ಮಂಗಳೂರು : ಬೀದಿ ಬದಿ ವ್ಯಾಪಾರಿಗಳಿಗೆ ಕಿರುಸಾಲ ಸೌಲಭ್ಯ

Spread the love

ಮಂಗಳೂರು : ಬೀದಿ ಬದಿ ವ್ಯಾಪಾರಿಗಳಿಗೆ ಕಿರುಸಾಲ ಸೌಲಭ್ಯ

ಮಂಗಳೂರು : ಕೋವಿಡ್-19 ಲಾಕ್ ಡೌನ್ ಅವಧಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯದ ಮೇಲೆ ಬಹಳಷ್ಟು ಪ್ರತಿಕೂಲ ಪರಿಣಾಮ ಬೀರಿದ್ದು, ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಅಭಿವೃದ್ಧಿಗಾಗಿ ಮತ್ತು ಅವರ ವ್ಯವಹಾರವನ್ನು ಪುನರ್ ಪ್ರಾರಂಭಿಸುವ ಸಲುವಾಗಿ ಬಂಡವಾಳವನ್ನು ಒದಗಿಸುವ ತುರ್ತು ಅವಶ್ಯಕತೆ ಇರುವುದರಿಂದ ಕೇಂದ್ರ ಸರ್ಕಾರವು “ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ”ಯ ವಿಶೇಷ ಕಿರು ಸಾಲ ಸೌಲಭ್ಯ ಯೋಜನೆ ಯನ್ನು ಜಾರಿಗೊಳಿಸಲಾಗಿದೆ.

ಈ ಯೋಜನೆ ಅನ್ವಯ ಇದೀಗ ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯೊಳಗಡೆ ಕನಿಷ್ಠ 5 ವರುಷಗಳ ಅವಧಿಯಲ್ಲಿ ಬೀದಿ ಬದಿ ವ್ಯಾಪಾರದಲ್ಲಿ ತೊಡಗಿಸಿಕೊಂಡವರಿಂದ ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ.

ಮಂಗಳೂರು ಮಹಾ ನಗರಪಾಲಿಕೆಯ ವ್ಯಾಪ್ತಿಯೊಳಗಡೆ ಬೀದಿ ಬದಿವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ವ್ಯಾಪಾರಸ್ಥರು ಮಂಗಳೂರು ಮಹಾನಗರಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದ ಡೇ-ನಲ್ಮ್ ನಗರ ನಿರ್ವಹಣಾ ಘಟಕದಿಂದ ಉಚಿತ ಅರ್ಜಿಯನ್ನು ಪಡೆದು ಜೂನ್ 30 ರೊಳಗಡೆ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸಕ್ತದ ನಕಲು, ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದಲ್ಲಿ ನೋಂದಾವಣೆ ಮಾಡಿರುವ ದಾಖಲೆ/ಗುರುತು ಚೀಟಿ, ವ್ಯಾಪಾರ ಮಾಡುತ್ತಿರುವ ಸ್ಥಳದಲ್ಲಿ ನಿಂತಿರುವ ಭಾವಚಿತ್ರ, ಕುಟುಂಬದ ಸದಸ್ಯರೊಂದಿಗೆ ನಿಂತಿರುವ ಭಾವಚಿತ್ರ ಇತ್ಯಾದಿ ಎಲ್ಲಾ ದಾಖಲೆಗಳೊಂದಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಎಮ್.ಜಿ.ರೋಡ್, ಲಾಲ್ಬಾಗ್ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆ, ದೂರವಾಣಿ ಸಂಖ್ಯೆ 0824-220305 ನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಮಹಾನಗರಪಾಲಿಕೆಯ ಉಪ ಆಯುಕ್ತರ ಪ್ರಕಟಣೆ ತಿಳಿಸಿದೆ.


Spread the love