಿದೆ ಹಾಗೂ ದೇವರ ಆತ್ಮ ಬೇರೆ ಬೇರೆ ಧರ್ಮ ಸಂಪ್ರದಾಯದವರಾದ ನಮ್ಮನೆಲ್ಲಾ ಒಟ್ಟುಗೂಡಿಸಿದೆ. ಸಾವಿಗಿಂತ ಪ್ರೀತಿ ಹೆಚ್ಚು ಶಕ್ತಿಶಾಲಿ. ಪ್ರೀತಿ ಎಲ್ಲ ಸಿದ್ಧಾಂತಗಳಿಗಿಂತ ಉತ್ತಮವಾದದ್ದು ಹಾಗೂ ಬೇರ್ಪಡಿಸುವ ಎಲ್ಲ ಗೋಡೆಗಳಿಗಿಂತ ಎತ್ತರವಾದುದು ಎಂದು ಕನ್ನದಲ್ಲಿ ಅವರು ಸಂದೇಶ ನೀಡಿದರು.

ಒಬ್ಬ ಧರ್ಮಾಧ್ಯಕ್ಷನಾಗಿ ನಾನು ಕ್ರೈಸ್ತ ಧರ್ಮವನ್ನು ಪ್ರತಿನಿಧಿಸಬೇಕಾಗಿದೆ. ಕ್ರೈಸ್ತರು ಎಂದೂ ತಮಗಾಗಿ ಬಾಳುವುದಿಲ್ಲ. ಹಾಗೆಯೇ ಒಬ್ಬ ಧರ್ಮಾಧ್ಯಕ್ಷ ಕೂಡಾ ತನಗಾಗಿ ಬಾಳುವುದಿಲ್ಲ. ಕ್ರೈಸ್ತರನ್ನು ಸಂರಕ್ಷಿಸಿದರೆ ಅವರು ಯಾವುದೇ ಬೇಧ ಭಾವವಿಲ್ಲದೆ ಇತರೆಲ್ಲರ ಅಗತ್ಯಗಳಿಗೆ ಸ್ಪಂದಿಸಲು ದಯಾವಂತರು ಶಾಂತರಾಗುವುದನ್ನು ಕಾಣಬಹುದು. ಹಾಗೆಯೇ ಹಿಂದೂ ಬಾಂಧವನ್ನು ಸಂರಕ್ಷಿಸಿದರೆ ಅವರು ಅತ್ಯಂತ ಉದಾರ ಮನಸ್ಸಿನಿಂದ ಸಹಾಯ ಹಸ್ತ ಚಾಚುತ್ತಾರೆ. ಮುಸ್ಲಿಂ ಬಾಂಧವರನ್ನು ಸಂರಕ್ಷಿಸಿದರೆ ಅವರು ಪ್ರಾಮಾಣಿಕರಾಗಿ ಅನುಕಂಪಭರಿತರಾಗುವುದನ್ನು ನಾವು ಕಾಣಬಹುದು. ಮಾನವ ಹೃದಯದ ಮೃತು ತಂತಿಗಳ ಮೂಲಕ ಸುಮಧುರ ಸ್ವರವನ್ನು ನುಡಿಸಲು ನಾವು ಬಯಸುತ್ತೇವೆ. ಆದರೆ ವಾದ್ಯವೊಂದರಿಂದ ಅದೆಷ್ಟು ಸುಂದರ ಸಂಗೀತ ನುಡಿಸಿದರೂ ವಾದ್ಯಗೋಷ್ಠಿಯನ್ನು ಪರಿಣಾಮಕಾರಿಯಾಗಿಸಲು ಸಾಧ್ಯವಿಲ್ಲ. ಎಲ್ಲ ವಾದ್ಯಗಳನ್ನು ಒಂದೇ ಶ್ರುತಿಯಲ್ಲಿ ನುಡಿಸಿದಾಗ ಹಾಗೂ ಅದರೊಟ್ಟಿಗೆ ಮಾನವ ಸ್ವರಗಳನ್ನು ಸೇರಿಸಿದಾಗ ನಮಗೆ ಮಹೋನ್ನತ ಅನುಭವವಾಗುತ್ತದೆ. ನಾವು ಮಾನವ ಹೃದಯದಿಂದ ಪ್ರೀತಿ, ಸತ್ಯ ಹಾಗೂ ದಯೆ ಎಂಬ ಸುಂದರ ಸಂಗೀತವನ್ನು ನುಡಿಸಲು ಪ್ರಯತ್ನಿಸಬೇಕಾಗಿದೆ. ಆದ್ದರಿಂದ ನಾವು ಪ್ರತಿಯೊಬ್ಬರನ್ನು ಮೆಚ್ಚಿಕೊಂಡು ರಕ್ಷಿಸೋಣ. ಕೇಡು ಮತ್ತು ಹಿಂಸೆಯನ್ನು ಸ್ಪಂಜಿನಂತೆ ಹೀರಿ ಇತರ ಬಗ್ಗೆ ಅನುಕಂಪದಿಂದ ವರ್ತಿಸೋಣ ಎಂದು ನೂತನ ಬಿಷಪ್ ಆಶಯ ವ್ಯಕ್ತಪಡಿಸಿದರು.

ನಾವೆಲ್ಲರೂ ಒಂದು ಮಾನವ ಕುಟುಂಬಕ್ಕೆ ಸೇರಿದ್ದರೂ ನಮ್ಮ ಅಗತ್ಯತೆ ಮತ್ತು ಭಯಗಳೆಲ್ಲವೂ ಒಂದೇ ಆಗಿವೆ. ಒಬ್ಬರ ಕಣ್ಣುಗಳನ್ನು ಆಳವಾಗಿ ಗಮನಿಸಿದಾಗ ಆ ನೋಟದ ಹಿಂದಿರುವ ನೋವು ಅರಿವಾಗುತ್ತದೆ. ಒಬ್ಬರ ಹೃದಯ ಬಡಿತವನ್ನು ಆಲಿಸಿದರೆ, ಪ್ರೀತಿಗಾಗಿನ ಅವರ ಕೂಗು ನಮಗೆ ಕೇಳಿಸುತ್ತದೆ. ಆದರೆ ದುರಾದೃಷ್ಟ ಎಂಬಂತೆ ನಮ್ಮ ಮಧ್ಯೆ ಸಂಶಯದ ಗೋಡೆಗಳನ್ನು ನಾವು ಕಟ್ಟಿಕೊಂಡಿದ್ದೇವೆ. ಇದರಿಂದಾಗಿ ನಮ್ಮ ಹೃದಯಗಳು ಕಲ್ಲುಗಳಂತಾಗುತ್ತವೆ. ಆದ್ದರಿಂದ ನಾವು ಈ ಕ್ಷಣದಿಂದಾದರೂ ಮಾನವತೆಯನ್ನು ಬೆಳೆಸೋಣ. ಪ್ರೀತಿಯ ಗಾಳಿ ಎಲ್ಲೆಡೆ ಹರಿದಾಡಲು ಒಂದು ಮುಕ್ತ ಸಮಾಜವನ್ನು ಸೃಷ್ಟಿಸೋಣ ಎಂದು ರೆ.ಡಾ. ಪೀಟರ್ ಪಾವ್ಲ್ ಸಲ್ದಾನ ಅಭಿಪ್ರಾಯಿಸಿದರು.

ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಕ್ರೈಸ್ತ ಮಿಶನರಿಗಳ ಪಾತ್ರ ಹಾಗೂ ಕೊಡುಗೆ ಅಪಾರ ಎಂದು ನೂತನ ಬಿಷಪರನ್ನು ಅಭಿನಂದಿಸಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಿಸಿದರು. ನಿರ್ಗಮನ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾರವರು ಜನಸಾಮಾನ್ಯರ ಬಿಷಪ್ ಆಗಿ ಗುರುತಿಸಿಕೊಂಡವರು. ನೂತನ ಬಿಷಪ್ ಕೂಡಾ ಸರ್ವ ಧರ್ಮಗಳಿಗೂ ಬಿಷಪ್ ಆಗಿ ಸಲಹೆ, ಮಾರ್ಗದರ್ಶನ ನೀಡಬೇಕು ಎಂದು ಅವರು ಹೇಳಿದರು.

ಇದೇ ವೇಳೆ ನೂತನ ಬಿಷಪರಿಗೆ ದೀಕ್ಷೆ ಸಮಾರಂಭದ ಅಧ್ಯಕ್ಷತೆ ವಹಿಸಿ, ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದ ನಿರ್ಗಮನ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ನೂತನ ಬಿಷಪ್‌ಗೆ ಶುಭ ಹಾರೈಸಿದರು. 22 ವರ್ಷಗಳ ಕಾಲ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದಕ್ಕಾಗಿ ಕ್ರೈಸ್ತ ಬಾಂಧವರಿಗೆ ಕೃತಜ್ಞತೆ ಸಲ್ಲಿಸಿದರು.

ದೀಕ್ಷಾ ಸಮಾರಂಭದ ಬಳಿಕ ಅಭಿನಂದನೆ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆರ್ಚ್ ಬಿಷಪ್ ಪೀಟರ್ ಮಚಾದೊ ಸಂದೇಶ ನೀಡಿ ನೂತನ ಬಿಷಪರಿಗೆ ಶುಭ ಹಾರೈಸಿದರು.

ಸಚಿವ ಯು.ಟಿ.ಖಾದರ್‌ರವರು ನೂತನ ಹಾಗೂ ನಿರ್ಗಮನ ಬಿಷಪರಿಗೆ ಶಾಲು ಹೊದಿಸಿ ಅಭಿನಂದಿಸಿದರು. ಇದೇ ವೇಳೆ ನೂತನ ಬಿಷಪ್, ನಿರ್ಗಮನ ಬಿಷಪ್ ಹಾಗೂ ಆರ್ಚ್ ಬಿಷಪರನ್ನು ಸನ್ಮಾನ ಪತ್ರ, ಶಾಲು, ಹೂ ಹಾರ ಹಾಗೂ ತೆಂಗಿನ ಸಸಿ ನೀಡುವ ಮೂಲಕ ಸನ್ಮಾನಿಸಲಾಯಿತು.

ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಅವರ ಪತ್ನಿ ಬ್ಲೋಸಂ ಫೆರ್ನಾಂಡಿಸ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮೇಯರ್ ಭಾಸ್ಕರ ಕೆ., ಮಾಜಿ ಶಾಸಕರಾದ ಯೋಗೀಶ್ ಭಟ್, ಜೆ.ಆರ್. ಲೋಬೋ, ಮೊಯ್ದಿನ್ ಬಾವಾ, ಅಪರ ಜಿಲ್ಲಾಧಿಕಾರಿ ಕುಮಾರ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಮೊದಲಾದವರು ಉಪಸ್ಥಿತರಿದ್ದು ನೂತನ ಬಿಷಪರನ್ನು ಅಭಿನಂದಿಸಿದರು.

ರೆ. ಡಾ.ಪೀಟರ್ ಪಾವ್ಲ್‌ ಸಲ್ಡಾನ ಅವರು 1964ರ ಏಪ್ರಿಲ್ 27ರಂದು ಕಿನ್ನಿಗೋಳಿ ಸಮೀಪದ ಕಿರೆಂನಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿದ ಅವರು, ನಗರದ ಜೆಪ್ಪುವಿನಲ್ಲಿರುವ ಸೇಂಟ್‌ ಜೋಸೆಫ್ಸ್ ಸೆಮಿನರಿಯಲ್ಲಿ ಧರ್ಮಗುರು ತರಬೇತಿ ಪಡೆದರು.

ಫಿಲಾಸಫಿ ಮತ್ತು ಥಿಯಾಲಜಿ ಶಿಕ್ಷಣವನ್ನು ಪೂರೈಸಿ, 1991ರ ಮೇ 6ರಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುವಾಗಿ ಆಗಿನ ಧರ್ಮಾಧ್ಯಕ್ಷ ಬಾಸಿಲ್ ಸಾಲ್ವದೊರ್‌ ಅವರಿಂದ ದೀಕ್ಷೆ ಪಡೆದರು.

ಇದೀಗ ಉಡುಪಿ ಧರ್ಮಪ್ರಾಂತ್ಯದಲ್ಲಿರುವ ಮೂಡುಬೆಳ್ಳೆ ಸೇಂಟ್‌ ಲಾರೆನ್ಸ್ ಚರ್ಚ್‌ ಮಂಗಳೂರಿನ ಮಿಲಾಗ್ರಿಸ್ ಚರ್ಚ್‌ ಮತ್ತು ವಿಟ್ಲದ ಶೋಕಮಾತೆ ಚರ್ಚ್‌ಗಳಲ್ಲಿ ಸಹಾಯಕ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದಾರೆ. 1996ರಲ್ಲಿ ನಗರದ ಜೆಪ್ಪು ಸೇಂಟ್‌ ಜೋಸೆಫ್‌ ಸೆಮಿನರಿಯಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡರು.

ಬಳಿಕ ಥಿಯಾಲಜಿಯಲ್ಲಿ ಉನ್ನತ ಅಧ್ಯಯನಕ್ಕಾಗಿ ರೋಮ್‍ಗೆ ತೆರಳಿದರು. ಡೋಗ್ಮಾಟಿಕ್ ಥಿಯಾಲಜಿಯಲ್ಲಿ ಡಾಕ್ಟರೇಟ್ ಪಡೆದರು. 2010ರಿಂದ ರೋಮ್‌ನ ಉರ್ಬೇನಿಯಾನಾ ವಿಶ್ವವಿದ್ಯಾಲಯದಲ್ಲಿ ಡೋಗ್ಮಾಟಿಕ್ ಥಿಯಾಲಜಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು


Spread the love