ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ 2015-16 ನೇ ಸಾಲಿನ ಕೊಂಕಣಿ ಕ್ಲಬ್ ಯೋಜನೆಯಡಿ ಪ್ರಥಮ ಕ್ಲಬ್ ಶಕ್ತಿನಗರದ ನಾಲ್ಯಪದವು ಸರಕಾರಿ ಪ್ರೌಢಶಾಲೆಯಲ್ಲಿ 08-07-2015 ರಂದು ಉದ್ಘಾಟನೆಗೊಂಡಿತು.
ದೀಪ ಬೆಳಗಿಸಿ ಕ್ಲಬ್ ಉದ್ಘಾಟಿಸಿದ ಸ್ಥಳೀಯ ಕಾರ್ಪೊರೇಟರ್ ಆಖಿಲಾ ಆಳ್ವಾ ಹೊಸಭಾಷೆ ಕಲಿಯಲು, ಭಾಷಾ ಭಾವೈಕ್ಯತೆ ಬೆಳೆಸಲು ಈ ಕ್ಲಬ್ ಸಹಕಾರಿಯಾಗಲಿ. ಈ ವಿನೂತನ ಯೋಜನೆಯ ಪ್ರಯೋಜನ ಎಲ್ಲಾ ಮಕ್ಕಳಿಗೆ ದೊರೆಯಲಿ ಎಂದು ಶುಭ ಹಾರೈಸಿದರು.
ಶಾಲಾ ಲೈಬ್ರೆರಿಗೆ ಕೊಂಕಣಿ ಪುಸ್ತಕ ಹಸ್ತಾಂತರಿಸಿ ಮಾತನಾಡಿದ ಡಯಟ್ ಪ್ರಾಂಶುಪಾಲರಾದ ಸಿಪ್ರಿಯನ್ ಮೊಂತೇರೊ ನಮ್ಮ ಜಿಲ್ಲೆಯಲ್ಲಿ ಪ್ರಥಮವಾಗಿ ಈ ಸಾಲಿನಲ್ಲಿ ಕೊಂಕಣಿ ಕ್ಲಬ್ ಆರಂಭಿಸುವ ಅವಕಾಶ ಈ ಪ್ರೌಢಶಾಲೆಗೆ ದೊರೆತಿದೆ. ವಿದ್ಯಾರ್ಥಿಗಳು ಸಣ್ಣ ಪ್ರಾಯದಲ್ಲಿ ಹೆಚ್ಚು ಹೆಚ್ಚು ಭಾಷೆಗಳ ಬಗ್ಗೆ ಅರಿವು ಪಡೆದರೆ ಸುಲಭವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಮಾತನಾಡಿ ಭಾರತದ ರಾಷ್ಟ್ರೀಯ ಭಾಷೆಗಳಲ್ಲಿ ಒಂದೆನಿಸಿದ ಕೊಂಕಣಿಯ ಬೆಳವಣಿಗೆಗೆ ಶಾಲೆಗಳಲ್ಲಿ ಕೊಂಕಣಿ ಕಲಿಕೆ ಒಂದು ಉತ್ತಮ ಅವಕಾಶ. ಇದಕ್ಕೆ ಪೂರಕವಾಗಿ ಮಕ್ಕಳಲ್ಲಿ ಕೊಂಕಣಿ ಬಗ್ಗೆ ಒಲವು ಮೂಡಿಸಲು ಕೊಂಕಣಿ ಕ್ಲಬ್‍ಗಳನ್ನು ಆರಂಭಿಸಲಾಯಿತು ಎಂದು ಹೇಳಿದರು.
ಅಕಾಡೆಮಿ ಸದಸ್ಯ ಲಾರೆನ್ಸ್ ಡಿಸೋಜ, ಉಭಯ ಶಾಲೆಗಳ ಮುಖ್ಯೋಪಾಧ್ಯಾಯರುಗಳಾದ ಶ್ರೀಮತಿ ವಿಜಯ ಕುಮಾರಿ ಮತ್ತು ಶ್ರೀಮತಿ ಉದಯ ಕುಮಾರಿ ಹಾಗೂ ಕೊಂಕಣಿ ಶಿಕ್ಷಕಿ ಸಿಲ್ವಿಯಾ ಲೋಬೊ ಉಪಸ್ಥಿತರಿದ್ದರು. ರಿಜಿಸ್ಟ್ರಾರ್ ಡಾ ಬಿ. ದೇವದಾಸ ಪೈ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಹ ಶಿಕ್ಷಕ ಶಿವರಾಮ ಆಚಾರ್ಯ ವಂದಿಸಿದರು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.
ಕು. ಜ್ಯೋತಿಕಾ ಕೊಂಕಣಿ ಕ್ಲಬ್ ಅಧ್ಯಕ್ಷೆಯಾಗಿಯೂ ಮತ್ತು ಮಿಲ್ಟನ್ ಕಾರ್ಯದರ್ಶಿಯಾಗಿ ನೇಮಕಗೊಂಡರು. ವರ್ಷಕ್ಕೆ 6 ಕಾರ್ಯಕ್ರಮಗಳನ್ನು ಮಾಡಿ ಮಕ್ಕಳಲ್ಲಿ ಕೊಂಕಣಿ ಬಗ್ಗೆ ಅರಿವು ಮೂಡಿಸುವ, ಕೊಂಕಣಿ ಕಲಿಕೆಗೆ ಪ್ರೋತ್ಸಾಹಿಸುವ ಸಲುವಾಗಿ ಈ ಕ್ಲಬ್‍ಗಳನ್ನು ಅಕಾಡೆಮಿ ಆಯ್ದ ಶಾಲೆಗಳಲ್ಲಿ ಆರಂಭಿಸುತ್ತದೆ.