Home Mangalorean News Kannada News ಮಂಗಳೂರು : ಮಂಜುನಾಥ ಹಿಲಿಯಾಣ ಅವರಿಗೆ ಒಲಿದ ಪುಟ್ಟಣ್ಣ ಕುಲಾಲ ಪ್ರಶಸ್ತಿ

ಮಂಗಳೂರು : ಮಂಜುನಾಥ ಹಿಲಿಯಾಣ ಅವರಿಗೆ ಒಲಿದ ಪುಟ್ಟಣ್ಣ ಕುಲಾಲ ಪ್ರಶಸ್ತಿ

Spread the love

ಮಂಗಳೂರು : ಮಂಜುನಾಥ ಹಿಲಿಯಾಣ ಅವರು ಬರೆದ ”ಅಣ್ಣು” ಕಥೆ ಈ ಸಲದ ಪುಟ್ಟಣ್ಣ ಕುಲಾಲ್ ಯುವ ಕಥೆಗಾರ ಪ್ರಶಸ್ತಿಗೆ ಭಾಜನವಾಗಿದೆ. ಇದೇ ಸಂದರ್ಭದಲ್ಲಿ ಮಲ್ಯಾಡಿ ಮುತ್ತಯ್ಯ ಶೆಟ್ಟಿ ಅವರ ಜೀವಮಾನದ ಸಮಾಜಮುಖಿ ಸೇವೆಗಾಗಿ ಪುಟ್ಟಣ್ಣ ಕುಲಾಲ ವರುಷದ ಪುರಸ್ಕಾರವನ್ನು ನೀಡಲಾಯಿತು. ಪುಟ್ಟಣ್ಣ ಕುಲಾಲ ಪ್ರತಿಷ್ಠಾನದ ಸಂಸ್ಥಾಪಕರು ಡಾ ಎಂ. ಅಣ್ಣಯ್ಯ ಕುಲಾಲ ಉಳ್ತೂರು ಅವರು ನಗರದ ರವೀಂದ್ರ ಕಲಾ ಭವನದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನಕುಮಾರ ಕಟೀಲ ಅವರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ನೀಡಿದರು. ಆಕಾಶವಾಣಿ ಮಂಗಳೂರು ಕೇಂದ್ರವು ಪುಟ್ಟಣ್ಣ ಕುಲಾಲ ಪ್ರತಿಷ್ಥಾನ(ರಿ), ಕನ್ನಡ ಸಂಘ, ವಿ.ವಿ. ಕಾಲೇಜು ಹಾಗೂ ಕನ್ನಡ ಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಸಮಾರಂಭವನ್ನು ಉದ್ಘಾಟಿಸಿದವರು ಮಂಗಳೂರು ಆಕಾಶವಾಣಿಯ ಸಹಾಯಕ ನಿಲಯ ನಿರ್ದೇಶಕರು ಹಾಗೂ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ವಸಂತಕುಮಾರ ಪೆರ್ಲ.
ಕಳೆದ ಶತಮಾನದಲ್ಲಿ ಸಾಹಿತ್ಯದಿಂದ ರಾಜಪ್ರಭುತ್ವ ಮರೆಯಾಗಿ ಪ್ರಜಾಪ್ರಭುತ್ವದತ್ತ ಒಲವು ತೋರಿಸಲು ಸಾಹಿತ್ಯವು ಸಹಾಯ ಮಾಡಿತು. ಸಾಹಿತ್ಯಿಕ ಅಭಿವ್ಯಕ್ತಿಗಳು ಯಂತ್ರನಾಗರೀಕತೆಯ ಕುಲುಮೆಗಳಾಗಿ ಹೊರಬಂದವು. ಆಗ ಜನರು ತಮ್ಮ ಅನುಭವವನ್ನೇ ಕಿರು ಅಭಿವ್ಯಕ್ತಿಯ ಮೂಲಕ ವ್ಯಕ್ತಗೊಳಿಸಿದರು ಅದೇ ಕಥೆಯಾಯಿತು ಎಂದು ಡಾ. ವಸಂತಕುಮಾರ ಪೆರ್ಲ ನುಡಿದರು. ಡಾ. ಪೆರ್ಲ್ ಅವರು ಪುಟ್ಟಣ್ಣ ಕುಲಾಲ್ ಯುವ ಕಥೆಗಾರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಉದಯೋನ್ಮುಖ ಯುವ ಕಥೆಗಾರರ ಕಥಾಕಮ್ಮಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಂದುವರೆದು ಕಥೆಯನ್ನು ಬರೆದ ಮೇಲೆ ಅದನ್ನು ಪ್ರಸ್ತುತ ಪಡಿಸುವುದು, ಕೇಳುಗರ ಹೃದಯಕ್ಕೆ ತಲುಪುವ ಹಾಗೆ ಮುಟ್ಟಿಸುವುದು ಸಹ ಬಹಳ ಮುಖ್ಯ ಎಂದು ನುಡಿದರು.

ಹಿಂದೆ ಅಜ್ಜಿಯಂದಿರು ತಮ್ಮ ಮೊಮ್ಮಕ್ಕಳಿಗೆ ಕಥೆ ಹೇಳುತ್ತಿದ್ದರು. ಆದರೆ ಇಂದಿನ ಸಣ್ಣ ಕುಟುಂಬದಲ್ಲಿ ಅಂತಹ ಅವಕಾಶ ಇಲ್ಲ. ಹಾಗಾಗಿ ಮಕ್ಕಳಲ್ಲಿ ಸೃಜನಶೀಲತೆ ಕಡಿಮೆಯಾಗ್ತಾ ಇದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾದ್ಯಾಪಕರು ಮತ್ತು ಡೀನ ಪ್ರೊ. ಎ. ವಿ. ನಾವಡ ತಿಳಿಸಿದರು.
ಕಥಾಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ರಂಗಕರ್ಮಿ ಹಾಗೂ ಸಣ್ಣ ಕಥೆಗಾರರಾದ ಉದ್ಯಾವರ ಮಾಧವ ಆಚಾರ್ಯ ಅವರು ಯುವ ಬರಹಗಾರರಿಗೆ ವೇದಿಕೆ ಒದಗಿಸಿ ಅವರ ಪ್ರತಿಭೆಯನ್ನು ಜನರ ಮುಂದೆ ಅನಾವರಣಗೊಳಿಸಿದಾಗ ಯುವ ಬರಹಗಾರರಿಗೂ ತಮ್ಮ ಕಲೆಯನ್ನು ಉಳಿಸಿ ಬೆಳೆಸಲು ಸ್ಪೂರ್ತಿ ಬರುತ್ತದೆ. ಅವರ ಬದುಕಿನಲ್ಲಿ ಹೊಸ ಆಶಾಕಿರಣ ಗೋಚರಿಸಿ ಆ ಕಲೆ ಉಳಿಯುತ್ತದೆ, ಮುಂದೆ ಬೆಳೆಯುತ್ತದೆ ಎಂದು ನುಡಿದರು.
ಬದುಕನ್ನು ಕಲಿಸುವುದು ಶಿಕ್ಷಣ. ಆದರೆ ರಾಷ್ಟ್ರದ ಬಗೆಗೆ ಚಿಂತನೆ ಮಾಡುವ ಸಾಹಿತ್ಯ ರಚನೆಯಾಗಬೇಕು ಯುವಕರೇ ನೀವು ದೇಶ ಪ್ರೇಮ ಬೆಳೆಸಿಕೊಳ್ಳಿ ಎಂದು ಸಮಾರಂಬಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಕ್ಷಿಣ ಕನ್ನಡದ ಸಂಸದರಾದ ನಳಿನಕುಮಾರ ಕಟೀಲ ಕರೆನೀಡಿದರು.
ಯಾವುದೇ ಭಾಷೆ, ಕಲೆಯನ್ನು ಉಳಿಸಿ ಬೆಳೆಸಬೇಕೆಂದರೆ ಅದು ಮಕ್ಕಳು ಅಥವಾ ಯುವಜನಾಂಗದಿಂದ ಮಾತ್ರ ಸಾಧ್ಯ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸುಂದರ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಪುಟ್ಟಣ್ಣ ಕುಲಾಲ ಪ್ರತಿಸ್ಠಾನವು ಆಕಾಶವಾಣಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳೊಟ್ಟಿಗೆ ಜೊತೆಗೂಡಿ ಇಲ್ಲಿ ಮಾಡ್ತಾ ಇದೆ ಎಂದು ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಆಶಯ ಭಾಷಣದಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ಪ್ರತಿ ವರುಷವೂ ತಮ್ಮ ಪ್ರತಿಷ್ಠಾನವು ಈ ಕಾರ್ಯಕ್ರಮವನ್ನು ಮುಂದುವರೆಸಿಕೊಂಡು ಹೋಗುತ್ತದೆ ಎಂದು ಘೋಷಿಸಿದರು.
ಈಗಿನ ಜೀವನವೇ ಸಂಘರ್ಷದಲ್ಲಿ ಇರುವದರಿಂದ, ಮನುಷ್ಯನಿಗೆ ರುಚಿ ಮತ್ತು ಅಭಿರುಚಿ ಎರಡೂ ಸಹಜವಾಗಿ ಹುಟ್ಟುತ್ತಿಲ್ಲ ಭಾಷೆಯ ಉಳಿವಿಗಾಗಿ ಎಲ್ಲ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯುನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲರಾದ ಡಾ ಉದಯಕುಮಾರ ಇರ್ವತ್ತೂರು ಕರೆ ನೀಡಿದರು.
ಯುವಕರೇ ಭ್ರಮಾಲೋಕದಲ್ಲಿ ಬದುಕಬೇಡಿ, ನೀವು ಬರೆದ ಎಲ್ಲ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ ಎಂದೂ ಇಲ್ಲ. ಗಟ್ಟಯಾಗಿದ್ದುದು ಉಳಿಯುತ್ತದೆ. ಉಳಿದದ್ದು ಮರೆಯಾಗುತ್ತದೆ. ಜೀವನದಲ್ಲಿ ಬಂದದನ್ನು ಎದುರಿಸುವದು ಕಲಿಯಬೇಕು ಎಂದು ನುಡಿದ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುಂದಪ್ರಭ ಪತ್ರಿಕೆಯ ಸಂಪಾದಕರಾದ ಯು. ಎಸ್. ಶೆಣೈ ನುಡಿದರು.
ನಮ್ಮ ಭಾಷೆ ಹಾಗೂ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಮಾಧ್ಯಮಗಳು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಕೆ. ಅಶೋಕವರು ಪ್ರಸ್ತಾವಿಕ ಭಾಷಣದಲ್ಲಿ ನುಡಿದರು.
ಬದಲಾದ ಈ ಕಾಲಘಟ್ಟದಲ್ಲಿ ಕಲಾಪ್ರಾಕಾರವನ್ನು ಉಳಿಸಿ ಬೆಳೆಸುವದು ಯುವ ಜನಾಂಗದ ಕರ್ತವ್ಯವಾಗಬೇಕು ಎಂದು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಸದಾನಂದ ಹೊಳ್ಳ ಅವರು ತಮ್ಮ ಸ್ವಾಗತ ಭಾಷಣದಲ್ಲಿ ನುಡಿದರು.
ಮಂಜುನಾಥ ಕುಲಾಲ ಹಿಲಿಯಾಣ, ಮೊಗೇರಿ ಶೇಖರ ದೇವಾಡಿಗ, ಮನೋಜ ರಾವ್, ತಾರಾನಾಥ ಜಿ ಮೇಸ್ತ, ಪ್ರವೀಣ ಕುಮಾರ, ಭರತರಾಜ ಕುಲಾಲ, ಕುಸುಮ, ದೀಕ್ಷಿತ ವರ್ಕಾಡಿ ಮತ್ತು ಪೂರ್ಣೀಮಾ ಎನ್. ಭಟ್ ಯುವ ಕಥೆಗಾರರು ತಮ್ಮ ಕಥೆಯನ್ನು ಓದಿದರು. ಎಲ್ಲರ ಕಥಾ ಶೈಲಿ, ಕಥಾ ಹಂದರ, ವಿಷಯ ಎಲ್ಲವೂ ವಿಭಿನ್ನವಾಗಿತ್ತು. ಜನರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮದ ನಂತರ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ವಿಶ್ವವಿದ್ಯಾಲಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನಾಗಪ್ಪ ಗೌಡ, ಕನ್ನಡ ಕಟ್ಟೆಯ ಮಹಾಬಲ ಕುಲಾಲ ಉಪಸ್ಥಿತರಿದ್ದರು.
ವಂದನಾರ್ಪಣೆಯನ್ನು ಕನ್ನಡಕಟ್ಟೆಯ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಹೆಚ್ ಹಾಗೂ ಮಹಾಬಲ ಕುಲಾಲ ನೆರವೇರಿಸಿದರು. ನಿರೂಪಣೆ ಹಾಗೂ ಸಭಾ ನಿರ್ವಹಣೆಯನ್ನು ಡಾ. ಸದಾನಂದ ಪೆರ್ಲ ನಿರ್ವಹಿಸಿದರು. ವಾರಾಂತ್ಯದಲ್ಲಿ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಜರುಗಿದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು ಮೂಡಿಸಿತ್ತು.


Spread the love

Exit mobile version