ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ನಿಂದ ಅಭಿನಂದನಾ ಸಮಾರಂಭ, ಕಾರ್ಯಕರ್ತರ ಸಮ್ಮಿಲನ
ಮಂಗಳೂರು: ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ವತಿಯಿಂದ ವಿಧಾನ ಪರಿಷತ್ ಗೆ ದ್ವಿತೀಯ ಬಾರಿ ಆಯ್ಕೆಯಾಗಿರುವ ಐವನ್ ಡಿಸೋಜ ಹಾಗೂ ವಿವಿಧ ನಿಗಮಗಳಿಗೆ ನಾಮ ನಿರ್ದೇಶಿತರಾದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮ ಶನಿವಾರ ಸಂಜೆ ಉರ್ವ ಸ್ಟೋರ್ ನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜರುಗಿತು.
ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡಿ, ”ಕಾಂಗ್ರೆಸ್ ಪಕ್ಷದಲ್ಲಿ ನೂತನವಾಗಿ ಜವಾಬ್ದಾರಿ ವಹಿಸಿಕೊಂಡ ಎಲ್ಲರಿಗೂ ಅಭಿನಂದನೆಗಳು. ಮುಂದೆ ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆ ಮತ್ತು ಇನ್ನಿತರ ಚುನಾವಣೆಗಳಲ್ಲಿ ಪಕ್ಷವನ್ನು ಬಲಪಡಿಸಿ ಅಧಿಕಾರಕ್ಕೆ ತರುವುದೇ ನಮ್ಮೆಲ್ಲರ ಧ್ಯೇಯವಾಗಿರಲಿ“ ಎಂದರು.
ಲೋಕಸಭಾ ಅಭ್ಯರ್ಥಿ ಆರ್.ಪದ್ಮರಾಜ್ ಪೂಜಾರಿ ಮಾತನಾಡಿ, “ನಾವು ಹತ್ತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಆದರೆ ಮತ ಗಳಿಕೆಯಲ್ಲಿ ಹಿಂದಿದ್ದೇವೆ. ದೇಶದ ಸಂವಿಧಾನದ ಆಶೋತ್ತರಗಳಿಗೆ ಸ್ಪಂದಿಸುವ ಏಕೈಕ ಪಕ್ಷ ಏನಾದರು ಇದ್ದರೆ ಅದು ಕಾಂಗ್ರೆಸ್ ಪಕ್ಷ, ಹೀಗಾಗಿ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ನಾವೆಲ್ಲರೂ ಚಿಂತಿಸಿ ಕಾರ್ಯೋನ್ಮುಖರಾಗಬೇಕಿದೆ. ವಿವಿಧ ನಿಗಮಗಳಿಗೆ ಆಯ್ಕೆಯಾಗಿರುವ ನಮ್ಮ ಕಾರ್ಯಕರ್ತರು ಮುಂದೆ ಉತ್ತಮ ರೀತಿಯಲ್ಲಿ ಪಕ್ಷ ನಿಷ್ಠೆಯಿಂದ ಸೇವೆ ಸಲ್ಲಿಸಲಿ“ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಾತನಾಡಿ, “ಐವನ್ ಡಿಸೋಜ ಅವರು ಕಾಂಗ್ರೆಸ್ ಪಕ್ಷದ ಒಂದು ಶಕ್ತಿ. ಇಲ್ಲಿರುವ ಎಲ್ಲರೂ ಪಕ್ಷದ ನಿಷ್ಠೆಯಿಂದ ದುಡಿಯುತ್ತಿರುವವರು. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ಸಾಹ ಹುರುಪಿನಿಂದ ದುಡಿದು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸೋಣ” ಎಂದು ಕರೆ ನೀಡಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯಐವನ್ ಡಿಸೋಜ, ಪ್ರವೀಣ್ ಚಂದ್ರ ಆಳ್ವ, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಸುರೇಶ್ ಬಳ್ಳಾಲ್, ವಿಶ್ವಾಸ್ ಕುಮಾರ್ ದಾಸ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕುಮಾರಿ ಅಪ್ಪಿ, ಮಾಜಿ ಮೇಯರ್ ಜೆಸಿಂತಾ, ಮತ್ತಿತರರು ಉಪಸ್ಥಿತರಿದ್ದರು.
ಅಭಿನಂದನಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್ ಪ್ರಾಸ್ತಾವಿಕ ಮಾತನ್ನಾಡಿದರು. ರಘುರಾಜ್ ಕದ್ರಿ, ಕಿರಣ್ ಕುಮಾರ ಕೋಡಿಯಾಲ ಬೈಲ್ ಕಾರ್ಯಕ್ರಮ ನಿರೂಪಿಸಿದರು.