ಮಂಗಳೂರು – ಬೆಂಗಳೂರು ರೈಲು ವೇಳಾಪಟ್ಟಿ ಬದಲು
ಮಂಗಳೂರು: ಕಣ್ಣೂರು ಕೆಎಸ್ಆರ್ (ವಯಾ ಮಂಗಳೂರು) ರೈಲನ್ನು ಐದು ತಿಂಗಳ ಕಾಲ ಕೆಎಸ್ಆರ್. ಯಶವಂತಪುರ ನಿಲ್ದಾಣಕ್ಕೆ ಸಂಚರಿಸುವುದನ್ನು ರದ್ದುಪಡಿಸುವ ನಿರ್ಧಾರವನ್ನು ರೈಲ್ವೇ ಇಲಾಖೆ ಅಂಶಿಕವಾಗಿ ಹಿಂಪಡೆದಿದೆ.
ನವೆಂಬರ್ 1ರಿಂದ ಮಾರ್ಚ್ 31ರ ವರೆಗೆ ಯಶವಂತಪುರದಲ್ಲಿ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಕಾರಣ ಮುಂದಿಟ್ಟು 16511 ಹಾಗೂ 16512 ನಂಬರಿನ ರೈಲುಗಳನ್ನು ಯಶವಂತಪುರ, ಕೆಎಸ್ಆರ್ ಹೋಗದೆಯೇ ಎಸ್ಎಂವಿಟಿಬಿಯಿಂದ ಸಂಚರಿಸುವಂತೆ ರೈಲ್ವೇ ಇಲಾಖೆ ಪ್ರಕಟನೆ ಹೊರಡಿಸಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಲಾಖೆ ಮತ್ತೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ.
ಈಗಿನ ಮಾಹಿತಿಯಂತೆ 16511 ಬೆಂಗಳೂರು-ಕಣ್ಣೂರು ಎಕ್ಸ್ಪ್ರೆಸ್ ರೈಲು ಕೆಎಸ್ಆರ್ನಿಂದ ರಾತ್ರಿ 9.35ಕ್ಕೆ ಹೊರಡುವ ಬದಲು ಎಸ್ಎಂವಿಟಿಬಿಯಿಂದ ರಾತ್ರಿ 8ಕ್ಕೆ ಹೊರಟು ಕೆಎಸ್ಆರ್ಗೆ ಹೋಗದೆ ಯಶವಂತಪುರಕ್ಕೆ 9.25ಕ್ಕೆ ಆಗಮಿಸುವುದು, ಅಲ್ಲಿಂದ 9.45ಕ್ಕೆ ಹೊರಡಲಿದೆ. ನಂ. 16512 ರೈಲು ಕಣ್ಣೂರಿನಿಂದ 5.05ಕ್ಕೆ ಸಂಜೆ ಹೊರಟು ಯಶವಂತಪುರಕ್ಕೆ ಮರುದಿನ ಬೆಳಗ್ಗೆ 6.10ಕ್ಕೆ ತಲಪುವುದು, ಅಲ್ಲಿಂದ 6.30ಕ್ಕೆ ಹೊರಟು ಎಸ್ಎಂವಿಟಿಬಿಗೆ 7.45ಕ್ಕೆ ತಲುಪಲಿದೆ. ಆದರೆ ಕೆಎಸ್ಆರ್ ಸ್ಟೇಷನ್ಗೆ ಹೋಗುವುದಿಲ್ಲಎಂದು ಪ್ರಕಟನೆ ತಿಳಿಸಿದೆ.