ಮಂಗಳೂರು: ಪ್ರಿಯಾಂಕ ರೆಡ್ಡಿ ಅತ್ಯಾಚಾರದ ವಿರುದ್ಧ ಎ.ಬಿ.ವಿ.ಪಿ ಪ್ರತಿಭಟನೆ
ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ನಗರ ವತಿಯಿಂದ, ಹೈದ್ರಾಬಾದಿನಲ್ಲಿ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರ ಮೇಲೆ ಆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು, ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾ ರ್ಯಾಲಿಯು ಚೈತನ್ಯ ಪದವಿಪೂರ್ವ ಕಾಲೇಜಿನಿಂದ ಪ್ರಾರಂಭವಾಗಿ ಮಹೇಶ್ ಕಾಲೇಜು ಮುಂಭಾಗವಾಗಿ ಕೊಟ್ಟಾರ ಚೌಕಿಯನ್ನು ತಲುಪಿ ರಸ್ತೆ ಮಧ್ಯದಲ್ಲಿ ನಿಂತು ಪ್ರತಿಭಟನಾಕಾರರು ಘೋಷಣೆ ಮೂಲಕ ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಭಾವಿಪ ನಗರ ಕಾರ್ಯದರ್ಶಿ ಮಣಿಕಂಠ ಕಳಸ, ಈ ನೀಚ ಕೃತ್ಯವನ್ನು ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ, ಇಂದು ಸ್ವಾತಂತ್ರ್ಯ ಹೋರಾಟಗಾರ ಖುದಿರಾಮ್ ಬೋಸ್ ಅವರ ಜನ್ಮದಿನ, ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಆದರೆ ನಾವು ಇಂದು ಅತ್ಯಾಚಾರಿಗಳ ವಿರುದ್ಧ ಕಠಿಣ ಶಿಕ್ಷೆಗೆ ಹೋರಾಡುವ ಪರಿಸ್ಥಿತಿಯಲ್ಲಿ ಇದ್ದೇವೆ. ಯಾವ ಹೆಣ್ಣಿಗೂ ಈ ರೀತಿಯಾಗದಂತೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ವಿಭಾಗ ಸಂಘತನಾ ಕಾರ್ಯದರ್ಶಿ ಬಸವೇಶ್ ಕೋರಿ. ನಗರ ಸಂಘಟನಾ ಕಾರ್ಯದರ್ಶಿ ವಿರೇಶ್ ಅಜ್ಜಣ್ಣನವರ್, ಜಿಲ್ಲಾ ಸಂಚಾಲಕ ಸಂದೇಶ, ಹಿರಿಯ ಕಾರ್ಯಕರ್ತ ಶೀತಲ್ ಕುಮಾರ್, ಸಾಮಾಜಿಕ ಜಾಲತಾಣ ಪ್ರಮುಖ್ ಬ್ರಿಜೇಶ್ ಅಮೀನ್, ಸರ್ವ ಕಾಲೇಜ್ ವಿದ್ಯಾರ್ಥಿ ಸಂಘದ ಶ್ರಿಪಾದ್ ತಂತ್ರಿ , ಆದಿತ್ಯ ಸುಶಾನ, ಅಭಿಲಾಷ್ ಹಾಗೂ ಕಾರ್ಯಕರ್ತರಾದ ರೋನಕ್ ಸುವರ್ಣ, ಲಿಖಿತ್‍ರಾಜ್, ಚೇತನ್, ಸಂತೋಷ್, ಶಿವಶಂಕರ್, ಧನುಷ್ ಸುವರ್ನ, ಸೇರಿದಂತೆ ಚೈತನ್ಯ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಮಹೇಶ್ ಕಾಲೇಜಿನ ಶಿಕ್ಷಕರು ಭಾಗವಹಿಸಿದ್ದರು.