ಮಂಗಳೂರು: ನ.30ರಿಂದ ಹಳೆ ಡಿಸಿ ಕಚೇರಿ ಕಟ್ಟಡದಲ್ಲಿ ಪಾರಂಪರಿಕ ಸಪ್ತಾಹ
ಮಂಗಳೂರು: ಹಲವಾರು ವರ್ಷಗಳ ಇತಿಹಾಸವುಳ್ಳ ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಕಟ್ಟಡದ ಆವರಣದಲ್ಲಿ ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು ಪಾರಂಪರಿಕ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಬಳಿಕ ಪಕ್ಕದಲ್ಲಿಯೇ ಹೊಸ ಕಟ್ಟಡವಾದ ಬಳಿಕ ಜಿಲ್ಲಾಧಿಕಾರಿ ಕಚೇರಿ ಅಲ್ಲಿಗೆ ಸ್ಥಳಾಂತರಗೊಂಡಿದ್ದರೂ, ಹಳೇ ಕಟ್ಟಡವನ್ನು ಹಾಗೆಯೇ ಉಳಿಸಿಕೊಂಡು ಬರಲಾಗಿದೆ. ಇಂದಿಗೂ ಗಟ್ಟಿಮುಟ್ಟಾಗಿ ಸುಭದ್ರ ಸ್ಥಿತಿಯಲ್ಲಿರುವ ಈ ಕಟ್ಟಡವು ಜಿಲ್ಲೆಯ ಆಡಳಿತ ಕ್ಷೇತ್ರದ ಭವ್ಯ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ.
ಈ ಕಟ್ಟಡದ ಪಾರಂಪರಿಕ ಮತ್ತು ಭವ್ಯ ಇತಿಹಾಸವನ್ನು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೇ ಸ್ಥಳದಲ್ಲಿ ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು ಪಾರಂಪರಿಕ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ.
ನವೆಂಬರ್ 30 ರಂದು ಬೆಳಿಗ್ಗೆ 10 ರಿಂದ ಸರಕಾರಿ ಶಾಲೆಗಳ 3 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಯಾವುದೇ ಪಾರಂಪರಿಕ ಸ್ಮಾರಕಗಳನ್ನು ಈ ಸ್ಪರ್ಧೆಯಲ್ಲಿ ಬಿಡಿಸಬಹುದಾಗಿದೆ. ಅಂದು ಮಧ್ಯಾಹ್ನ 2 ರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಳೇ ಜಿಲ್ಲಾಧಿಕಾರಿ ಕಟ್ಟಡದ ಒಳ ಮತ್ತು ಹೊರ ಭಾಗದ ಆವರಣದ ಬಗ್ಗೆ ತಮ್ಮ ದೃಷ್ಟಿಕೋನದ ಕಲಾವಿನ್ಯಾಸ ಸ್ಪರ್ಧೆ ನಡೆಯಲಿದೆ. ಈ ಕಟ್ಟಡವನ್ನು ಇನ್ನಷ್ಟು ಆಕರ್ಷಿಸಲು ನವೀನ ವಿನ್ಯಾಸವನ್ನು ಸ್ಪರ್ಧಾಳುಗಳು ತಮ್ಮ ಕಲೆಯಲ್ಲಿ ಪ್ರದರ್ಶಿಸಬಹುದಾಗಿದೆ.
ಬೆಳಿಗ್ಗೆ 11 ರಿಂದ 12 ಹಾಗೂ ಮಧ್ಯಾಹ್ನ 3 ರಿಂದ 4ರ ವರೆಗೆ ಪಾರಂಪರಿಕ ನಡಿಗೆ, ಸಂಜೆ 4:30 ರಿಂದ ಮುಕ್ತ ಸಂವಾದ ನಂತರ ಬಹುಮಾನ ವಿತರಣೆ, ಸಂಜೆ 6 ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಎರಡು ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಪಾರಂಪರಿಕ ವಸ್ತು ಪ್ರದರ್ಶನ ನಡೆಯಲಿದೆ.
ಮುಂದಿನ ದಿನಗಳಲ್ಲಿ ಈ ಪಾರಂಪರಿಕ ಕಟ್ಟಡದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು, ಪ್ರವಾಸೋದ್ಯಮ ಆಕರ್ಷಿಸುವ ನಿಟ್ಟಿನಲ್ಲಿ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.