ಮಂಗಳೂರು: ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ಬೀಡಿದ ಪೊಣ್ಣು ಎಂಬ ಟ್ಯಾಗ್ ಲೈನ್‍ನ ತುಳು ಚಲನಚಿತ್ರವು ಫೆಬ್ರವರಿ 5ರಂದು ತೆರೆ ಕಾಣಲಿದೆ. ಮಂಗಳೂರಿನಲ್ಲಿ ಸುಚಿತ್ರ, ಬಿಗ್ ಸಿನೆಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮಣಿಪಾಲದಲ್ಲಿ ಐನಾಕ್ಸ್ , ಬಿ.ಸಿ.ರೋಡ್‍ನಲ್ಲಿ ನಕ್ಷತ್ರ, ಪುತ್ತೂರುನಲ್ಲಿ ಅರುಣಾ ಚಿತ್ರಮಂದಿರದಲ್ಲಿ ಸಿನಿಮಾ ತೆರೆ ಕಾಣಲಿದೆ.
ಚೆನ್ನೈನಲ್ಲಿ ನೆಲೆಸಿರುವ ಮೂಲತಃ ಎರ್ಮಾಳ್ ನವರಾದ ಅನಂತರಾಮರಾವ್ ಎರ್ಮಾಳ್ ನಿರ್ಮಾಣದ ನಾಗವೆಂಕಟೇಶ್ ನಿರ್ದೇಶನದಲ್ಲಿ ಕನ್ನಡದಲ್ಲಿ ನೂರಾರು ಸಿನಿಮಾಗಳಲ್ಲಿ ಛಾಯಾಗ್ರಹಣ ಮಾಡಿರುವ ಜೆ.ಜಿ.ಕೃಷ್ಣ ಅವರ ಛಾಯಾಗ್ರಹಣ, ರಿಸೆಲ್ ಸಾಹಿ ಅವರ ಸಂಗೀತ, ಅಶೋಕ್‍ರಾಜ್ ಅವರ ನೃತ್ಯ ಈ ಸಿನಿಮಾಕ್ಕೆ ಇದೆ. ಸಿದ್ದರಾಜ್ ಅವರ ಸಾಹಸ ನಿರ್ದೇಶನದಲ್ಲಿ ಎರಡು ಸಾಹಸ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ಪವಿತ್ರ ಸಿನಿಮಾಕ್ಕೆ 23 ದಿನಗಳ ಕಾಲ ಒಂದೇ ಹಂತದಲ್ಲಿ ಮಂಗಳೂರು ಸುತ್ತಮುತ್ತ ಹಾಗೂ ಎರ್ಮಾಳ್, ಕಾಪು, ಕೂಳೂರು, ಹಳೆಯಂಗಡಿ ಜಪ್ಪು ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾದಲ್ಲಿ ಐದು ಹಾಡುಗಳಿವೆ.
ಕರಾವಳಿಯಲ್ಲಿ ಬೀಡಿ ಉದ್ಯಮ ಬಹು ದೂಡ್ಡ ಉದ್ಯಮವಾಗಿ ಬೆಳೆದಿದ್ದು ಇದರ ಹಿಂದಿನ ನಿಜವಾದ ಆಶಯ ಹಾಗು ಪ್ರಸಕ್ತ ಬದಲಾದ ಸನ್ನಿವೇಶವನ್ನು ಚಿತ್ರದಲ್ಲಿ ವಿಭಿನ್ನವಾಗಿ ಸೃಷ್ಠಿಸಲಾಗಿದೆ. ಒಂದು ಸಣ್ಣ ಕುಟುಂಬಕ್ಕೆ ಸೇರಿದ ಪವಿತ್ರ ಬೀಡಿ ಕಟ್ಟುತ್ತ ತನ್ನ ತಾಯಿಯನ್ನು ನೋಡಿ ಕೊಳ್ಳುತ್ತಿರುವಳು. ಇದೇ ಊರಿಗೆ ರೋಹಿತ್ ತನ್ನ ಗೆಳೆಯ ರಾಜನೊಂದಿಗೆ ಬರುತ್ತಾನೆ. ಆಕಸ್ಮಿಕವಾಗಿ ಇಬ್ಬರ ಮಿಲನದಿಂದ ಪ್ರೀತಿಗೆ ತಿರುಗಿ ಮದುವೆ ಮಟ್ಟಕ್ಕೆ ತಲುಪುತ್ತೆ. ಈ ಮಧ್ಯೆ ನಡೆಯುವ ಕೆಲವು ಘಟನೆಗಳಿಂದ ಪವಿತ್ರಳ ಬದುಕು ಹೊಸ ದಿಕ್ಕಿನತ್ತ ಸಾಗುತ್ತದೆ. ಅವಳು ಪ್ರೀತಿಸಿದವನನ್ನು ಮದುವೆಯಾಗುತ್ತಾಳಾ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕಾಗಿತ್ತದೆ.
ಹೊಸ ನಾಯಕಿ
ಪವಿತ್ರ ಸಿನಿಮಾದ ಮೂಲಕ ಚಿರಶ್ರೀ ಅಂಚನ್ ತುಳು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರು ಈಗಾಗಲೇ ತುಳುವಿನಲ್ಲಿ ರಂಬಾರೂಟಿ, ಕನ್ನಡದಲ್ಲಿ ಖ್ಯಾತ ನಟ ಉಪೇಂದ್ರ ಅವರ ಕಲ್ಪನಾ 2, ಅಲ್ಲದೆ ಉಡುಂಬಾ, ಫಕೀರ ಎಂಬ ಕನ್ನಡ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.ನಾಯಕ ನಟನಾಗಿ ಶ್ರವಂತ್ ಅಭಿನಯಿಸಿದ್ದಾರೆ. ಶ್ರವಂತ್ ಕನ್ನಡದ 3 ಸಿನಿಮಾದಲ್ಲಿ ನಟಿಸಿದ್ದಲ್ಲದೆ ಮಧುಬಾಲ, ವೈಷ್ಣವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ತುಳು ಸಿನಿಮಾರಂಗದ ದಿಗ್ಗಜರ ಸಮಾಗಮ
ಪವಿತ್ರ ಸಿನಿಮಾದಲ್ಲಿ ತುಳು ಸಿನಿಮಾರಂಗದ ದಿಗ್ಗಜರಾದ ಕುಸೇಲ್ದರಸೆ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಅಭಿನಯಿಸಿದ್ದಾರೆ. ಇನ್ನುಳಿದಂತೆ ಉಮೇಶ್ ಮಿಜಾರ್, ರಂಜನ್ ಬೋಳೂರು, ರಘು ಪಾಂಡೇಶ್ವರ್, ಮನೋಜ್ ಪುತ್ತೂರು, ಶೋಭಾ ರೈ, ವಿದ್ಯಾ, ಸುಪ್ರೀತ, ದೀಪಿಕಾ, ರಂಜಿತಾ ಶೇಟ್, ರಿತೇಶ್ ಮಂಗಳೂರು, ವಸಂತ್, ತಿಮ್ಮಪ್ಪ ಕುಲಾಲ್ ಮೊದಲಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಕತೆಯನ್ನು ನಿರ್ಮಾಪಕ ಅನಂತರಾಮ್ ರಾವ್ ಎರ್ಮಾಳ್ ಒದಗಿಸಿದ್ದಾರೆ. ಚಿತ್ರಕತೆ, ನಿರ್ದೇಶನ: ನಾಗವೆಂಕಟೇಶ್, ಸಾಹಿತ್ಯ ಸಂಭಾಷಣೆ: ರಂಜಿತ್ ಸುವರ್ಣ, ಚಿದಂಬರಂ ಪ್ರೋಡಕ್ಷನ್ ಉಸ್ತುವಾರಿಯಾಗಿರುತ್ತಾರೆ. ಸತೀಶ್ ಬ್ರಹ್ಮಾವರ ಯೂನಿಟ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.