ಮಂಗಳೂರು: ನಾಲ್ಕು ತಿಂಗಳ ಹಿಂದೆ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತೆಯಾಗಿ ಅಧಿಕಾರ ಸ್ವೀಕರಿಸಿದ ಹೆಬ್ಸಿಬಾ ರಾಣಿ ಕೋರ್ಲಪತಿಯವಿಗೆ ಮಂಗಳೂರು ನಗರ ಪೋಲಿಸ್ ಇಲಾಖೆ ಗನ್ಮ್ಯಾನ್ ಒದಗಿಸಿದೆ.
ತನ್ನ ಕಾರ್ಯನಿರ್ವಹಣೆಯಿಂದ ನಗರದ ಕಾರ್ಪೋರೇಟರ್ಗಳ ಕೆಂಗಣ್ಣಿಗೆ ಗುರಿಯಾಗಿರುವ ಆಯುಕ್ತೆ ಚುನಾಯಿತ ಜನಪ್ರತಿನಿಧಿಗಳಿಗೆ ಗೌರವ ನೀಡುತ್ತಿಲ್ಲ ಹಾಗೂ ಆಯುಕ್ತರ ಕಛೇರಿಯೊಳಗೆ ಪ್ರವೇಶಿಸಲು ಅನುಮತಿ ಪಡೆಯಬೇಕು ಎಂಬ ಆರೋಪಗಳನ್ನು ಮಾಡುತ್ತಿರುವ ಕಾರ್ಪೋರೇಟರ್ಗಳು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಭೇಟಿ ನೀಡಿದ ವೇಳೆ ಆಯುಕ್ತೆಯ ವಿರುದ್ದ ದೂರನ್ನು ಸಲ್ಲಿಸಿದ್ದರು. ಆಯುಕ್ತರು ಕಾರ್ಪೋರೇಟರ್ಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಕೆಲಸ ನಿರ್ವಹಿಸುತ್ತಿರುವುದರಿಂದ ತುರ್ತು ಅಭಿವೃದ್ದಿ ಕಾರ್ಯಗಳು ವಿಳಂಬವಾಗುತ್ತಿದೆ ಎಂದು ಸದಸ್ಯರು ಆರೋಪಿಸಿದ್ದರು.
ಈ ಬೆಳವಣಿಗೆಯ ಹಿನ್ನಲೆಯಲ್ಲಿ ಆಯುಕ್ತೆ ಮಂಗಳೂರು ನಗರ ಪೋಲಿಸ್ ಆಯುಕ್ತರಿಗೆ ಪತ್ರ ಬರೆದು ಭದ್ರತೆ ಒದಗಿಸುವಂತೆ ಕೋರಿದ್ದು, ಮಂಗಳೂರು ನಗರ ಪೋಲಿಸ್ ಆಯುಕ್ತ ಎಸ್ ಮುರುಗನ್ ಆಯುಕ್ತೆಯ ಭದ್ರತೆಯ ದೃಷ್ಟಿಯಿಂದ ಗನ್ಮ್ಯಾನ್ ಒದಗಿಸಿದ್ದಾರೆ. ಈ ರೀತಿ ಗನ್ಮ್ಯಾನ್ ಒದಗಿಸಿರುವುದು ಮಂಗಳೂರು ಪಾಲಿಕೆಯ ಇತಿಹಾಸದಲ್ಲಿ ಪ್ರಥಮವಾಗಿದೆ.