ಮಂಗಳೂರು ಮನಪಾ ವ್ಯಾಪ್ತಿಯ 10 ಬೀದಿಬದಿ ವ್ಯಾಪಾರಿಗಳಿಗೆ ಮಾತ್ರ ಗುರುತಿನ ಚೀಟಿ: ಮೇಯರ್ ಸುಧೀರ್ ಶೆಟ್ಟಿ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೆ ಕೇವಲ 10 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಮಾತ್ರವೇ ಗುರುತಿನ ಚೀಟಿ ನೀಡಲಾಗಿದೆ. ಪಾಲಿಕೆಯ 18 ಷರತ್ತುಗಳನ್ನು ಒಪ್ಪಿ ಅಫಿದಾವಿತ್ ಸಲ್ಲಿಸಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಉಳಿದ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ಸಾಧ್ಯವಾಗಿಲ್ಲ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.
ಮೇಯರ್ ಕೊಠಡಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನಪಾ ಗುರುತಿನ ಚೀಟಿ ನೀಡಿ ಬೀದಿಬದಿ ವ್ಯಾಪಾರಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಬೀದಿಬದಿ ವ್ಯಾಪಾರಸ್ಥರ ಸಂಘಟನೆಯ ಪ್ರತಿನಿಧಿಗಳ ಆರೋಪ ನಿರಾಧಾರ ಎಂದರು.
ಬೀದಿಬದಿ ವ್ಯಾಪಾರವೆಂದರೆ, ಕುಳಿತುಕೊಂಡು, ತಳ್ಳುಗಾಡಿ ಅಥವಾ ತಲೆಯಲ್ಲಿ ಹೊತ್ತು ವ್ಯಾಪಾರ ಮಾಡುವುದಾಗಿದೆ. ಅದಕ್ಕಾಗಿ ನಗರದಲ್ಲಿ 10 ಕಡೆಗಳಲ್ಲಿ ವ್ಯಾಪಾರ ವಲಯಗಳನ್ನು ಗುರುತಿಸಿ ನಗರ ಯೋಜನಾ ಸಮಿತಿಯಲ್ಲಿ ನಿರ್ಧರಿಸಿ ಪರಿಶೀಲನೆ ಮಾಡಿ ಕ್ರಮ ವಹಿಸಲಾಗುವುದು. ನಗರದ ಎರಡು ಪ್ರಮುಖ ರಸ್ತೆಗಳನ್ನು ಗುರುತಿಸಿ ಟೆಂಡರ್ ಮೂಲಕ ‘ಫುಡ್ ಸ್ಟ್ರೀಟ್’ ವ್ಯವಸ್ಥೆ ಕಲ್ಪಿಸಲು ಕೂಡಾ ಪಾಲಿಕೆ ಮುಂದಾಗಿದೆ ಎಂದು ಮೇಯರ್ ತಿಳಿಸಿದರು.
ನಗರದಲ್ಲಿ 2,500ರಷ್ಟು ತಳ್ಳುಗಾಡಿ, ಗೂಡಂಗಡಿಗಳಿವೆ. ಒಬ್ಬರ ಹೆಸರಿನಲ್ಲಿ 200ಕ್ಕೂ ಅಧಿಕ ತಳ್ಳುಗಾಡಿಗಳಿರುವುದು ಗಮನಕ್ಕೆ ಬಂದಿದೆ ಎಂದು ಮೇಯರ್ ಹೇಳಿದರು.
ನಗರದಲ್ಲಿ ವ್ಯಾಪಾರ ವಲಯ ಮಾಡುವ ಬಗ್ಗೆ ಕಳೆದ ಹಲವು ವರ್ಷಗಳಿಂದ ಪಾಲಿಕೆ ಹೇಳುತ್ತಲೇ ಬಂದಿದ್ದರೂ ಇನ್ನೂ ಮಾಡಲಾಗಿಲ್ಲ. ಸೂಕ್ತ ವ್ಯವಸ್ಥೆ ಮಾಡದೆ ಈ ರೀತಿ ಬೀದಿಬದಿಗಳ ಮೇಲೆ ಟೈಗರ್ ಕಾರ್ಯಾಚರಣೆ ಮಾಡುವುದು ಸರಿಯೇ ಎಂಬ ಪ್ರಶ್ನೆಗೆ, ಪ್ರಧಾನ ಮಂತ್ರಿಗಳ ದೀನ್ ದಯಾಲ್ ಸ್ವನಿಧಿ ಯೋಜನೆಯಡಿ ಈಗಾಗಲೇ 667 ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಷರತ್ತುಗಳಿಗೆ ಬದ್ಧರಾಗಲು ಯಾರೂ ಒಪ್ಪದ ಕಾರಣ ಕೇವಲ 10 ಮಂದಿಗೆ ಮಾತ್ರವೇ ಸಾಂಕೇತಿಕವಾಗಿ ಗುರುತಿನ ಚೀಟಿ ನೀಡಲಾಗಿದೆ. ಆದರೆ ನಗರದ ಹೃದಯಭಾಗವಾದ ಕೆಪಿಟಿ ರಸ್ತೆ, ಲೇಡಿಗೋಶನ್, ಸ್ಟೇಟ್ ಬ್ಯಾಂಕ್, ಕಂಕನಾಡಿ, ಪಂಪ್ ವೆಲ್, ಸುರತ್ಕಲ್ ಸೇರಿದಂತೆ ವಿವಿಧ ಕಡೆ ಸಾವಿರಾರು ಸಂಖ್ಯೆಯಲ್ಲಿ ಗೂಡಂಗಡಿಗಳು, ಬೀದಿಬದಿ ವ್ಯಾಪಾರ ನಡೆಯುತ್ತಿದೆ. ಕಾರ್ಯಾಚರಣೆ ವೇಳೆ ಬಹುತೇಕ ಆಹಾರ ಪೂರೈಕೆಯ ಗೂಡಂಗಡಿಗಳು ಸೇರಿದಂತೆ ಬೀದಿಬದಿ ವ್ಯಾಪಾರದ ಸ್ಥಳಗಳಲ್ಲಿ ಸ್ವಚ್ಛತೆಯ ಕೊರತೆ, ಜಿರಳೆ, ರಾಶಿ ಹೆಗ್ಗಣಗಳ ರಾಶಿ ಕಂಡು ಬಂದಿದೆ. ಕೆಲ ಗೂಡಂಗಡಿಗಳಲ್ಲಿ ಶರಾಬು ಮಾರಾಟ, ಆಹಾರ ಪದಾರ್ಥಗಳಿಗೆ ಅಜಿನೊಮೋಟೋ ಮೊದಲಾದ ಪದಾರ್ಥಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ನಗರದಲ್ಲಿ ಈಗಾಗಲೇ ಡೆಂಗಿ, ಮಲೇರಿಯಾದ ಹಿನ್ನೆಲೆಯಲ್ಲಿ ಜನರ ಆರೋಗ್ಯ ದೃಷ್ಟಿಯಿಂದ ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ಪಾದಚಾರಿಗಳಿಗೆ ಅನಧಿಕೃತ ಗೂಡಂಗಡಿ, ಬೀದಿಬದಿ ವ್ಯಾಪಾರಿಗಳಿಂದ ತೊಂದರೆಯಾಗುತ್ತಿರುವುದರಿಂದ ಟೈಗರ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದು ನಿರಂತರವಾಗಿ ಮುಂದುವರಿಯಲಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಹೇಳಿದರು.
ಬೀದಿಬದಿ ವ್ಯಾಪಾರಿಗಳು ಷರತ್ತಿಗೆ ಒಪ್ಪಿಲ್ಲದ ಮೇಲೆ, ಗುರುತಿನ ಚೀಟಿ ನೀಡಲಾಗಿಲ್ಲ ಎಂದ ಮೇಲೆ ಪಿಎಂ ಸ್ವನಿಧಿಯಲ್ಲಿ ಯಾವ ಆಧಾರದಲ್ಲಿ ಎಷ್ಟು ಮಂದಿಗೆ ಸಾಲ ನೀಡಲಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಪಿಎಂ ಸ್ವನಿಧಿ ಯೋಜನೆಯಡಿ 667 ಮಂದಿ ಬೀದಿಬದಿ ವ್ಯಾಪಾರಸ್ಥರಿಗೆ ಸಾಲ ನೀಡಲಾಗಿದೆ. ಅವರಲ್ಲಿ 63 ಮಂದಿ ತಳ್ಳುಗಾಡಿ ವ್ಯಾಪಾರಿಗಳು. ಕೆಲವರು ಮನೆಗಳಲ್ಲೇ ಆಹಾರ ತಯಾರಿಸಿ ಮಾರಾಟ ಮಾಡುವವರೂ ಇದ್ದಾರೆ ಎಂದರು.
ಕಳೆದ ಏಳೆಂಟು ತಿಂಗಳಿನಿಂದೀಚೆಗೆ ಫೋನ್ ಇನ್ ಕಾರ್ಯಕ್ರಮ, ಮನಪಾ ಸಾಮಾನ್ಯ ಸಭೆಗಳಲ್ಲೂ ಸದಸ್ಯರಿಂದ ಅನಧಿಕೃತ ಗೂಡಂಗಡಿ, ಬೀದಿಬದಿ ವ್ಯಾಪಾರಿಗಳಿಂದ ಆಗುತ್ತಿರುವ ತೊಂದರೆಯ ಬಗ್ಗೆ ಚರ್ಚೆಯಾಗಿರುವ ಹಿನ್ನೆಲೆಯಲ್ಲಿ ಜುಲೈ 29ರಿಂದ ಟೈಗರ್ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಬಗ್ಗೆ ಸಾಕಷ್ಟು ಆಕ್ಷೇಪ, ಟೀಕೆ, ಪ್ರತಿರೋಧ ವ್ಯಕ್ತವಾಗಿದೆ. ಕಾರ್ಯಾಚರಣೆ ಆರಂಭದ ಕೆಲ ದಿನಗಳ ಮೊದಲು ಬೀದಿಬದಿ ವ್ಯಾಪಾರಿಗಳ ಸಂಘಟನೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಆಪ್ತ ಕಾರ್ಯದರ್ಶಿ ಮೂಲಕ ಮನವಿ ನೀಡಿದ್ದಾರೆ. ಬಳಿಕ ನನ್ನನ್ನು ಯಾರೂ ಭೇಟಿ ಮಾಡಿಲ್ಲ. ಷರತ್ತು ಒಪ್ಪಿ ವ್ಯಾಪಾರ ನಡೆಸುವವರಿಗೆ ಗುರುತಿನ ಚೀಟಿ ನೀಡಲು ಮನಪಾ ಬದ್ಧವಾಗಿದೆ. ಹಾಗಾಗಿ ವ್ಯಾಪಾರಸ್ಥರ ಸಮಿತಿಯ ಪದಾಧಿಕಾರಿಗಳು ಮುಕ್ತವಾಗಿ ಚರ್ಚೆ ಮಾಡಿ ಬಡ ವ್ಯಾಪಾರಿಗಳಿಗೆ ವ್ಯವಸ್ಥೆ ಕಲ್ಪಿಸಲು ಅವಕಾಶ ನೀಡಬೇಕು ಎಂದರು.
ನಗರದ ಹಲವೆಡೆ ಪಾದಚಾರಿಗಳಿಗೆ ನಡೆದಾಡಲು ತೊಂದರೆಯಾಗುವ ರೀತಿಯಲ್ಲಿ ಕೆಲವು ವಾಣಿಜ್ಯ ಕಟ್ಟಡಗಳವರು ಫುಟ್ಪಾತ್ಗಳನ್ನು ಅತಿಕ್ರಮಿಸಿರುವ ಬಗ್ಗೆ ಈ ಹಿಂದೆಯೇ ಪೊಲೀಸ್ ಆಯುಕ್ತರಿಂದ ಪಟ್ಟಿಯನ್ನು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ನಗರದಲ್ಲಿ ಆಹಾರ ಸುರಕ್ಷತಾ ಸಮಿತಿಯ ಪರವಾನಿಗೆ ಇಲ್ಲದೆಯೂ ಹೊಟೇಲ್ ನಡೆಸುತ್ತಿರುವವರ ಬಗ್ಗೆ ಪಾಲಿಕೆ ಕಾರ್ಯಾಚರಣೆ ನಡೆಸದೆ ಕೇವಲ ಬೀದಿಬದಿ ವ್ಯಾಪಾರಿಗಳ ಮೇಲೆ ಮಾತ್ರ ಆಕ್ರೋಶವೇಕೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಹೊಟೇಲ್ಗಳಿಗೆ ವಾಣಿಜ್ಯ ಪರವಾನಿಗೆಯನ್ನು ಮಾತ್ರವೇ ಮನಪಾದಿಂದ ನೀಡಲಾಗುತ್ತದೆ. ನಮ್ಮ ಗಮನಕ್ಕೆ ಬಂದಾಗ ನಾವು ನೋಟಿಸ್ ನೀಡುತ್ತಾರೆ. ಉಳಿದಂತೆ ಆಹಾರ ಸುರಕ್ಷತೆಯನ್ನು ಸಂಬಂಧಪಟ್ಟ ಇಲಾಖೆಯವರು ಪರಿಶೀಲನೆ, ದಂಡ ವಿಧಿಸುವ ಕಾರ್ಯ ನಿರ್ವಹಿಸಬೇಕು ಎಂದು ಮೇಯರ್ ಉತ್ತರಿಸಿದರು.
ಪಾಲಿಕೆ ಗುರುತಿಸಿರುವ ವ್ಯಾಪಾರ ವಲಯ ಬೀದಿಬದಿ ವ್ಯಾಪಾರಕ್ಕೆ ಸೂಕ್ತವಾಗಿಲ್ಲ. ಅಲ್ಲಿಗೆ ಗ್ರಾಹಕರು ಬರುವುದಿಲ್ಲ ಎಂಬ ದೂರು ಇದೆಯಲ್ಲಾ ಎಂಬ ಪ್ರಶ್ನೆಗೆ, ಜನರು ಎಲ್ಲಿ ಕಡಿಮೆಗೆ ಸಿಗುತ್ತದೋ ಅಲ್ಲಿ ವ್ಯಾಪಾರ ಮಾಡುತ್ತಾರೆ. ನಗರದ ಕುಂಟಿಕಾನದ ಡಿ ಮಾರ್ಟ್ ದೂರವಿದ್ದರೂ ಅಲ್ಲಿಗೆ ಹೋಗುತ್ತಾರೆ. ಹಾಗಾಗಿ ಗ್ರಾಹಕರು ಬರುವುದಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಮೇಯರ್ ನುಡಿದರು.
ಸುದ್ದಿಗೋಷ್ಠಿಯಲ್ಲಿ ಉಪ ಮೇಯರ್ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಭರತ್ ಕುಮಾರ್, ಲೋಹಿತ್ ಅಮೀನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು