ಮಂಗಳೂರು: ಈ ವರ್ಷದ ಪಿ.ಯು.ಸಿ. ಫಲಿತಾಂಶದಲ್ಲಿ ಒಟ್ಟು ಶೇಕಡಾವಾರು ಫಲಿತಾಂಶ ಸುಧಾರಣೆಯಾಗಿದ್ದರೂ ದ್ವಿತೀಯ ಪಿ.ಯು.ಸಿ. ಪರೀಕ್ಷಾ ದಿನಗಳಿಂದ ಪ್ರಾರಂಭಗೊಂಡು ಇಂದಿನವರೆಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಕಾರ್ಯವೈಖರಿ ಸಾರ್ವಜನಿಕರಲ್ಲಿ ಆತಂಕ ಹಾಗೂ ಗೊಂದಲವನ್ನು ಸೃಷ್ಟಿಸಿದೆ. ವಿದ್ಯಾರ್ಥಿಗಳ ಹಾಗೂ ಅವರ ಪೆÇೀಷಕರ ಗೊಂದಲವನ್ನು ನಿವಾರಿಸುವಲ್ಲಿ ಇಲಾಖೆ ಹಾಗೂ ಸರ್ಕಾರ ತೋರುತ್ತಿರುವ ಬೇಜವಬ್ದಾರಿ ದೋರಣೆಯನ್ನು ತೀವ್ರವಾಗಿ ಖಂಡಿಸುತ್ತಾ ಮಾನ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು ಈ ಕುರಿತು ಕೈಚೆಲ್ಲಿ ಸುಮ್ಮನೆ ಕುಳಿತುಕೊಳ್ಳದೆ ಶೀಘ್ರ ಪರಿಹಾರ ಕೈಗೊಳ್ಳಲು ಗಮನ ಹರಿಸುವಂತೆ ಒತ್ತಾಯಿಸುತ್ತೇನೆ.
ಪರೀಕ್ಷಾ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆಗಳಲ್ಲಿ ಉಂಟಾದ ಗೊಂದಲ, ಗ್ರೇಸ್ ಮಾರ್ಕ್ ನೀಡಿಕೆ ನಿರ್ಣಯ ಹಾಗೂ ಹಂಚಿಕೆ ಗೊಂದಲ, ಆನ್ ಲೈನ್ ಫಲಿತಾಂಶ ಪ್ರಕಟಣೆಯಲ್ಲಿನ ಗೊಂದಲ, ಸಣ್ಣಇತಿಮಿತಿಯೊಳಗೆ ಇರುತ್ತಿದ್ದ ಮೌಲ್ಯಮಾಪನ ಗೊಂದಲಕ್ಕೆ ವಿರುದ್ಧವಾಗಿ ಈ ಬಾರಿ ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳು ತಾವು ಪಡೆದಿರುವ ಅಂಕಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವುದು ಇಲಾಖೆಯ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ.
ಕಳೆದ ಕೆಲವು ದಿನಗಳಿಂದ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಕಛೇರಿಯ ಮುಂದೆ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟವನ್ನು ನಡೆಸುತ್ತಿದ್ದರೂ ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿರುವ ಸರ್ಕಾರದ ಬೇಜವಬ್ದಾರಿ ದೋರಣೆಯನ್ನು ಖಂಡಿಸುತ್ತಾ, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಡುತ್ತಿರುವ ಚೆಲ್ಲಾಟವನ್ನು ನಿಲ್ಲಿಸಿ ತೀರ್ಥಹಳ್ಳಿಯನ್ನು ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡಿರುವ ಮಾನ್ಯ ಶಿಕ್ಷಣ ಸಚಿವರು ತಮ್ಮ ಕೇಂದ್ರ ಸ್ಥಾನವನ್ನು ಪದವಿಪೂರ್ವ ಶಿಕ್ಷಣ ಇಲಾಖೆಗೆ ಕೂಡಲೇ ವರ್ಗಾಯಿಸಿ, ಹೆತ್ತವರ ಹಾಗೂ ವಿದ್ಯಾರ್ಥಿಗಳ ಆತಂಕವನ್ನು ದೂರಗೊಳಿಸಬೇಕು. ಮರುಮೌಲ್ಯಮಾಪನ ಹಾಗೂ ಸಿಇಟಿ ಕೌನ್ಸೆಲಿಂಗ್ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪರವಾಗಿ ನಿರ್ಣಯ ಕೈಗೊಂಡು ತಮ್ಮ ಇಲಾಖೆಯಲ್ಲಿ ಆಗುತ್ತಿರುವ ಪ್ರಮಾದಗಳಿಗೆ ಪರಿಹಾರ ಒದಗಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ.