ಮಂಗಳೂರು ಬೃಹತ್ ಉದ್ಯೋಗ ಮೇಳಕ್ಕೆ ರಮಾನಾಥ್ ರೈ ಚಾಲನೆ
ಮಂಗಳೂರು : ಮಂಗಳೂರು ಬೃಹತ್ ಉದ್ಯೋಗ ಮೇಳಕ್ಕೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದ.ಕ ಜಿಲ್ಲಾ ಉಸುವಾರಿ ಸಚಿವ ಬಿ ರಮಾನಾಥ್ ರೈ ಚಾಲನೆ ನೀಡಿದರು
ಮಂಗಳೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಇಂದು ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಉದ್ಯೋಗ ಮೇಳವು ಅನೇಕ ನಿರುದ್ಯೋಗಿಗಳ ಬಾಳಲ್ಲಿ ನವಚೇತನವನ್ನು ಮೂಡಿಸುವ ಕೆಲಸವನ್ನು ಮಾಡುವುದರಿಂದ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಅವರವರ ನೈಪುಣ್ಯತೆ ಹಾಗೂ ಪ್ರತಿಭೆಗಳಿಗೆ ಸಂಬಂಧಪಟ್ಟು ನಡೆಯುತ್ತದೆ ಬದಲಾಗಿ ಯಾವುದೇ ಅಂಕಗಳು ಇಲ್ಲಿ ಪ್ರಮುಖವಾಗುವುದಿಲ್ಲ ಎಂದು ಹೇಳಿದರು. ಹಿಂದಿನ ದಿನಗಳಲ್ಲಿ ಶ್ರೀಮಂತರ ಮಕ್ಕಳು ಮಾತ್ರ ಇಂಜಿನಿಯರಿಂಗ್ ವೈದ್ಯಕೀಯ ಪದವಿಯನ್ನು ಪಡೆಯುವ ಅವಕಾಶವಿತ್ತು ಆದರೆ ಇಂದು ಕಾಲ ಬದಲಾಗಿದ್ದು ಸಾಮಾನ್ಯ ಮಕ್ಕಳು ಕೂಡ ಉನ್ನತ ಪದವಿಯನ್ನು ಪಡೆಯಲು ಅವಕಾಶ ಇರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಹಿಂದಿನ ಕಾಲದ ಇತಿಹಾಸವನ್ನು ಪ್ರೇರಣೆಯಾಗಿಟ್ಟುಕೊಂಡು ಯುವಕರು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಶುಭ ಹಾರೈಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್ ಪ್ರಾಸ್ತಾವಿಕವಾಗಿ ಮಾತನಾಡಿ ಉದ್ಯೋಗಮೇಳದ ಪ್ರಯೋಜನವನ್ನು ಪಡೆಯುವ ವಿದ್ಯಾರ್ಥಿಗಳು ತಮ್ಮ ಪೋಷಕರನ್ನು ಗೌರವಯುತವಾಗಿ ಕಾಣುವ ಮೂಲಕ ಅವರಿಗೆ ನೆಮ್ಮದಿಯ ಜೀವನ ನಡೆಸಲು ಪ್ರಯತ್ನಿಸಬೇಕು ಎಂದರು ಹಾಗೂ ಜಿಲ್ಲೆಯಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದೇ ಸರಕಾರದ ಗುರಿಯಾಗಿದ್ದು ಇದಕ್ಕಾಗಿ ಸರ್ಕಾರವು 50 ಲಕ್ಷ ರೂ ಅನುದಾನವನ್ನು ನೀಡಿದೆ ಎಂದು ತಿಳಿಸಿದರು.
ಉದ್ಯೋಗವನ್ನು ಪಡೆದ ಅಭ್ಯರ್ಥಿಗಳು ತಮ್ಮ ಕೆಲಸದ ಪ್ರವೃತಿಯನ್ನು ಅರಿತು ತಾಳ್ಮೆಯುತವಾಗಿ ತಮ್ಮ ಕರ್ತವ್ಯವನ್ನು ನಡೆಸಬೇಕು. ಅಲ್ಲದೇ ಬಡತನದಲ್ಲಿ ಹುಟ್ಟಿ ಬಡತನದಲ್ಲೇ ಸಾಯುವ ಪರಿಸ್ಥಿತಿ ಮುಂದಿನ ಪೀಳಿಗೆಗೆ ಬರಬಾರದು ಎಂದು ಹೇಳಿದರು. ಮೇಳದಲ್ಲಿ 165 ಕಂಪೆನಿಗಳು ಭಾಗವಹಿಸಿದ್ದು 9000 ಮಂದಿ ನೋಂದಣಿಯನ್ನು ಮಾಡಿಕೊಂಡಿದ್ದಾರೆ ಹಾಗೂ ಅದರಲ್ಲಿ 5000 ಕ್ಕಿಂತಲೂ ಹೆಚ್ಚಿನ ಉದ್ಯೋಗವಕಾಶಗಳು ಲಭ್ಯವಿದೆ ಎಂದು ತಿಳಿಸಿದರು.
ಪ್ರಸ್ತುತ ವರ್ಷದ ಮೇಳದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿಲ್ಲ ಬದಲಾಗಿ ಮುಂದೆ ಇಂಜಿನಿಯರಿಂಗ್ ಪದವೀಧರರಿಗೆ ವಿಶೇಷ ಮೇಳದ ಆಯೋಜನೆಯನ್ನು ಮಾಡಲಾಗುವುದು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಹೆಚ್. ಖಾದರ್, ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ವಿವಿಯ ಕುಲಸಚಿವ ನಾಗೇಂದ್ರ ಪ್ರಕಾಶ್, ಎಂ.ವಿ ಖಾನ್., ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಕೊಣಾಜೆ ಗ್ರಾ. ಪಂ ಅಧ್ಯಕ್ಷ ಶೌಕತ್ ಅಲಿ , ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ರಶೀದಾ ಬಾನು, ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಷಾ ಮತ್ತಿತರರು ಉಪಸ್ಥಿತರಿದ್ದರು.