ಮಂಗಳೂರು ನಗರ ದಕ್ಷಿಣದ ದೇವಸ್ಥಾನಗಳಿಗೆ 80 ಲಕ್ಷ ಅನುದಾನ: ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯ 4 ದೇವಸ್ಥಾನಗಳಿಗೆ ಮುಜರಾಯಿ ಇಲಾಖೆಯಿಂದ 80 ಲಕ್ಷ ಬಿಡುಗಡೆಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಬೋಳೂರು ಜಾರಂದಾಯ ದೈವಸ್ಥಾನ, ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಬೋಳಾರ ಹಳೇಕೋಟೆ ಮಾರಿಯಮ್ಮ ದೇವಸ್ಥಾನ ಹಾಗೂ ರಥಬೀದಿ ಕಾಳಿಕಾಂಬ ವಿನಾಯಕ ದೇವಸ್ಥಾನಕ್ಕೆ ತಲಾ 20 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ.
ಮಂಗಳೂರು ನಗರ ದಕ್ಷಿಣದ ಜನರ ನಂಬಿಕೆ ಹಾಗೂ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಈ ಅನುದಾನ ಬಿಡುಗಡೆಯಾಗಿದೆ. ಅದಕ್ಕಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ, ಮುಜರಾಯಿ ಸಚಿವರೂ ಆಗಿರುವ ಕೋಟಾಶ್ರೀನಿವಾಸ್ ಪೂಜಾರಿ ಅವರಿಗೂ ಕೂಡ ಜನರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹಾಗೂ ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ಉರ್ವ ಮಾರಿಯಮ್ಮ ದೇವಸ್ಥಾನಕ್ಕೆ 50 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ ಅದಕ್ಕಾಗಿ ಪ್ರವಾಸೋದ್ಯಮ ಸಚಿವರಾದ ಸಿ.ಟಿ ರವಿ ಅವರಿಗೂ ಕೂಡ ಧನ್ಯವಾದಗಳನ್ನು ಅರ್ಪಿಸಬೇಕು.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯ ಬಹಳಷ್ಟು ಪುರಾತನ ದೇಗುಲಗಳ ಅಭಿವೃದ್ಧಿಯ ಬಗ್ಗೆ ಯೋಚನೆಯಿದೆ. ಪಾರಂಪರಿಕ ಕಟ್ಟಡಗಳು ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಸರಕಾರದ ಜೊತೆ ಮಾತುಕತೆ ನಡೆಸಿ ಮತ್ತಷ್ಟು ಅನುದಾನಗಳನ್ನು ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿದೆ ಎಂದು ತಿಳಿಸಿದ್ದಾರೆ.