ಮಂಗಳೂರು: ರಾಜ್ಯದ ವಿವಿಧ ಅಕಾಡಮಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಗರದ ಹೊರವಲಯದ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಶುಕ್ರವಾರ ನಡೆದ ಸಂಗಮ ಸಂಭ್ರಮದಲ್ಲಿ ತುಳು, ಬ್ಯಾರಿ, ಕೊಂಕಣಿ ಭಾಷೆಗಳ ಕಲರವ ಕೇಳಿ ಬಂತು. ತ್ರಿ ಭಾಷೆಗಳ ನೂರಾರು ಕಲಾವಿದರು ಎಸ್. ಯು. ಪಣಿಯಾಡಿ ವೇದಿಕೆಯಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿ ಪ್ರೇಕ್ಷಕರ ಮನರಂಜಿಸಿದರು. ಕಿರಿಯರಿಂದ ಹಿಡಿದು ಹಿರಿಯರು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಂಯೋಜನೆಯಲ್ಲಿ “ತುಳು ಐಸಿರಿ” ಕಾರ್ಯಕ್ರಮವನ್ನು ಮೈಮ್ ರಾಮದಾಸ್ ಮತ್ತು ತಂಡ ತುಳು ಹಾಡುಗಳನ್ನು ಹಾಡಿ, ಪ್ರಹಸನ ನಡೆಸಿಕೊಟ್ಟಿತು. ಬೇಬಿ ಸಾನ್ವಿ ನೃತ್ಯ ಎಲ್ಲರ ಮನ ಸೂರೆಗೊಂಡಿತು. ತುಳು ಅಕಾಡೆಮಿ ಅಧ್ಯಕ್ಷೆ ಎಂ ಜಾನಕಿ ಬ್ರಹ್ಮಾವರ ಸ್ವಾಗತಿಸಿ, ತುಳು ಅಕಾಡೆಮಿ ಸದಸ್ಯೆ ರೂಪಕಲಾ ಆಳ್ವ ಕಾರ್ಯಕ್ರಮ ನಿರ್ವಹಿಸಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಸಂಯೋಜನೆಯಲ್ಲಿ “ಕೊಂಕ್ಣಿ ಸಂಭ್ರಮ್” ಕಾರ್ಯಕ್ರಮದಲ್ಲಿ ರೊಜಾರಿಯೊ, ಪಾದುವಾ, ಸಂತ ಎಲೋಶಿಯಸ್ ಕಾಲೇಜಿನ ಕೊಂಕಣಿ ಕ್ಲಬ್‍ಗಳ ವಿದ್ಯಾರ್ಥಿಗಳು ವಿವಿಧ ಕೊಂಕಣಿ ಹಾಡುಗಳನ್ನು, ನೃತ್ಯಗಳನ್ನು, ಹಾಸ್ಯ ಪ್ರಹಸನಗಳನ್ನು ನಡೆಸಿಕೊಟ್ಟರು. ಅನಿಲ್ ಪಿಂಟೊ ಮತ್ತು ಪ್ರೀವಲ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಮೊದಲು ಶಿಕ್ಷಕ ರಾಮನಾಥ ಮೇಸ್ತ ರಚಿಸಿರುವ ಕೊಂಕಣಿ ಅಕಾಡಮಿ ಪ್ರಕಟಿಸಿದ 30ನೆ ಕೃತಿ “ಮೇಸ್ತ”ವನ್ನು ವಂ. ಮಾರ್ಕ್ ವಾಲ್ಡರ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಅಕಾಡಮಿಯ ತ್ರೈಮಾಸಿಕ ಸುದ್ದಿ ಸಂಚಿಕೆ “ಕೊಂಕಣಿ ಸಿರಿಸಂಪದ”ವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ಕೆ.ಎ. ದಯಾನಂದ ಬಿಡುಗಡೆಗೊಳಿಸಿದರು. ಅಕಾಡಮಿ ಅಧ್ಯಕ್ಷ ರೊಯ್ ಕ್ಯಾಸ್ಟಲಿನೊ ಸ್ವಾಗತಿಸಿದರು.
ನಂತರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸಂಯೋಜನೆಯಲ್ಲಿ “ಪೆರ್ನಾಲ್ ಸಂದೋಲ” ಕಾರ್ಯಕ್ರಮ ನಡೆಯಿತು. ಬ್ಯಾರಿ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞÂ “ಮಾನವ ಸಮುದಾಯ ಮತ್ತು ಸ್ವಸ್ಥ ಸಮಾಜ” ಎಂಬ ವಿಷಯದಲ್ಲಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ಕೆ.ಎ. ದಯಾನಂದ “ಪೆರ್ನಾಲ್ ಸಂದೋಲ’ ವಿಡಿಯೊ ಆಲ್ಬಂ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ, ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಷಾ, ಹಿರಿಯ ವಿದ್ವಾಂಸ ಪ್ರೊ. ಎ.ವಿ. ನಾವಡ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾಧಿಕಾರಿ ಉಸ್ಮಾನ್ ಎ., ಅಬುದಾಬಿ ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಭಾಗವಹಿಸಿದ್ದರು. ಕೊಂಕಣಿ ಅಕಾಡಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ತುಳು ಅಕಾಡಮಿಯ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ, ಲಲಿತಾ ಕಲಾ ಅಕಾಡಮಿಯ ಅಧ್ಯಕ್ಷ ಎಂ.ಎಸ್.ಮೂರ್ತಿ, ಕೊಂಕಣಿ ಅಕಾಡಮಿಯ ರಿಜಿಸ್ಟ್ರಾರ್ ಡಾ. ಬಿ. ದೇವದಾಸ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಕಾಡೆಮಿಯ ಸದಸ್ಯ ಅಬ್ಬಾಸ್ ಕಿರುಗುಂದ ಸ್ವಾಗತಿಸಿದರು. ರಿಜಿಸ್ಟ್ರಾರ್ ಉಮರಬ್ಬ ಪ್ರಾಸ್ತಾವಿಸಿದರು. ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಆಡಿಯೋ ಹಾಡುಗಳನ್ನು ಶೌಕತ್ ಪಡುಬಿದ್ರಿ, ಶಮೀರ್ ಮೂಲ್ಕಿ, ಬಶೀರ್ ಅಹ್ಮದ್ ಕಿನ್ಯ, ಮುಹಮ್ಮದ್ ಇಕ್ಬಾಲ್ ಕಾಟಿಪಳ್ಳ, ಅಶ್ರಫ್ ಅಪೋಲೊ, ರಿಯಾಝ್ ಕಲ್ಲಡ್ಕ, ಶರೀಫ್ ಬೊಳಂತೂರು ಹಾಡಿದರು. ಇದೇ ವೇಳೆ ದಫ್ ಪ್ರದರ್ಶನ ನಡೆಯಿತು.