ಮಂಗಳೂರು ಪ್ರೀಮಿಯರ್ ಲೀಗ್: ದಿ.11ರಂದು ಆಟಗಾರರ ಆಯ್ಕೆ ಪ್ರಕ್ರಿಯೆ

Spread the love

ಮಂಗಳೂರು ಪ್ರೀಮಿಯರ್ ಲೀಗ್: ದಿ.11ರಂದು ಆಟಗಾರರ ಆಯ್ಕೆ ಪ್ರಕ್ರಿಯೆ

ಮಂಗಳೂರು: ಡಿಸೆಂಬರ್ ತಿಂಗಳ ದಿನಾಂಕ 17ರಿಂದ 31ರವರೆಗೆ 15 ದಿನಗಳ ಕಾಲ ಮಂಗಳೂರಿನಲ್ಲಿ ಜರಗಲಿರುವ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಹಂತ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಪಂದ್ಯಗಳು ಜರಗಲಿರುವ ನವಮಂಗಳೂರು ಬಂದರಿನ ಬಿ.ಆರ್. ಅಂಬೇಡ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಿಚ್‍ಗೆ ಅಸ್ಟ್ರೋಟರ್ಫ್‍ನ್ನು ಹಾಸುವ ಮತ್ತು ಮೈದಾನದಲ್ಲಿ ಹಸಿರು ಹುಲ್ಲನ್ನು ಬೆಳೆಸುವ ನಿಟ್ಟಿನಲ್ಲಿ ಆರಂಭಿಕ ಕೆಲಸಗಳು ಸಾಗುತ್ತಿವೆ. ಕರಾವಳಿಯ ಹವಮಾನವನ್ನು ಪರಿಗಣಿಸಿ ಪಿಚ್ಚನ್ನು ನೈಸರ್ಗಿಕ ಹುಲ್ಲು ಹಾಸಿನ ಬದಲು ಆಸ್ಟ್ರೋ ಟರ್ಫನ್ನು ಬಳಸಿ ನಿರ್ಮಿಸಲಾಗುತ್ತಿದೆ. ಆಸ್ಟ್ರೋ ಟರ್ಫ್ ವಿವಿಧ ಬಗೆಯವುಗಳಿದ್ದು, ಇಲ್ಲಿ ವೇಗ ಮತ್ತು ಸ್ಪಿನ್ ಬೌಲಿಂಗ್‍ಗಳೆರಡಕ್ಕೂ ಅನುಕೂಲಕರವಾದ ಟರ್ಫನ್ನು ಹಾಸಲಾಗುತ್ತಿದೆ. ಈ ರೀತಿಯ ಟರ್ಫ್‍ನ್ನು ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ.ಇದರಲ್ಲಿ ಬ್ಯಾಟ್ಸ್‍ಮನ್‍ಗಳೂ ಸುಗಮವಾಗಿ ಆಡಬಹುದಾಗಿದ್ದು, ಮನಮೋಹಕ ಪಂದ್ಯಗಳು ಮೂಡಿಬರಬಹುದೆಂದು ನಿರೀಕ್ಷಿಸಲಾಗಿದೆ.ಮೈದಾನದ ಇತರ ಭಾಗಗಳಲ್ಲಿ ಹಸಿರು ಹುಲ್ಲನ್ನು ನೆಡುವ ಕೆಲಸದತ್ತ ಹೆಜ್ಜೆ ಇಡಲಾಗಿದೆ.

Pitch preperation at NMPT

ಆಟಗಾರರ ಆಯ್ಕೆ ಪ್ರಕ್ರಿಯೆ: ದಕ್ಷಿಣಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ಕ್ರಿಕೆಟ್ ವಲಯದಿಂದ ಈಗಾಗಲೇ 500ಕ್ಕೂ ಹೆಚ್ಚು ಮಂದಿ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವರು. ಅವರಲ್ಲಿ ಮುಂಬಯಿ, ದೆಹಲಿ ಮುಂತಾದೆಡೆ ನೆಲೆಸಿರುವ ಮಂಗಳೂರು ವಲಯದ ಆಟಗಾರರೂ ಸೇರಿದ್ದು, ಅವರಲ್ಲಿ ಅತ್ಯುತ್ತಮ 48 ಆಟಗಾರರನ್ನು “ಎ” ದರ್ಜೆಯಲ್ಲಿ, ಉತ್ತಮ 36 ಮಂದಿ ಆಟಗಾರರನ್ನು “ಬಿ” ದರ್ಜೆಯ ಪಟ್ಟಿಗೆ ಸೇರಿಸಲಾಗಿ ಆ ಪಟ್ಟಿಗಳನ್ನು www.krcaindia.com, www.facebook.com/mplofficialಗಳಲ್ಲಿ ಪ್ರಕಟಿಸಲಾಗುವುದು. ನೋಂದಣಿ ಮಾಡಿರುವ ಉಳಿದ ಆಟಗಾರರಲ್ಲಿ ಆಯ್ಕೆಯಾದ ಆಟಗಾರರನ್ನು “ಸಿ” ದರ್ಜೆಯ ಪಟ್ಟಿಗೆ ಸೇರಿಸುವ ಸಲುವಾಗಿ ದಿನಾಂಕ 11.09.2016ರ ಭಾನುವಾರದಂದು ಬೆಳಿಗ್ಗೆ ಗಂಟೆ 8.30ಕ್ಕೆ ಆಯ್ಕೆ ಶಿಬಿರವು ಜರಗಲಿರುವುದು.ಈ ಶಿಬಿರವು ಸಂತ ಅಲೋಶಿಯಸ್ ಕಾಲೇಜಿನ ಶತಮಾನೋತ್ಸವ ಮೈದಾನದಲ್ಲಿ ಜರಗಲಿರುವುದು. ನೋಂದಣಿ ಮಾಡದೆ ಉಳಿದಿರುವ ಆಟಗಾರರ ಮನವಿಯನ್ನು ಪರಿಗಣಿಸಿ ಅವರಿಗೂ ಶಿಬಿರದಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸಲಾಗಿದ್ದು, ಮಂಗಳೂರು ವಲಯದ ಆಟಗಾರರು (ಮಂಗಳೂರು ವಲಯದಲ್ಲಿ ಜನಿಸಿರುವರು, ಮಂಗಳೂರು ವಲಯದಲ್ಲಿನ ಶಾಲೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, ಕೆಲಸ ಮಾಡುತ್ತಿರುವ ನೌಕರರು ಅರ್ಹರಿರುವರು) ಸ್ಥಳದಲ್ಲೇ ನೋಂದಣಿ ಮಾಡಿ ಭಾಗವಹಿಸ ಬಹುದಾಗಿದೆ.

ಭಾಗವಹಿಸುವ ಆಟಗಾರರು ಕ್ರಿಕೆಟಿನ ಸಮವಸ್ತ್ರದೊಂದಿಗೆ, ಆಟವನ್ನಾಡಲು ಅವಶ್ಯಕವಿರುವ ಪರಿಕರಗಳನ್ನು ತರಬೇಕಾಗಿರುತ್ತದೆ.

ಈ ಬಾರಿಯ ಕೆ.ಪಿ.ಎಲ್ ಪಂದ್ಯಗಳು ಮುಗಿದೊಡನೆ ಆಟಗಾರರು ತೋರಿದ ಪ್ರದರ್ಶನವನ್ನು ಪರಿಗಣಿಸಿ ಉತ್ತಮ 24 ಆಟಗಾರರನ್ನು ಎಂ.ಪಿ.ಎಲ್ ಪಂದ್ಯದಲ್ಲಿ ಭಾಗವಹಿಸುವ ಸಲುವಾಗಿ ದಿಕ್ಸೂಚಿ (ಐಕಾನ್ ಪ್ಲೇಯರ್ಸ್) ಆಟಗಾರರನ್ನಾಗಿಆರಿಸಲಾಗುವುದು.ಈ ಮೂಲಕ ಎಂ.ಪಿ.ಎಲ್ ನ ಗುಣಮಟ್ಟವನ್ನು ಎತ್ತರಿಸಲಾಗುವುದಲ್ಲದೆ, ಸ್ಥಳೀಯ ಪ್ರತಿಭೆಗಳು ಉನ್ನತ ಕ್ರಿಕೆಟಿನತ್ತ ಹೆಜ್ಜೆಯಿಡುವತ್ತ ಅವಕಾಶ ಕಲ್ಪಿಸುವ ಎಂ.ಪಿ.ಎಲ್ ನ ಮೂಲ ಆಶಯವನ್ನು ಸಾಕಾರಗೊಳಿಸಲಾಗುವುದು.


Spread the love