ಮಂಗಳೂರು: ಇತರ ರಾಜಕೀಯ ಪಕ್ಷಗಳಿಂದ ಭಿನ್ನ ಎನ್ನುವುದನ್ನು ಇವತ್ತಿಗೂ ಆಂತರಿಕ ಪ್ರಜಾಪ್ರಭುತ್ವವನ್ನು ನಡೆಸಿಕೊಂಡು ಬಂದಿರುವುದೇ ಇದಕ್ಕೆ ಉದಾಹರಣೆಯಾಗಿದೆ. ಸಿದ್ಧಾಂತವಾದಿ ಪಂಡಿತ್ ದೀನದಯಾಳ್‍ಜೀಯವರು ಪಕ್ಷದ ಪಂಚ ನಿಷ್ಠೆಯಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಂದು ಸ್ವರೂಪದಲ್ಲಿ ಅನುಷ್ಠಾನಕ್ಕೆ ತಂದಿರುವುದು ನಮಗೆಲ್ಲರಿಗೂ ತಿಳಿದಿದೆ.
ನಾವು ಪಕ್ಷದಲ್ಲಿ ಪ್ರತೀ 3 ವರ್ಷಕ್ಕೊಮ್ಮೆ ಸಂವಿಧಾನದ ಪ್ರಕಾರ ಸ್ಥಾನೀಯ ಸಮಿತಿಯಿಂದ ದೇಶ ಮಟ್ಟದವರೆಗಿನ ಘಟಕಗಳ ಪುನರ್ ರಚನೆ ಕಾರ್ಯವನ್ನು ಮಾಡುವುದರ ಮೂಲಕ ಇತರ ರಾಜಕೀಯ ಪಕ್ಷಗಳಿಗೆ ಮೇಲ್ಪಂಕ್ತಿಯಾಗಿದ್ದೇವೆ. ಅದೇ ರೀತಿ ಸಂಘಟನಾ ಪರ್ವ-2015 ಪಕ್ಷದಲ್ಲಿ ಪ್ರಾರಂಭಗೊಂಡಿದ್ದು, ರಾಜ್ಯ ಚುನಾವಣಾಧಿಕಾರಿಯಾಗಿ ಶ್ರೀ ಭಾನುಪ್ರಕಾಶ್ ಅವರು ನಿಯುಕ್ತಿಗೊಂಡಿದ್ದು, ಅವರ ಸೂಚನೆಯ ಮೇರೆಗೆ ಸ್ಥಾನೀಯ, ಗ್ರಾಮ ಪಂಚಾಯತಿ, ಮಂಡಲ ಘಟಕಗಳ ಹೊಸ ಸಮಿತಿಗಳ ರಚನೆಗೆ ಚಾಲನೆ ದೊರೆತಿದೆ.
ಕಾರ್ಯಕರ್ತರು ಸಂಘಟನಾ ಪರ್ವದಲ್ಲಿ ಮುಕ್ತ ಸರ್ವ ಸಮ್ಮತ ರೀತಿಯ ಘಟಕಗಳ ರಚನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರ ಮೂಲಕ ಈ ಸಂಘಟನಾ ಪರ್ವವನ್ನು ಹಬ್ಬದ ವಾತಾವರಣದ ಮೂಲಕ ನಡೆಸುವಂತೆ ನೋಡಿಕೊಳ್ಳಬೇಕೆಂದು ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಸಂಘಟನಾ ಪರ್ವದ ಕಾರ್ಯಾಗಾರದ ಉದ್ಘಾಟನಾ ಭಾಷಣದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಉಡುಪಿ ಜಿಲ್ಲೆಯ ಚುನಾವಣಾ ಪ್ರಮುಖರು ಆದ ಶ್ರೀ ನಿರ್ಮಲ್ ಕುಮಾರ್ ಸುರಾನ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಉಡುಪಿ ಜಿಲ್ಲಾ ಚುನಾವಣಾ ಪ್ರಮುಖ್ ಶ್ರೀಮತಿ ರೀನಾ ಪ್ರಕಾಶ್ ರವರು ಉಡುಪಿ ಜಿಲ್ಲೆಯ ಮಂಡಲಗಳ ಚುನಾವಣಾ ಪ್ರಮುಖ್, ಚುನಾವಣಾಧಿಕಾರಿ, ಮತ್ತು ಸಹಾಯಕ ಚುನಾವಣಾಧಿಕಾರಿಗಳ ಘೋಷಣೆಯನ್ನು ನಡೆಸಿದರು. ಅದೇ ರೀತಿ ದ.ಕ.ಜಿಲ್ಲೆಯ ಮಂಡಲಗಳ ಚುನಾವಣಾಧಿಕಾರಿಗಳ ನೇಮಕವನ್ನು ಸಹಾಯಕ ಚುನಾವಣಾಧಿಕಾರಿ ಕೆ.ಉದಯಕುಮಾರ್ ಶೆಟ್ಟಿಯವರು ಘೋಷಣೆ ಮಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ಪ್ರಮುಖ್ ಮೈ.ವೈ.ರವಿಶಂಕರ್ ರವರು ಚುನಾವಣಾ ವೇಳಾಪಟ್ಟಿಯಂತೆ ಅಕ್ಟೋಬರ್ 31ರ ಒಳಗೆ ಸ್ಥಾನೀಯ ಸಮಿತಿ, ನವೆಂಬರ್ 10ರ ಒಳಗೆ ಗ್ರಾಮ ಪಂಚಾಯತ್/ವಾರ್ಡ್, ನವೆಂಬರ್ 20ರ ಒಳಗೆ ಮಂಡಲ ಅಧ್ಯಕ್ಷರುಗಳ ಆಯ್ಕೆಯನ್ನು ಪೂರ್ಣಗೊಳಿಸುವಂತೆ ವಿನಂತಿಸಿ, ಸಮಾರೋಪಾ ಭಾಷಣವನ್ನು ಮಾಡಿದರು.
ರಾಜ್ಯ ಉಪಾಧ್ಯಕ್ಷರಾದ ಸುಲೋಚನಾ ಜಿ.ಕೆ.ಭಟ್, ವಿಭಾಗ ಪ್ರಭಾರಿ ಸಂಸದ ನಳಿನ್ ಕುಮಾರ್ ಕಟೀಲ್, ಚುನಾವಣಾ ಪ್ರಮುಖ್ ಲಾಲಾಜಿ ಮೆಂಡನ್, ಶ್ಯಾಮಲಾ ಕುಂದರ್, ದ.ಕ.ಜಿಲ್ಲಾಧ್ಯಕ್ಷ ಕೆ.ಪ್ರತಾಪ್ ಸಿಂಹನಾಯಕ್, ಉಡುಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮತ್ತು ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.
ದ.ಕ.ಜಿಲ್ಲಾಧ್ಯಕ್ಷ ಕೆ.ಪ್ರತಾಪ್ ಸಿಂಹ ನಾಯಕ್ ಸ್ವಾಗತಿಸಿ, ಉಡುಪಿ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ವಂದನಾರ್ಪಣಾ ಗೈದರು.