ಮಂಗಳೂರು: ನದಿಯಲ್ಲಿ ಇಸ್ಕಾನ್ ಸಿಬಂದಿಯ ಶವ ಪತ್ತೆ; ಕೊಲೆ ಶಂಕೆ

Spread the love

ಮಂಗಳೂರು: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಇಸ್ಕಾನ್ ಸಿಬ್ಬಂದಿಯ ಮೃತದೇಹವು ಇಂದು ಮಧ್ಯಾಹ್ನ ನೇತ್ರಾವತಿ ನದಿ ಸಮೀಪದ ಕಲ್ಲಾಪು ಬಳಿಯ ಆಡಂಕುದ್ರು ಎಂಬಲ್ಲಿ ಮಧ್ಯಾಹ್ನ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ISKCON-09082015 (3)

ಮೃತರನ್ನು ರಾಘ ಗೋವಿಂದದಾಸ್ (28) ಎಂದು ಗುರುತಿಸಲಾಗಿದೆ. ಪತ್ತೆಯಾದ ಮೃತ ದೇಹದ ಬೆನ್ನಲ್ಲಿ ಹಾಕಿಕೊಂಡಿದ್ದ ಬ್ಯಾಗ್‌ಗೆ ಕಲ್ಲೊಂದು ಕಟ್ಟಿರುವುದು ಪತ್ತೆಯಾಗಿದೆ. ಅವರು ಬ್ಯಾಗ್‌ಗೆ ಕಲ್ಲು ಕಟ್ಟಿ ನೇತ್ರಾವತಿ ನದಿಗೆ ಧುಮುಕಿರಬೇಕೆಂದು ಸ್ಥಳೀಯವಾಗಿ ಅನುಮಾನ ವ್ಯಕ್ತವಾಗಿದ್ದರೂ ಅವರ ಹಿರಿಯ ಸಹೋದರ ನರೇಂದ್ರ ಕುಮಾರ್ ಉಳ್ಳಾಲ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಇದು ಆತ್ಯಹತ್ಯೆ ಅಲ್ಲ, ಕೊಲೆ ಎಂದು ಆರೋಪಿಸಿದ್ದಾರೆ.

ತನ್ನ ಸಹೋದರನ ಬ್ಯಾಗ್‌ನ ಹಿಂದೆ ಕಲ್ಲನ್ನು ಕಟ್ಟಿ ನದಿಗೆ ಎಸೆಯಲಾಗಿದೆ ಎಂದು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ಮೊಬೈಲ್ ಚಾರ್ಜರ್‌ನಿಂದ ತಮ್ಮನ ಕುತ್ತಿಗೆಯನ್ನು ಬಿಗಿಯಲಾಗಿದ್ದು, ಆತನನ್ನು ಕೊಲೆ ಮಾಡಿ, ಆನಂತರ ಆತನ ಬ್ಯಾಗ್‌ಗೆ ಕಲ್ಲು ಕಟ್ಟಿ ನದಿಗೆ ದೂಡಿದ್ದಾರೆ ಎಂದು ನರೇಂದ್ರ ಕುಮಾರ್ ದೂರಿದ್ದಾರೆ.

ತನ್ನ ಸಹೋದರನ ಕೊಲೆ ಮಾಡಿದ ಕೃತ್ಯದಲ್ಲಿ ಇಸ್ಕಾನ್‌ನ ದ.ಕ. ಜಿಲ್ಲಾ ಮುಖ್ಯಸ್ಥ ಕಾರುಣ್ಯ ಸಾಗರ್‌ದಾಸ್ ಪ್ರಮುಖನಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ನರೇಂದ್ರ ಕುಮಾರ್ ದೂರಿನಲ್ಲಿ ಆಗ್ರಹಿಸಿದ್ದಾರೆ. ಬೆಂಗಳೂರಿನ ನಿವಾಸಿಯಾಗಿರುವ ರಾಘ ಗೋವಿಂದ ದಾಸ್ (ಮೂಲ ಹೆಸರು ರವಿ ಕುಮಾರ್) ಸುಮಾರು 4 ವರ್ಷಗಳ ಹಿಂದೆ ಇಸ್ಕಾನ್‌ಗೆ ಸೇರಿಕೊಂಡಿದ್ದರು.

ಉಳ್ಳಾಲ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love