ಮಂಗಳೂರು : ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ವಿರುದ್ದ ಪ್ರತಿಭಟನೆಗೆ ದಕ ಬಿಜೆಪಿ ಬೆಂಬಲ
ಮಂಗಳೂರು : ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ದೇವಸ್ಥಾನಗಳ ಮೇಲಿನ ದಾಳಿ ಖಂಡಿಸಿ, ಹಿಂದುಗಳ ಮೇಲಿನ ದೌರ್ಜನ್ಯ ನಿಲ್ಲಿಸಲು ಬಾಂಗ್ಲಾ ಸರಕಾರಕ್ಕೆ ಒತ್ತಡ ಹೇರಲು ಹಾಗೂ ಬಾಂಗ್ಲಾದ ಹಿಂದೂಗಳಿಗೆ ನೈತಿಕ ಬೆಂಬಲ ನೀಡಲು ಆಗ್ರಹಿಸಿ ಹಿಂದು ಹಿತರಕ್ಷಣಾ ಸಮಿತಿ ಮಂಗಳೂರು ವತಿಯಿಂದ ಡಿ.4ರಂದು ನಗರದ ಮಿನಿ ವಿಧಾನಸೌಧ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ 10ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧವರೆಗೆ ಮೆರವಣಿಗೆ ನಡೆಯಲಿದೆ. ಬಳಿಕ ಮಿನಿ ವಿಧಾನಸೌಧ ಮುಂಭಾಗ ಸಭೆ ನಡೆಯ ಲಿದೆ. ಜಿಲ್ಲೆಯ ಮಠಾಧೀಶರು, ಧಾರ್ಮಿಕ ಮುಖಂಡರು, ಬಿಜೆಪಿಯ ನಾಯಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಇಂದಿರಾ ಗಾಂಧಿ ಕಾಲದಲ್ಲಿ ಸ್ವತಂತ್ರ ಬಾಂಗ್ಲಾದೇಶ ರಚನೆಗೆ ಭಾರತ ಸರಕಾರ ನೆರವಾಗಿತ್ತು. ಬಳಿಕ ಬಾಂಗ್ಲಾದ ಅಭಿವೃದ್ಧಿಗೆ ಭಾರತ ಸಹಕಾರ ನೀಡಿತ್ತು. ಕೋವಿಡ್ ಅವಧಿಯಲ್ಲೂ ಕೇಂದ್ರ ಸರಕಾರ ಬಾಂಗ್ಲಾದೇಶಕ್ಕೆ ನೆರವು ನೀಡಿತ್ತು. ಶೇಖ್ ಹಸೀನಾ ಸರಕಾರದ ಪತನದ ಬಳಿಕ ಬಾಂಗ್ಲಾದಲ್ಲಿ ಧರ್ಮದ ಆಧಾರದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಿರುವುದು ಖಂಡನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಕೋಶಾಧಿಕಾರಿ ಸಂಜಯ ಪ್ರಭು, ವಕ್ತಾರ ಅರುಣ್ ಶೇಟ್ ಉಪಸ್ಥಿತರಿದ್ದರು.