Home Mangalorean News Kannada News ಮಂಗಳೂರು ಪುರಭವನದಲ್ಲಿ ಜೂನ್ 8 ರಂದು ಸನಾತನ ಯಕ್ಷಾಲಯ, ದಶಮಾನೋತ್ಸವ

ಮಂಗಳೂರು ಪುರಭವನದಲ್ಲಿ ಜೂನ್ 8 ರಂದು ಸನಾತನ ಯಕ್ಷಾಲಯ, ದಶಮಾನೋತ್ಸವ

Spread the love

ಮಂಗಳೂರು ಪುರಭವನದಲ್ಲಿ ಜೂನ್ 8 ರಂದು ಸನಾತನ ಯಕ್ಷಾಲಯ, ದಶಮಾನೋತ್ಸವ

ಮಂಗಳೂರು: ಸನಾತನ ಯಕ್ಷಾಲಯ, ಮಂಗಳೂರು ಇದರ ದಶಸಂವತ್ಸರೋತ್ಸವ, ಪೂರ್ವರಂಗ, ರಂಗಪ್ರವೇಶ, ಯಕ್ಷಗಾನ ಪ್ರದರ್ಶನ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಜೂನ್ 8 ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದೆ.

ಮಂಗಳೂರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕಲಾವಿದರಾದ ರಾಧಾಕೃಷ್ಣ ನಾವಡ ಮಧೂರು, ಒಂಭತ್ತು ವಸಂತಗಳನ್ನು ಯಶಸ್ವಿಯಾಗಿ ಪೂರೈಸಿದ ಮಂಗಳೂರಿನ ಸನಾತನ ಯಕ್ಷಾಲಯ ಸಂಸ್ಥೆಗೆ ಇದೀಗ ಹತ್ತನೇ ವರ್ಷದ ಸಂಭ್ರಮ. ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರ ಸಾಲಿನಲ್ಲಿ ನಿಲ್ಲಬಲ್ಲ ಯುವ ಕಲಾವಿದ, ಯಕ್ಷಗುರು ರಾಕೇಶ್ ರೈ ಅಡ್ಕರವರ ಕನಸಾದ, ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷ ಕಲೆಯನ್ನು ಧಾರೆಯೆರೆಯುವ ಉದಾತ್ತ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ, ಹಲವಾರು ಸಾಧನೆಗಳೊಂದಿಗೆ ನೂರಾರು ಯುವ ಪ್ರತಿಭೆಗಳನ್ನು ಪಳಗಿಸಿ ಯಕ್ಷ ಕಲಾಮಾತೆಯ ಮಡಿಲಿಗೆ ಅರ್ಪಿಸಿದ ಹೆಮ್ಮೆಯೊಂದಿಗೆ ಇದೀಗ ತನ್ನ ಹತ್ತನೆಯ ವಾರ್ಷಿಕೋತ್ಸವವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸುವ ಕಾತರದಲ್ಲಿದೆ ಎಂದು ಹೇಳಿದರು.

ಸನಾತನ ಯಕ್ಷಾಲಯದ ಸದಸ್ಯರಾದ ರಾಧಾಕೃಷ್ಣ ರೈ ನುಳಿಯಾಲು, ಮಾತನಾಡಿ ದಶಸಂವತ್ಸರೋತ್ಸವ-ಹತ್ತೇರಿದ ಈ ಹೊತ್ತು ಎಂಬ ವಿಶಿಷ್ಟವಾದ ಶೀರ್ಷಿಕೆಯೊಂದಿಗೆ, ಹಲವು ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಜೂನ್ 8ರ ಶನಿವಾರ ಅಪರಾಹ್ನ 4.00 ಗಂಟೆಯಿಂದ ತೊಡಗಿ ಮರುದಿನ ಜೂನ್ 9 ರ ಭಾನುವಾರ ಬೆಳ್ಳಿಗೆ 6.00 ಗಂಟೆಯ ತನಕ ನಡೆಯುವ ಸಂಭ್ರಮಕ್ಕೆ ಮಂಗಳೂರಿನ ಪುರಭವನದ ವೇದಿಕೆ ಸಾಕ್ಷಿಯಾಗಲಿದೆ. ಸಮಾರಂಭದಲ್ಲಿ ಎಳೆಯ ಯಕ್ಷ ಪ್ರತಿಭೆಗಳಿಂದ ಪೂರ್ವರಂಗ, ರಂಗ ಪ್ರವೇಶ, ಯಕ್ಷಗಾನ ಪ್ರದರ್ಶನ, ಮಾತ್ರವಲ್ಲದೆ, ಸನ್ಮಾನ, ಸಹಕಾರ ಸ್ಮರಣೆ, ಗೌರವಾರ್ಪಣೆ, ಹಾಗೂ ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ ಇತ್ಯಾದಿ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ ಎಂದರು.

ಕಾರ್ಯಕ್ರಮಗಳು
ಜೂನ್ 8,2019 ರ ಶನಿವಾರ ಸಂಜೆ 4.00 ಗಂಟೆಗೆ ರಾಕೇಶ್ ರೈ ಅಡ್ಕರವರ ಶಿಷ್ಯವೃಂದದಿಂದ ಯಕ್ಷಗಾನ ಪೂರ್ವರಂಗ ಪ್ರದರ್ಶನ, ನೂತನ ವಿದ್ಯಾರ್ಥಿಗಳ ರಂಗ ಪ್ರವೇಶದೊಂದಿಗೆ 5.00 ಗಂಟೆಯಿಂದ ಮಾತೃಕಾ ಮಹಿಮೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಆ ನಂತರ ರಾತ್ರಿ 7.00ಗಂಟೆಯಿಂದ ಹಿರಿಯ ಯಕ್ಷಗಾನ ವಿದ್ವಾಂಸರಾದ ಶ್ರೀಯುತ ಡಾ| ಎಂ ಪ್ರಭಾಕರ ಜೋಷಿಯವರ ಘನ ಅಧ್ಯಕ್ಷತೆಯೊಂದಿಗೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಯುತ ಡಾ| ಎಂ. ಮೋಹನ ಆಳ್ವರವರಿಂದ, ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಲ್ಪಡುವ ಸಭಾ ಕಾರ್ಯಕ್ರಮದಲ್ಲಿ ಅಂ. ಶಾಂತರಾಮ ಶೆಟ್ಟಿ, ಶ್ರೀಯುತ ಚಿತ್ತರಂಜನ್ ಶೆಟ್ಟಿ, ನುಳಿಯಾಲು ಗುತ್ತು, ಶ್ರೀಯುತ ಪ್ರಸನ್ನ ಆಚಾರ್ಯ ನಿಟ್ಟೆ, ಶ್ರೀ ಪದ್ಮನಾಭ ಕೋಟ್ಯಾನ್ ಪೆಲತ್ತಡಿ, ಶ್ರೀ ಸಂತೋಷ್ ಕುಮಾರ್ ಶೆಟ್ಟಿ, ಮಾತಾ ಡೆವಲಪರ್ಸ್, ಶ್ರೀ ಓಂ ಪ್ರಕಾಶ್ ಶೆಟ್ಟಿ, ಶ್ರೀ ನಾಗೇಶ್ ಕೋಟ್ಯಾನ್,ಶ್ರೀಯುತ ಆನಂದ ಬಂಗೇರ, ಶ್ರೀಯುತ ಶ್ರೀಪಾದ ಹೆಬ್ಬಾರ್, ಶ್ರೀ ರಾಜಕುಮಾರ್ ಶೆಟ್ಟಿ, ಶ್ರೀ ದಿನೇಶ್ ಶೆಟ್ಟಿ, ಅಂ ಸುನೀಲ್ ಭಂಡಾರಿ, ಶ್ರೀಯುತ ಮೋಹನ್ ಶೆಟ್ಟಿ ಮರೋಳಿ ಪದವು, ಶ್ರೀಯುತ ಗಿರೀಶ್ ಎಂ. ಶೆಟ್ಟಿ ಕಟೀಲ್, ಮುಂತಾದ ಗಣ್ಯರು ಉಪಸ್ಥಿತರಿರಲಿದ್ದಾರೆ.

ಸನ್ಮಾನ : ಸಭಾಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಪ್ರಸಂಗ ಕರ್ತರೂ, ಹಿಮ್ಮೇಳ ಗುರುಗಳೂ ಆದಂತಹ ಯಕ್ಷಛಾಂದಸ ಶ್ರೀಯುತ ಗಣೇಶ ಕೊಲೆಕಾಡಿ,ಗಣೇಶ ಕಲಾವೃಂದ ಪೈವಳಿಕೆ ಇದರ ನೇಪಥ್ಯ ಕಲಾವಿದರಾದ ಶ್ರೀಯುತ ಜಯಂತ ಮತ್ತು ಪ್ರಸಾದನ ಕಲಾವಿದರಾದ ಶ್ರೀಯುತ ಜನಾರ್ಧನ ಎನ್. ಇವರನ್ನು ಸನ್ಮಾನಿಸಲಾಗುವುದು.

ಸಹಕಾರ ಸ್ಮರಣೆ: ಸನಾತನ ಯಕ್ಷಾಲಯದ ಈ ತನಕದ ಬೆಳವಣಿಗೆಯಲ್ಲಿ ಯಕ್ಷಗುರು ರಾಕೇಶ್ ರೈ ಅಡ್ಕರವರೊಂದಿಗೆ ಕೈ ಜೋಡಿಸಿ ಸಹಕರಿಸಿದ ಆಯ್ದ ಸಹೃದಯರನ್ನು ಗೌರವಿಸಲಾಗುವುದು.
ಪ್ರತಿಭಾ ಪುರಸ್ಕಾರ: ಈ ಸಂದರ್ಭದಲ್ಲಿ ರಾಕೇಶ್ ರೈ ಅಡ್ಕರವರ ಶಿಷ್ಯರಾಗಿ ಯಕ್ಷರಂಗದಲ್ಲಿ ಪ್ರತಿಭಾವಂತರಾಗಿ ಬೆಳಗುವುದು ಮಾತ್ರವಲ್ಲದೆ, ಶೈಕ್ಷಣಿಕ ಮತ್ತು ಇತರ ಕ್ಷೇತ್ರಗಳಲ್ಲೂ ಅತ್ಯುತ್ತಮ ಸಾಧನೆ ಮಾಡುತ್ತಿರುವ, ಕು| ವೃಂದಾ ಕೊನ್ನಾರ್, ಕು| ಕೃತಿ ವಿ.ರಾವ್, ಕು| ಎನ್. ಆರ್. ಅನನ್ಯಾ ರೈ, ಮತ್ತು ಕು| ವಿಂದ್ಯಾ ಆಚಾರ್ಯ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಪುರಸ್ಕರಿಸಲಾಗುವುದು.

ಯಕ್ಷಗಾನ ಪ್ರದರ್ಶನ: ರಾತ್ರಿ ಗಂಟೆ 9.30 ರಿಂದ ಮರುದಿನ ಬೆಳ್ಳಿಗ್ಗೆ 6.00 ಗಂಟೆಯ ತನಕ, ಸನಾತನ ಯಕ್ಷಾಲಯದ ಸುಮಾರು 153 ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಂದ ಶ್ರೀಯುತ ರಾಕೇಶ್ ರೈ ಅಡ್ಕರವರ ನಿರ್ದೇಶನದಲ್ಲಿ ದಶಾವತಾರಂ ಎಂಬ ಪುರಾಣ ಪುಣ್ಯ ಕಥಾ ಭಾಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಶ್ರೀಮನ್ನಾರಾಯಣನು ಲೋಕ ಕಲ್ಯಾಣಕ್ಕಾಗಿ ಎತ್ತಿದ ಸಂಪೂರ್ಣ ಹತ್ತೂ ಅವತಾರಗಳ ಪ್ರದರ್ಶನವನ್ನು ಮತ್ಸ್ಯ, ವರಾಹ, ನರಸಿಂಹ, ಕೂರ್ಮ, ವಾಮನ, ಭಾರ್ಗವ, ರಾಮ, ಕೃಷ್ಣ, ಬುದ್ಧ, ಕಲ್ಕಿ ಎಂಬ ಅವತಾರ ದಶಗಳ ಅನುಕ್ರಮಣಿಕೆಯಲ್ಲಿ ಪ್ರದರ್ಶಿಸಲಾಗುವುದು.

ಈ ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಭಾಗವತರುಗಳಾದ ಶ್ರೀಯುತ ಪಟ್ಲ ಸತೀಶ್ ಶೆಟ್ಟಿ, ಶ್ರೀ ಪುಂಡಿಕಾ ಗೋಪಾಲಕೃಷ್ಣ ಭಟ್, ಶ್ರೀಯುತ ಪ್ರಫುಲ್ಲ ಚಂದ್ರ ನೆಲ್ಯಾಡಿ, ಯವರು ಉಪಸ್ಥಿತರಿದ್ದರೆ, ಚೆಂಡೆ ಮದ್ದಳೆಯಲ್ಲಿ ಶ್ರೀ ಮುರಾರಿ ಕಡಂಬಳಿತ್ತಾಯ, ಶ್ರೀ ನೆಕ್ಕರೆ ಮೂಲೆ ಗಣೇಶ್ ಭಟ್, ಶ್ರೀ ಸುಬ್ರಹ್ಮಣ್ಯ ಚಿತ್ರಾಪುರ, ಶ್ರೀ ಕೌಶಿಕ್ ರಾವ್, ಹಾಗೂ ಚಕ್ರತಾಳದಲ್ಲಿ ಮಾ| ಅಭಿಜಿತ್ ಬಂಟ್ವಾಳ ಮತ್ತು ಮಾ| ವಿದ್ವತ್ ಶೆಟ್ಟಿ ಭಾಗವಹಿಸಲಿದ್ದಾರೆ.

ಮುಮ್ಮೇಳದಲ್ಲಿ ಈಗ ತಾನೇ ಗೆಜ್ಜೆ ಕಟ್ಟಿ ರಂಗಸ್ಥಳವನ್ನೇರುವ ಪುಟಾಣಿ ಕಲಾಭ್ಯಾಸಿಗಳಿಂದ ಹಿಡಿದು ಹಲವು ವರ್ಷಗಳ ಅನುಭವವಿರುವ ಶಿಷ್ಯಂದಿರೂ ಬಣ್ಣ ಹಚ್ಚಿ ತಮ್ಮದೇ ಶೈಲಿಯಲ್ಲಿ ಕಲಾಪ್ರತಿಭೆ ಪ್ರದರ್ಶಿಸಲಿದ್ದಾರೆ.
ಸನಾತನ ಯಕ್ಷಾಲಯದ ಬಗ್ಗೆ.

ಸುಮಾರು 5 ವರ್ಷಗಳ ಕಾಲ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಬಪ್ಪನಾಡು ಮೇಳದಲ್ಲಿ ಪ್ರಮುಖ ವೇಷಧಾರಿಯಾಗಿ ಸೇವೆ ಸಲ್ಲಿಸುತ್ತಿರುವ ಯುವ ಕಲಾವಿದ ರಾಕೇಶ್ ರೈ ಅಡ್ಕರವರಿಂದ ಯುವ ಯಕ್ಷ ಕಲಾಸಕ್ತ ವಿದ್ಯಾರ್ಥಿಗಳಿಗೆ ಯಕ್ಷಕಲೆಯನ್ನು ಧಾರೆಯೆರೆಯುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ಸಂಸ್ಥೆಯೇ ಸನಾತನ ಯಕ್ಷಾಲಯ ಮಂಗಳೂರು ದಣಿವರಿಯದ ಯಕ್ಷಗುರುವೆಂದೇ ಪ್ರಸಿದ್ಧರಾದ ಶ್ರೀಯುತ ಅಡ್ಕರವರು ಗಡಿನಾಡು ಕಾಸರಗೋಡು ಸೇರಿದಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 16 ಕಡೆಗಳಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸುತ್ತಾ ಸುಮಾರು 600 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿ ಸಮೂಹವನ್ನು ಹೊಂದಿರುವುದು ಮಾತ್ರವಲ್ಲದೆ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಯಕ್ಷಗಾನ ಡಿ ಪ್ಲೋಮ ಕೋರ್ಸಿನ ಅಧ್ಯಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ನಿರ್ದೇಶನದ ಶಿಷ್ಯಂದಿರ ತಂಡ ಜಿಲ್ಲೆ ಹಾಗೂ ಹೊರಜಿಲ್ಲೆಗಳ ಹಲವಾರು ಯಕ್ಷಗಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನಗಳನ್ನು ತಮ್ಮದಾಗಿಸಿ ಕೊಂಡ ಹಿರಿಮೆಯನ್ನು ಹೊಂದಿದೆ. ಮುಂಬೈ, ಚೆನೈ, ನವದೆಹಲಿ ಮೊದಲಾದ ಕಡೆಗಳಲ್ಲಿ ಮಾತ್ರವಲ್ಲದೆ ಅಮೆರಿಕ, ಇಂಗ್ಲೆಂಡ್‌ನಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ ಹಿರಿಮೆ ರಾಕೇಶ್ ರೈ ಅಡ್ಕ ಇವರದು.

ಪತ್ರಿಕಾಗೋಷ್ಠಿಯಲ್ಲಿ ಸನಾತನ ಯಕ್ಷಾಲಯದ ಸಂಸ್ಥಾಪಕ ಹಾಗೂ ಯಕ್ಷಗುರುಗಳಾದ ರಾಕೇಶ್ ರೈ ಅಡ್ಕ, ದೀಪಕ್ ಶೆಟ್ಟಿ ವಾಮಂಜೂರು, ಮತ್ತು ಶ್ರೀಮತಿ ಸುಕನ್ಯಾ ಶೇಖರ್ ಉಪಸ್ಥಿತರಿದ್ದರು.


Spread the love

Exit mobile version