ಮಂಗಳೂರು : ಬಿಪಿಎಲ್ ಕ್ಷೌರಿಕರಿಗೆ ಮತ್ತು ಅಗಸರಿಗೆ ಪರಿಹಾರಧನಕ್ಕೆ ಅರ್ಜಿ ಆಹ್ವಾನ

Spread the love

ಮಂಗಳೂರು : ಬಿಪಿಎಲ್ ಕ್ಷೌರಿಕರಿಗೆ ಮತ್ತು ಅಗಸರಿಗೆ ಪರಿಹಾರಧನಕ್ಕೆ ಅರ್ಜಿ ಆಹ್ವಾನ

ಮಂಗಳೂರು :  ಕೋವಿಡ್-19 ಹಿನ್ನಲೆಯಲ್ಲಿ 18 ರಿಂದ 65 ವರ್ಷದೊಳಗಿನ ಕ್ಷೌರಿಕ ಮತ್ತು ಅಗಸ ವೃತ್ತಿಯನ್ನು ನಿರ್ವಹಿಸುತ್ತಿರುವ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಪಡಿತರ ಚೀಟಿ ಹೊಂದಿರುವ) ಅಸಂಘಟಿತ ವಲಯದ ಕಾರ್ಮಿಕರಿಗೆ ಪರಿಹಾರವಾಗಿ ರೂ. 5000 ಗಳನ್ನು ಮಂಜೂರು ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಫಲಾನುಭವಿಗಳು ತಾವು ಕೆಲಸ ನಿರ್ವಹಿಸುತ್ತಿರುವ ವ್ಯಾಪ್ತಿಯ ಸೇವಾಸಿಂಧು ಕೇಂದ್ರದ ಸೇವಾಸಿಂಧು ಪೋರ್ಟಲ್‍ನಲ್ಲಿ ನಿಗಧಿತ ಅರ್ಜಿಯಲ್ಲಿ ಮಾಹಿತಿ ಭರ್ತಿ ಮಾಡಿ, ಬ್ಯಾಂಕ್ ಖಾತೆಯೊಂದಿಗೆ ಜೋಡನೆಯಾಗಿರುವ ಆಧಾರ್ ಕಾರ್ಡ್, ವಿಳಾಸ ದೃಢೀಕರಣದ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ, ಸ್ವಯಂ ಘೋಷಣಾ ಪತ್ರ, ಉದ್ಯೋಗ ಪ್ರಮಾಣ ಪತ್ರ ಹಾಗೂ ತಮ್ಮ ಫೋಟೋ ಅಪಲೋಡ್ ಮಾಡಬೇಕು.

ಕ್ಷೌರಿಕ, ಅಗಸ ವೃತ್ತಿಯನ್ನು ನಿರ್ವಹಿಸುತ್ತಿರುವ ಕುರಿತು ಉದ್ಯೋಗ ಪ್ರಮಾಣ ಪತ್ರ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು, ಹಾಗೂ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು, ಉಪತಹಶೀಲ್ದಾರರು, ಕಂದಾಯ ನಿರೀಕ್ಷಕರು, ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ. ಕಾರ್ಮಿಕ ಇಲಾಖೆಯ ನಿರೀಕ್ಷಕರು, ಕಾರ್ಮಿಕ ಅಧಿಕಾರಿಗಳು, ಸಹಾಯಕ ಕಾರ್ಮಿಕ ಆಯುಕ್ತರು ಇವರ ಪೈಕಿ ಯಾವುದಾದರೊಂದು ಅಧಿಕಾರಿಯಿಂದ ದೃಢೀಕರಿಸಿ ಮೂಲ ಪ್ರತಿಯನ್ನು ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡಬೇಕು.

ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಜನ ವೃತ್ತಿಯಲ್ಲಿ ತೊಡಗಿದ್ದಲ್ಲಿ ಒಬ್ಬರು ಮಾತ್ರ ಪರಿಹಾರ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಕಾರ್ಮಿಕ ಅಧಿಕಾರಿ, ಉಪವಿಭಾಗ-1, ಇವರ ಪ್ರಕಟಣೆ ತಿಳಿಸಿದೆ


Spread the love