Home Mangalorean News Kannada News ಮಂಗಳೂರು: ಪಾಲಿಕೆ ವತಿಯಿಂದ ಅಗತ್ಯ ವಸ್ತು ಪೊರೈಕೆ ತಂಡ ರಚನೆ

ಮಂಗಳೂರು: ಪಾಲಿಕೆ ವತಿಯಿಂದ ಅಗತ್ಯ ವಸ್ತು ಪೊರೈಕೆ ತಂಡ ರಚನೆ

Spread the love

ಮಂಗಳೂರು: ಪಾಲಿಕೆ ವತಿಯಿಂದ ಅಗತ್ಯ ವಸ್ತು ಪೊರೈಕೆ ತಂಡ ರಚನೆ

ಮಂಗಳೂರು: ನಗರದ 60 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮನೆಗಳಿಗೆ ನೇರವಾಗಿ ದಿನಸಿ ಹಾಗೂ ತರಕಾರಿಯನ್ನು ಸರಬರಾಜು ಮಾಡಲು ಸಿದ್ಧವಾಗಿರುವ ಸುಮಾರು 200 ಅಂಗಡಿಗಳ ಪಟ್ಟಿಯನ್ನು ಮಂಗಳೂರು ಮಹಾನಗರ ಪಾಲಿಕೆಯು ಬಿಡುಗಡೆ ಮಾಡಿದೆ.

ಭಾನುವಾರ ನಗರದ ಪಾಲಿಕೆಯ ಮಂಗಳ ಸಭಾಂಗಣದಲ್ಲಿ ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ಕುಮಾರ್‌ ಹೆಗ್ಡೆ, ಸೂಪರ್‌ ಮಾರ್ಕೆಟ್‌, ದಿನಸಿ ಅಂಗಡಿ ಮಾಲೀಕರ ಸಭೆ ನಡೆಸಿದ್ದಾರೆ.

ಅಪಾರ್ಟ್‌ಮೆಂಟ್‌ ಅಸೋಸಿಯೇಶನ್‌ಗಳು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿರುವ ಎಲ್ಲ ಮನೆಗಳಿಗೆ ಬೇಕಾಗುವ ದಿನಸಿಯನ್ನು ಸಂಗ್ರಹ ಮಾಡಿ ಎಲ್ಲ ಮನೆಗಳಿಗೆ ಹಂಚಬೇಕು. ಸೋಮವಾರದಿಂದ ಈ ಸರಬರಾಜು ಕಾರ್ಯ ಆರಂಭವಾಗಲಿದ್ದು, ನಗರದ 60 ವಾರ್ಡ್‌ಗಳಿಗೆ ದಿನಸಿ ಸರಬರಾಜು ಮಾಡಲು 20 ಗುಂಪುಗಳನ್ನು ಮಾಡಲಾಗಿದೆ.

ಪಾಲಿಕೆಯಿಂದ ನಗರದಲ್ಲಿರುವ ಬಡವರಿಗೆ, ಭಿಕ್ಷುಕರಿಗೆ ಹಾಗೂ ನಿರಾಶ್ರಿತರಿಗೆ ಆಹಾರ ಸರಬರಾಜು ಮಾಡುವ ನಿರ್ಧಾರವನ್ನೂ ಕೈಗೊಂಡಿದೆ.

ಈ ಕುರಿತು ಮಾಹಿತಿ ನೀಡಿದ ಅಜಿತ್‌ಕುಮಾರ್‌ ಹೆಗ್ಡೆ, ‘ರಸ್ತೆಯಲ್ಲೇ ಇರುವ ಹಲವು ಬಡಜನರಿಗೆ, ಭಿಕ್ಷುಕರಿಗೆ ಈಗ ಆಹಾರವಿಲ್ಲ. ಹಲವು ಸಂಘ ಸಂಸ್ಥೆಗಳು ಹಾಗೂ ಎನ್‌ಜಿಒಗಳು ನಮ್ಮೊಂದಿಗೆ ಕೈಜೋಡಿಸಲು ಮುಂದಾಗಿವೆ. ಹಾಗಾಗಿ ದಾನಿಗಳು ಹಾಗೂ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ನಾವು ಬಡವರಿಗೆ, ಭಿಕ್ಷುಕರಿಗೆ ಆಹಾರ ಸರಬರಾಜು ಮಾಡಲು ನಿರ್ಧಾರ ಮಾಡಿದ್ದೇವೆ. ಹಾಗೆಯೇ ನಾವು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಿನೇಶ್‌ ಕುಮಾರ್‌ ನೇತೃತ್ವದಲ್ಲಿ ಕೊರೊನಾ ಸಹಾಯವಾಣಿ ಕೇಂದ್ರವನ್ನು ಸ್ಥಾಪನೆ ಮಾಡಿದ್ದೇವೆ’ ಎಂದು ತಿಳಿಸಿದರು.

ಅಧಿಕಾರಿಗಳ ನೇಮಕ: ಜಿಲ್ಲೆಯಲ್ಲಿ ಲಾಕ್‌ಡೌನ್‌ ಘೋಷಿಸಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯ ಜನರಿಗೆ ಅಗತ್ಯ ಸಾಮಗ್ರಿಗಳನ್ನು ಯಾವುದೇ ಅಡಚಣೆ ಇಲ್ಲದೇ ಪೂರೈಸಲು ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ನೋಡೆಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದೈನಂದಿನ ಬಳಕೆಗೆ ಬೇಕಾಗುವ ವಸ್ತುಗಳನ್ನು ಮನೆ ಮನೆಗೆ ಪೂರೈಸಲು ಅಗತ್ಯ ವ್ಯವಸ್ಥೆ ಮಾಡುವಂತೆ ನೋಡಿಕೊಳ್ಳಲು ಪಾಲಿಕೆ ಆಯುಕ್ತ ಅಜಿತ್‌ಕುಮಾರ್ ಹೆಗ್ಡೆ (ಮೊ.ಸಂ. 9449559122), ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್‌ ನಜೀರ್‌ (ಮೊ.ಸಂ. 9449221435), ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ಕಾರ್ಯದರ್ಶಿ (ಮೊ.ಸಂ. 9448067681) ಅವರನ್ನು ನೋಡೆಲ್‌ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ.

ಪಾಲಿಕೆ ವ್ಯಾಪ್ತಿ ಹೊರತುಪಡಿಸಿ, ಜಿಲ್ಲೆಯ ಉಳಿದ ಭಾಗಗಳಿಗೆ ಮಂಗಳೂರು ಉಪ ವಿಭಾಗಾಧಿಕಾರಿ ಮದನ್‌ ಮೋಹನ್‌ (ಮೊ.ಸಂ. 9900111150), ಪುತ್ತೂರು ಉಪ ವಿಭಾಗಾಧಿಕಾರಿ ಡಾ.ಯತೀಶ್‌ ಉಳ್ಳಾಲ (ಮೊ.ಸಂ. 9535618438) ಅವರನ್ನು ನೇಮಿಸಲಾಗಿದೆ.

ಈ ಅಧಿಕಾರಿಗಳು ಹೋಲ್‌ಸೇಲ್‌ ಮತ್ತು ರಿಟೇಲ್‌ ಸರಬರಾಜಿನಲ್ಲಿ ವ್ಯತ್ಯಾಸ ಆಗದಂತೆ ನೋಡಿ ಕೊಳ್ಳಬೇಕು. ಅಗತ್ಯ ವಸ್ತುಗಳಿಗೆ ಹೆಚ್ಚಿನ ದರ ವಸೂಲಿ ಮಾಡದಂತೆ ಕ್ರಮ ಕೈಗೊಳ್ಳಬೇಕು. ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ಸಂದರ್ಭದಲ್ಲಿ ಸರಬರಾಜು ದಾರರು ಮಾಸ್ಕ್‌ ಇತ್ಯಾದಿ ಧರಿಸಿ, ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.


Spread the love

Exit mobile version