ಮಂಗಳೂರು| ಪ್ರತ್ಯೇಕ ಸೈಬರ್ ಅಪರಾಧ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ನಗರದ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ಪ್ರತ್ಯೇಕ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಒರಿಸ್ಸಾ ರಾಜ್ಯದ ಗಂಜಂ ಜಿಲ್ಲೆಯ ನೌಗಾನ ತಾಲೂಕಿನ ರಂಪ ಗ್ರಾಮದ ಕಣಾತಲ ವಾಸುದೇವ ರೆಡ್ಡಿ (25) ಹಾಗೂ ಕೇರಳದ ಕೋಝಿಕ್ಕೋಡ್‌ನ ಜಯಂತ್ ಪಿ. (35) ಎಂದು ಗುರುತಿಸಲಾಗಿದೆ.
*ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗುವುದು ಎಂದು ವಾಟ್ಸ್‌ಆ್ಯಪ್ ನಲ್ಲಿ ಹಾಕಿದ ಸಂದೇಶವನ್ನು ನೋಡಿದ ವ್ಯಕ್ತಿಯೊಬ್ಬರು ಹಂತ ಹಂತವಾಗಿ 10,84,017 ರೂ. ತೊಡಗಿಸಿ ಬಳಿಕ ಮೋಸ ಹೋಗಿದ್ದರು. ಈ ಬಗ್ಗೆ ಹಣ ಕಳಕೊಂಡ ವ್ಯಕ್ತಿಯು ನೀಡಿದ ದೂರಿನ ಮೇರೆಗೆ ಸೆನ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂದಿಸಿದಂತೆ ಬಂಧಿತನಾಗಿದ್ದ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜು ಎಂಬಾತನ ಹೇಳಿಕೆಯ ಆಧಾರದಲ್ಲಿ ಭಾರತದಿಂದ 500ಕ್ಕೂ ಹೆಚ್ಚು ವಿವಿಧ ಕಂಪೆನಿಗಳ ಸಿಮ್‌ಗಳನ್ನು ದುಬೈನಲ್ಲಿ ಸೈಬರ್ ವಂಚಕರಿಗೆ ಮಾರಾಟ ಮಾಡಿದ್ದ ಕಣಾತಲ ವಾಸುದೇವ ರೆಡ್ಡಿಯನ್ನು ಡಿ.18ರಂದು ದೆಹಲಿಯ ವಿಮಾನ ನಿಲ್ದಾಣದ ಮೂಲಕ ದುಬೈ ತೆರಳುತ್ತಿದ್ದ ವೇಳೆ ಇಮ್ರಿಗೇಶನ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮಾಹಿತಿ ತಿಳಿದ ಮಂಗಳೂರು ಸೆನ್ ಠಾಣೆಯ ಪೊಲೀಸರು ದೆಹಲಿಗೆ ತೆರಳಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
*ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬುದಾಗಿ ವಾಟ್ಸ್‌ಆ್ಯಪ್‌ನಲ್ಲಿ ಬಂದ ಸಂದೇಶದಂತೆ ವ್ಯಕ್ತಿಯೊಬ್ಬರು ಹಂತ ಹಂತವಾಗಿ 40,64,609 ರೂ.ವನ್ನು ತೊಡಗಿಸಿ ಬಳಿಕ ಮೋಸ ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂದಿಸಿದಂತೆ ಕೋಝಿಕ್ಕೋಡ್‌ನ ಜಯಂತ್ ಪಿ.ಯನ್ನು ಬಂಧಿಸಲಾಗಿದೆ. ಈತನ ಬ್ಯಾಂಕ್ ಖಾತೆಯ ಮೇಲೆ ದೇಶಾದ್ಯಂತ 90ಕ್ಕೂ ಹೆಚ್ಚಿನ ದೂರುಗಳಿರುವುದು ತನಿಖೆಯ ವೇಳೆ ತಿಳಿದು ಬಂದಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಡಿಸಿಪಿಗಳಾದ ಸಿದ್ದಾರ್ಥ ಗೋಯಲ್, ರವಿಶಂಕರ್‌ರ ಮಾರ್ಗದರ್ಶನದಲ್ಲಿ ಎಸಿಪಿ ರವೀಶ್ ನಾಯಕ ಮತ್ತು ಸೆನ್ ಠಾಣೆಯ ನಿರೀಕ್ಷಕ ಸತೀಶ್ ಎಂ.ಪಿ. ನೇತೃತ್ವದಲ್ಲಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳಿದ್ದು, ತನಿಖೆ ಮುಂದುವರೆದಿದೆ.