ಮಂಗಳೂರು: ದಕ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ಮಂಗಳೂರಿನ ಶಾಲೆಯೊಂದರಲ್ಲಿ ನಡೆದ 4 ರ ಹರೆಯದ ವಿದ್ಯಾರ್ಥಿಯೊರ್ವಳ ಮೇಲಿನ ಲೈಂಗಿಕ ಕಿರುಕುಳದ ವಿರುದ್ದ ಜಿಲ್ಲಾಧಿಕಾರಿಗಳ ಕಛೇರಿಗಳ ಎದುರು ಶುಕ್ರವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮೇಯರ್ ಅಶ್ರಫ್ ಮಗುವಿನ ಮೇಲೆ ನಡೆದು ಕಿರುಕುಳವನ್ನು ಶಾಲೆಯ ಆಡಳಿತ ಮಂಡಳಿ ನಿರಾಕರಿಸುತ್ತಿದ್ದು, ಮಂಗಳೂರಿನ ಒಂದೂ ಶಾಲೆ ಕೂಡ ನೊಂದ ಮಗುವಿನ ಪರವಾಗಿ ನಿಲ್ಲಲು ಮುಂದೆ ಬಂದಿಲ್ಲ. ಜಿಲ್ಲೆಯ ಯಾವುದೇ ಒರ್ವ ಮಂತ್ರಿಗಳು ಕೂಡ ಮಗುವಿಗೆ ನ್ಯಾಯ ಒದಗಿಸುವ ಕಾರ್ಯ ಮಾಡದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮಂತ್ರಿಗಳು ಮುಂದಿನ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಓಟ್ ಪಡೆಯುವುದರಲ್ಲಿ ನಿರತರಾಗಿದ್ದು, ಕನಿಷ್ಟ ನೊಂದ ಮಗುವಿಗೆ ನೈತಿಕ ಬೆಂಬಲ ಕೂಡ ನೀಡುವ ಸೌಜನ್ಯ ಅವರಿಗಿಲ್ಲ. ಜಿಲ್ಲಾಡಳಿತ ಇದರಲ್ಲಿ ತಮ್ಮ ಬೆಂಬಲ ನೀಡಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಆದರೆ ಈ ವಿಷಯ ಕೇವಲ ಒಬ್ಬರಿಗೆ ಸಂಬಂಧಿಸಿದ್ದಲ್ಲ ಬದಲಾಗಿ ಪ್ರತಿಯೊಬ್ಬರು ಇದರ ವಿರುದ್ದ ದನಿಯೆಬ್ಬಿಸಬೇಕಾಗಿದೆ. ನೊಂದ ಮಗು ಒಂದು ಅಲ್ಪಸಂಖ್ಯಾತ ಬಡ ಸಮುದಾಯದಿಂದ ಬಂದಿದ್ದು, ಇದೇ ಒಂದು ಶ್ರೀಮಂತ ಕುಟುಂಬದಿಂದ ಬಂದದ್ದೇ ಆದಲ್ಲಿ ವಿಷಯ ದೊಡ್ಡದಾಗಿ ಪ್ರತಿಯೊಬ್ಬರು ನೊಂದ ವ್ಯಕ್ತಿಗೆ ಬೆಂಬಲ ನೀಡಲು ಮುಂದೆ ಬರುತ್ತಿದ್ದರು ಆದರೆ ಇನ್ನೂ ಕಾಲ ಮಿಂಚಿಲ್ಲ ಇನ್ನಾದರೂ ಎಲ್ಲರೂ ನೊಂದ ಮಗುವಿಗೆ ನ್ಯಾಯ ಒದಗಿಸಲು ಮುಂದೆ ಬರಬೇಕಾಗಿದೆ ಎಂದರು.
ಹಮೀದ್ ಕುದ್ರೋಳಿ ಮಾತನಾಡಿ ಜಿಲ್ಲಾ ಪೋಲಿಸ್ ಕಮೀಶನರ್ ಮತ್ತು ಜಿಲ್ಲಾಧಿಕಾರಿಗಳು ನೀಡಿದ ಬೆಂಬಲಕ್ಕೆ ಧನ್ಯವಾದ ಅರ್ಪಿಸಿ, ಸ್ಥಳೀಯ ಶಾಸಕರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ನಾಚಿಕೆಗೇಡು. ಶಾಲಾ ಆಡಳಿತ ಮಂಡಳಿ ಈ ಕುರಿತು 10 ದಿನಗಳ ಒಳಗೆ ಸುದ್ದಿಗೋಷ್ಟಿ ನಡೆಸಿ ಮಗುವಿಗೆ ಸರಿಯಾದ ಬೆಂಬಲ ನೀಡುವಂತೆ ಆಗ್ರಹಿಸಿದರು.
ಪ್ರತಿಭಟನೆಗೆ ವಿವಿಧ ಮುಸ್ಲಿಂ ಸಂಘಟನೆಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದವು.