Home Mangalorean News Kannada News ಮಂಗಳೂರು ಪ್ರೀಮಿಯರ್ ಲೀಗ್ : ಕರಾವಳಿಗರು ಹಾಕಿ ಆಟದತ್ತಲೂ ಗಮನ ಹರಿಸಿ – ಜೆ. ಆರ್....

ಮಂಗಳೂರು ಪ್ರೀಮಿಯರ್ ಲೀಗ್ : ಕರಾವಳಿಗರು ಹಾಕಿ ಆಟದತ್ತಲೂ ಗಮನ ಹರಿಸಿ – ಜೆ. ಆರ್. ಲೋಬೋ

Spread the love

ಮಂಗಳೂರು ಪ್ರೀಮಿಯರ್ ಲೀಗ್ : ಕರಾವಳಿಗರು ಹಾಕಿ ಆಟದತ್ತಲೂ ಗಮನ ಹರಿಸಿ – ಜೆ. ಆರ್. ಲೋಬೋ

ಮಂಗಳೂರು: ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ನಾಲ್ಕನೆಯ ಆವೃತ್ತಿಯ ಪಂದ್ಯಾಟಗಳು ಮಾರ್ಚ್ ತಿಂಗಳ ದಿನಾಂಕ 20ರಿಂದ ಎಪ್ರಿಲ್ 1ರವರೆಗೆ ನವಮಂಗಳೂರು ಬಂದರಿನ ಬಿ.ಆರ್. ಅಂಬೇಡ್ಕರ್ ಕ್ರಿಕೆಟ್ ಕ್ರೀಡಾಂಗಣದ ಅಸ್ಟ್ರೋ ಟರ್ಫ್ ಪಿಚ್‍ನಲ್ಲಿ ಹೊನಲು ಬೆಳಕಿನಲ್ಲಿ ಜರಗಲಿದ್ದು ಆ ಸಂಬಂಧ ಆಟಗಾರರನ್ನು ಆಯ್ಕೆ ಮಾಡುವ ಆಯ್ಕೆ ಶಿಬಿರವು ಮಂಗಳೂರು ಹಂಪನ್‍ಕಟ್ಟೆಯಲ್ಲಿರುವ ಸರಕಾರಿ ಕಾಲೇಜು ಆವರಣದೊಳಗಿನ ಕರಾವಳಿ ಕ್ರಿಕೆಟ್ ಅಂಗಣದಲ್ಲಿ ನೆರವೇರಿತು.

ಈ ಆಯ್ಕೆ ಶಿಬಿರದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಮಂದಿ ಕ್ರೀಡಾ ಪಟುಗಳ ಭಾಗವಹಿಸಿದ್ದು, ತೆರೆಯ ಮರೆಯಲ್ಲಿದ್ದ ಹಲವು ಉದಯೋನ್ಮುಖ ಪ್ರತಿಭೆಗಳು ಬೆಳಕು ಚೆಲ್ಲಲು ವೇದಿಕೆಯಾಯಿತು. ಮೊದಲ ಹಂತದಲ್ಲಿ 140 ಮಂದಿ ಆಟಗಾರರನ್ನು ಸೋಸಿ ತೆಗೆದು ಅವರನ್ನು ಮತ್ತೆ ಪರೀಕ್ಷೆಗೊಡ್ಡಿ 50ರಷ್ಟು ಮಂದಿ ಆಟಗಾರರನ್ನು ಹರಾಜಿಗಿಡುವ ಪಟ್ಟಿಗೆ ಸೇರಿಸಲಾಯಿತು. ಎ ಮತ್ತು ಬಿ ವಿಭಾಗದ ಆಟಗಾರರನ್ನು ಈಗಾಗಲೇ ಗುರುತಿಸಲಾಗಿದ್ದು ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿ ತಿಂಗಳ ದಿನಾಂಕ 17.02.2018ರಂದು ಐಪಿಎಲ್ ಮಾದರಿಯಲ್ಲಿ ಜರಗಲಿದೆ.

ಈ ಆಯ್ಕೆ ಶಿಬಿರವನ್ನು ಮಂಗಳೂರಿನ ಶಾಸಕ ಜೆ. ಆರ್. ಲೋಬೋ ಅವರು ಉದ್ಘಾಟಿಸಿ ಮಾತನಾಡುತ್ತಾ ಕರಾವಳಿಯ ಜನರು ಕ್ರಿಕೆಟಿನಂತಹ ಕ್ರೀಡೆಯಲ್ಲಿ ತೊಡಗಿ ಹಾಕಿಯಂತಹ ದೇಶೀಯ ಕ್ರೀಡೆಗಳು ಮೂಲೆಗುಂಪಾಗಲು ಬಿಡಬಾರದು. ಇಲ್ಲಿನ ಆಟಗಾರರು ಹಾಕಿ ದಂಡನ್ನು ಕೈಗೇರಿಸಕೊಂಡು ಆ ಆಟದಲ್ಲಿಯೂ ತೊಡಗಬೇಕು ಎಂದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯದ ಸಂಚಾಲಕರಾದ ಶ್ರೀ ಮನೋಹರ್ ಅಮೀನ್‍ರವರು ಮಾತನಾಡಿ ನಗರದ ಹೃದಯ ಭಾಗದಲ್ಲಿರುವ ಸರಕಾರಿ ಕಾಲೇಜಿನ ಪುಟ್ಟ ಮೈದಾನವನ್ನು ಸುಸಜ್ಜಿತಗೊಳಿಸಿದಲ್ಲಿ ಇಲ್ಲಿನ ಕ್ರೀಡಾಪಟುಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಅಂದರು. ಈ ಸಂದರ್ಭದಲ್ಲಿ ಕ್ರಿಕೆಟ್ ತರಬೇತುದಾರ ಕೇರಳದ ಶ್ರೀಕರ್, ಸಂತೋಷ್, ಶೇಖರ್ ಶೆಟ್ಟಿ, ನಿತಿನ್ ಸಾರಂಗ್‍ರವರು ಉಪಸ್ಥಿತರಿದ್ದರು.

ಮಂಗಳೂರು ಪ್ರೀಮಿಯರ್ ಲೀಗಿನ ರೂವಾರಿ ಸಿರಾಜುದ್ದೀನ್ ಸ್ವಾಗತಿಸಿದರು. ಇಮ್ತಿಯಾಝ್ ಅಹ್ಮದ್ ವಂದಿಸಿದರು.


Spread the love

Exit mobile version