ಮಂಗಳೂರು: ಉಸ್ತುವಾರಿ ಸಚಿವ ರಮಾನಾಥ ರೈ ಅವರನ್ನು ಉದ್ದೇಶಿಸಿ ಜಿಲ್ಲಾ ಪಂಚಾಯತ್ ಸದಸ್ಯರೋರ್ವರು ನಿದ್ದೆ ಮಾಡುವ ವ್ಯವಸ್ಥೆಯ ಸರಕಾರ ಎಂದು ವ್ಯಂಗ್ಯವಾಗಿ ನೀಡಿದ ಹೇಳಿಕೆ ಸಾಮಾನ್ಯ ಸಭೆಯಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾದ ಘಟನೆ ಮಂಗಳವಾರದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಜರುಗಿದೆ.
ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂ ಗಣದಲ್ಲಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅಧ್ಯಕ್ಷತೆ ಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ ಯಡಿ ದ.ಕ. ಜಿಲ್ಲೆಯಲ್ಲಿ ನಡೆದ ಕಾಮಗಾರಿಗಳ ಕುರಿತು ಚರ್ಚೆಯ ಸಂದರ್ಭ ಸದಸ್ಯರಾದ ನವೀನ್ ಕುಮಾರ ಮೇನಾಲ ಅವರು ಮಾತ ನಾಡಿ, ಈ ಯೋಜನೆಯಡಿ ಸುಳ್ಯದ ಶಾಸಕರ ಮುತುವರ್ಜಿಯಿಂದಾಗಿ ಸುಳ್ಯ ತಾಲೂಕಿನಲ್ಲಿ ಮಾತ್ರವೇ ಕಾಮಗಾರಿಗಳು ಉತ್ತಮ ರೀತಿಯಲ್ಲಿ ನಡೆದಿವೆ ಎಂದು ಹೇಳಿದರು. ಇದನ್ನು ಆಕ್ಷೇಪಿಸಿದ ಸದಸ್ಯ ಎಂ.ಎಸ್.ಮುಹಮ್ಮದ್, ಈ ರೀತಿ ಅಭಿವೃದ್ಧಿಯಲ್ಲಿ ರಾಜಕಾರಣ ಸರಿಯಲ್ಲ ಎಂದರು. ಈ ಸಂದರ್ಭ ಸದಸ್ಯರಾದ ಫಕೀರ ಮಾತನಾಡುತ್ತಾ, ಉಸ್ತು ವಾರಿ ಸಚಿವರು ವೌನವಾಗಿದ್ದಾರೆ. ನಿದ್ರೆ ಮಾಡುವ ವ್ಯವಸ್ಥೆಯ ಸರಕಾರದಿಂದ ಕೆಲಸ ಆಗುತ್ತಿಲ್ಲ ಎಂದು ಆಪಾದಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ.ನ. ಕಾಂಗ್ರೆಸ್ ಸದಸ್ಯರು, ಜಿಲ್ಲಾ ಸಚಿ ವರ ವಿರುದ್ಧ ಈ ರೀತಿಯ ಹೇಳಿಕೆ ಸರಿಯಲ್ಲ. ಫಕೀರ ಕ್ಷಮೆ ಯಾಚಿಸಬೇಕು ಎಂದರು. ಸದಸ್ಯೆ ಸರಸ್ವತಿ ಕಾಮತ್, ‘‘4 ವರ್ಷಗಳಲ್ಲಿ ಜಿಪಂನಲ್ಲಿ ನೀವು ಎಷ್ಟು ಕೆಲಸ ಮಾಡಿದ್ದೀರಿ’’ ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದರು. ಇದರಿಂದ ಕೆಲಹೊತ್ತು ಸಭೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಅಧ್ಯಕ್ಷರು ಸಮಾ ಧಾನಪಡಿಸಲೆತ್ನಿಸಿದರೂ ಪ್ರಯೋಜನವಾಗಲಿಲ್ಲ. ಮಾತ್ರವಲ್ಲದೆ, ಅಧ್ಯಕ್ಷರು ತಮ್ಮ ಪಕ್ಷದ ಸದಸ್ಯರ ಹೇಳಿಕೆಯನ್ನು ಪ್ರೋತ್ಸಾಹಿಸುವ ಮೂಲಕ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆಂಬ ಆರೋಪ ವಿಪಕ್ಷದ ಸದಸ್ಯರಿಂದ ಕೇಳಿ ಬಂತು. ಅಷ್ಟೊತ್ತಿಗೆ ಸಭೆಗೆ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಧ್ಯ ಪ್ರವೇಶಿಸಿ, ಸಭೆಯಲ್ಲಿ ಗೌರವಾನ್ವಿತ ಸಚಿವರ ಬಗ್ಗೆ ವೈಯಕ್ತಿಕ ದೂಷಣೆ ಸರಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯದ ಓರ್ವ ನಿಷ್ಠಾವಂತ, ಸಮರ್ಥ ಸಚಿವರು ಎಂದು ಹೇಳುವ ಮೂಲಕ ತಮ್ಮ ಪಕ್ಷದ ಸದಸ್ಯರನ್ನು ಸಮಾಧಾನಪಡಿಸಿದರು.
ಬಳಿಕ ಐವನ್ ಡಿಸೋಜ, ರಾಷ್ಟ್ರೀಯ ಮಾಧ್ಯ ಮಿಕ ಶಿಕ್ಷಣ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಉತ್ತರ ನೀಡಲು ಕೋರಿದರು. ಅಧಿಕಾರಿಗಳು ನೀಡಿದ ಮಾಹಿತಿ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತ ಪಡಿಸಿದರು. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ಕಾಮಗಾರಿ ಮಾಡದವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಸೂಚಿಸಿದರು. ಅಧ್ಯಕ್ಷರು ಈ ಬಗ್ಗೆ ಸರಕಾರದ ಗಮನ ಸೆಳೆ ಯುವಂತೆ ವಿಧಾನ ಪರಿಷತ್ ಸದಸ್ಯರನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಐವನ್ ಡಿಸೋಜ, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಪರಿಶೀಲನಾ ಸಭೆ ನಡೆಸುವಂತೆ ಕೋರುವುದಾಗಿ ಮತ್ತು ಈಗಾಗಲೇ ಆರಂಭಗೊಂಡಿರುವ ಕಾಮಗಾರಿ ಯನ್ನು ಪೂರ್ಣಗೊಳಿಸಲು ಸರಕಾರಕ್ಕೆ ಒತ್ತಡ ಹೇರುವುದಾಗಿ ನುಡಿದರು.
ಜಿಲ್ಲೆಯ ಹಲವೆಡೆ ಅನಗತ್ಯ ಕೊಳವೆಬಾವಿ ಕೊರೆಯಲಾಗಿದೆ. ಈ ಬಗ್ಗೆ ತನಿಖೆ ಆಗ ಬೇಕು ಎಂದು ಸದಸ್ಯ ಜನಾರ್ದನ ಗೌಡ ಆಗ್ರಹಿಸಿದರು.
ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಪ್ರತಿಕ್ರಿ ಯಿಸಿ, ಅನಗತ್ಯ ಬೋರ್‌ವೆಲ್ ಕೊರೆದಿ ದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು.
ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿ ಪಡೆಯುವ ಮಕ್ಕಳನ್ನು 8ರಿಂದ 9ನೆ ತರಗತಿಯ ವೇಳೆಗೆ ಏಕಾಏಕಿ ಟಿಸಿ ನೀಡಿ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಶಾಲೆಯವರು ಭಾಷಾ ಅಲ್ಪಸಂಖ್ಯಾತರು ಎಂದು ಹೇಳಿ ಆರ್‌ಟಿಐ ಸೀಟು ಮಕ್ಕಳಿಗೆ ದೊರೆ ಯದಂತೆ ಮಾಡುತ್ತಿದ್ದಾರೆ. ಸುಳ್ಯದಲ್ಲಿ ಇಂತಹ ಘಟನೆ ನಡೆದಿದ್ದು, ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯೆ ಸರಸ್ವತಿ ಕಾಮತ್ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ, ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಿಂದ ಆರ್‌ಟಿಇ ಕಾಯ್ದೆಯಡಿ ದಾಖಲಾದ ಮಕ್ಕಳ ತಡೆ ತೆರವಿಗೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಶಿಕ್ಷಣ ಇಲಾಖೆ ಹೋರಾಟ ನಡೆಸುತ್ತಿದೆ. ಮಾತ್ರವಲ್ಲದೆ, ಮಕ್ಕಳನ್ನು ಬೇರೆ ಶಾಲೆಗಳಿಗೆ ಕಳುಹಿಸಲು ಬಿಇಒಗಳ ಮೂಲಕವೇ ಟಿಸಿ ಕೊಡಿಸುವ ವ್ಯವಸ್ಥೆ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಮೀನಾಕ್ಷಿ ಮಂಜುನಾಥ್, ಸಿ.ಕೆ.ಚಂದ್ರಕಲಾ, ಬಾಲಕೃಷ್ಣ ಸುವರ್ಣ ಉಪಸ್ಥಿತರಿದ್ದರು.