ಮಂಗಳೂರು: ಮಾದಕ ವಸ್ತು ಮಾರಾಟ ಇಬ್ಬರ ಬಂಧನ
ಮಂಗಳೂರು: ನಗರದ ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ನಿರೀಕ್ಷಕರಿಗೆ ದೊರೆತ ಖಚಿತ ವರ್ತಮಾನದಂತೆ, ಮಂಗಳೂರು ನಗರದ ಉರ್ವಾ ಚಿಲಿಂಬಿ ಶಿರ್ಡಿ ಸಾಯಿ ಮಂದಿರದ ಕಡೆಯಿಂದ ಹಾದು ಹೋಗುವ ರಸ್ತೆಯಲ್ಲಿ ತಮ್ಮ ಬಾಬ್ತು ಆಲ್ಟೋ ಕಾರ್ ನಲ್ಲಿ ಕುಳಿತು ಇಬ್ಬರು ವ್ಯಕ್ತಿಗಳು ಎಂ.ಡಿ.ಎಂ.ಎ ಫೌಡರ್ ಮಾರಾಟ ಮಾಡಲು ಗಿರಾಕಿಗಳನ್ನು ಕಾಯುತ್ತಿರುವಾಗ ಧಾಳಿ ನಡೆಸಿ 4.80 ಗ್ರಾಂ ತೂಕದ ಎಂ.ಡಿ.ಎಂ.ಎ ಫೌಡರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೆರೂನ್ ಬಣ್ಣದ ಆಲ್ಟೋ ಕಾರು ಮತ್ತು ಮೂರು ಮೊಬೈಲ್ ಪೋನ್ ಹಾಗೂ ನಗದು ಸಮೇತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು,ಈ ಬಗ್ಗೆ ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಬಂಧಿತರನ್ನು ಸುರತ್ಕಲ್ ನಿವಾಸಿ ಮೊಹಮ್ಮದ್ ನಿಯಾಝ್ (25) ಮತ್ತು ಪಾಂಡೇಶ್ವರ ನಿವಾಸಿ ಮೊಹಮ್ಮದ್ ಅಝೀಮ್ (30) ಎಂದು ಗುರುತಿಸಲಾಗಿದೆ.
ಮೊಹಮ್ಮದ್ ಮೇಲೆ ಈ ಹಿಂದೆ ಮಂಗಳೂರು ನಗರದ ಕೋಣಾಜೆ ಪೊಲೀಸ್ ಠಾಣೆ,ಉರ್ವಾ ಪೊಲೀಸ್ ಠಾಣೆ,ಸುರತ್ಕಲ್ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುತ್ತದೆ.
ಮೊಹಮ್ಮದ್ ಅಜೀಂ ಮೇಲೆ ಈ ಹಿಂದೆ ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆ, ಸುರತ್ಕಲ್ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುತ್ತದೆ.
ಬಂಧಿತರಿಂದ 4.80 ಗ್ರಾಂ ತೂಕದ ಎಂ.ಡಿ.ಎಂ.ಎ.ಫೌಡರ್, ಮೆರೂನ್ ಬಣ್ಣದ ಆಲ್ಟೋ ಕಾರು -1 ಮೊಬೈಲ್ ಪೋನ್ – 3, ನಗದು ರೂ:3000/- ವಶಪಡಿಸಿಕೊಂಡಿದ್ದು, ಸ್ವಾಧೀನ ಪಡಿಸಿಕೊಂಡ ಸೊತ್ತಿನ ಒಟ್ಟು ಅಂದಾಜು ಮೌಲ್ಯ: – ರೂ: 2,08,500/- ಆಗಿರುತ್ತದೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ನಿರೀಕ್ಷಕರು ಮತ್ತು ಪೊಲೀಸ್ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.