ಮಂಗಳೂರು: ಬೀದಿ ಬದಿ ವ್ಯಾಪಾರಿಗಳ ಕುಂದುಕೊರತೆ ನಿವಾರಣಾ ಸಮಿತಿಗೆ ಅರ್ಜಿ ಆಹ್ವಾನ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕರ್ನಾಟಕ ಬೀದಿಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ವ್ಯಾಪಾರ ನಿಯಂತ್ರಣ) ನಿಯಮ-2019 ರಂತೆ ಕುಂದುಕೊರತೆ ನಿವಾರಣಾ ಸಮಿತಿ ಸದಸ್ಯರಾಗಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಾನದಂಡ:
ಅಧ್ಯಕ್ಷರು: ನಿವೃತ್ತ ಸಿವಿಲ್ ನ್ಯಾಯಾಧೀಶರಾಗಿರಬೇಕು – 65 ವರ್ಷ ಒಳಗಿನವರಾಗಿರಬೇಕು. ಸದಸ್ಯರು: ಸ್ಥಳೀಯ ವಾಸವಿರುವ ರಾಜ್ಯ ಸರ್ಕಾರದ ನಿವೃತ ‘ಎ’ ದರ್ಜೆ ಅಧಿಕಾರಿಯಾಗಿರಬೇಕು. 65 ವರ್ಷದ ಒಳಗಿನವರಾಗಿರಬೇಕು. ಇತರೆ ಸದಸ್ಯರ ಸ್ಥಾನಗಳಿಗೆ ಸ್ಥಳೀಯ ಪ್ರದೇಶದ ಕಳಂಕ ರಹಿತ ಸೇವಾ ದಾಖಲೆಯುಳ್ಳವರಾಗಿರಬೇಕು. ಸ್ಥಳೀಯ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿ, ಅನೌಪಚಾರಿಕ ಆರ್ಥಿಕ ಕ್ಷೇತ್ರದಲ್ಲಿ ಅನುಭವ, 65 ವರ್ಷದ ಒಳಗಿನವರಾಗಿರಬೇಕು, ಸಾಮಾಜಿಕ ಕಾರ್ಯಕರ್ತರಾಗಿರಬೇಕು.
ಸಮಿತಿಯ ಅವಧಿಯು 5 ವರ್ಷಗಳವರೆಗೆ ಅಸ್ಥಿತ್ವದಲ್ಲಿರುತ್ತದೆ. ನಿವೃತ್ತ ಸಿವಿಲ್ ನ್ಯಾಯಾಧೀಶರನ್ನು ಅರೆಕಾಲಿಕ ಆಧಾರದಲ್ಲಿ ನೇಮಕ ಮಾಡಿಕೊಂಡು, ಪ್ರತಿ ಬಾರಿಯ ಸಭೆಗೆ ಎರಡು ಸಾವಿರದ ಐದು ನೂರು ರೂಪಾಯಿಗಳ ಗೌರವಧನವನ್ನು ಸಂದಾಯ ಮಾಡಲಾಗುತ್ತದೆ. ಕುಂದುಕೊರತೆ ನಿವಾರಣಾ ಸಮಿತಿಯ ಇತರೆ ಸದಸ್ಯರನ್ನು ಅರೆಕಾಲಿಕ ಆಧಾರದಲ್ಲಿ ನೇಮಕ ಮಾಡಿಕೊಂಡು, ಪ್ರತಿಬಾರಿಯ ಸಭೆಗೆ ಒಂದು ಸಾವಿರ ರೂಪಾಯಿಗಳ ಗೌರವಧನವನ್ನು ಸಂದಾಯ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಜೂನ್ 28 ಕೊನೆಯ ದಿನವಾಗಿದ್ದು, ಆಸಕ್ತ ಅರ್ಜಿದಾರರು ಹೆಚ್ಚಿನ ಮಾಹಿತಿಗಾಗಿ ನಗರ ಅಭಿಯಾನ ವ್ಯವಸ್ಥಾಪಕರು, ನಗರ ಬಡತನ ನಿರ್ಮೂಲನ ಕೋಶ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯನ್ನು ಸಂಪರ್ಕಿಸುವಂತೆ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.