ಮಂಗಳೂರು: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಸಂಘವೂ ಸೇರಿದಂತೆ ಹಲವು ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳಿವೆ. ಮೂಢನಂಬಿಕೆಗಳ ಬಗ್ಗೆ ಅರಿವು ಮೂಡಿಸುವ, ವೈಚಾರಿಕತೆಯನ್ನು ಬೆಳೆಸುವ ಕಾರ್ಯಕ್ರಮಗಳನ್ನು ಅವರು ಆಗಾಗ ಹಮ್ಮಿಕೊಳ್ಳುತ್ತಿದ್ದರು. ಅಂಥ ವಿದ್ಯಾರ್ಥಿಗಳ ಮೇಲೆ ತೀವೃಗಾಮಿತ್ವದ ಹಾಗೂ ದೇಶದ್ರೋಹದ ದೂರು ದಾಖಲಿಸಿರುವುದು ಅಲ್ಲಿನ ಸ್ಥಾಪಿತ ಹಿತಾಸಕ್ತಿಗಳ ಕೃತ್ಯವಾಗಿದೆ ಎಂಬುದಾಗಿ ವಿಚಾರವಾದಿ ಸಂಘಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಪ್ರೊ| ನರೇಂದ್ರ ನಾಯಕ್ ಹೇಳಿದರು.
ಅವರು ಇಂದು(ಜನವರಿ 20ರಂದು) ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಎಸ್ಎಫ್ಡಿ, ಡಿವೈಎಫ್ಡಿ, ಕರ್ನಾಟಕ ದಲಿತ ಹಕ್ಕುಗಳ ಸಮಿತಿ, ದಲಿತ ಸಂಘರ್ಷ ಸಮಿತಿ ಸಂಯುಕ್ತವಾಗಿ ಹೈದರಾಬಾದಿನಲ್ಲಿ ಸಂಶೋಧಕ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಇವರ ಆತ್ಮಹತ್ಯೆಯ ಪ್ರಚೋದನೆಯನ್ನು ಖಂಡಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಬಿಜೆಪಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಆಳ್ವಿಕೆ ಬಂದ ಮೇಲೆ ಉನ್ನತ ವಿದ್ಯಾಭ್ಯಾಸದ ಸಂಸ್ಥೆಗಳಲ್ಲಿ ಪ್ರತಿಭಾವಂತ ದಲಿತರನ್ನು ವ್ಯವಸ್ಥಿತವಾಗಿ ಅವಮಾನಿಸಿ ಶಿಕ್ಷಣದಿಂದಲೇ ಹೊರಗಿಡುವ ಕಾರ್ಯಸೂಚಿಯನ್ನು ಸಂಘ ಪರಿವಾರ ಹೊಂದಿದ್ದು ಎಬಿವಿಪಿ ಅದನ್ನು ಕಾರ್ಯಗತ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಘಟನೆಯ ಬಳಿಕ ಕಾಂಗ್ರೆಸ್ಸಿಗರು ಭೇಟಿ ನೀಡಿ ಸಾಂತ್ವನದ ನಾಟಕವಾಡುತ್ತಿದ್ದಾರೆ ಎಂದವರು ಎಚ್ಚರಿಸಿದರು.
ಚಿಂತಕ ಪ್ರೊ| ಭೂಮಿಗೌಡ ಮಾತನಾಡಿ, ದಲಿತರು ಹಾಗೂ ಹಿಂದುಳಿದವರನ್ನು ವ್ಯವಸ್ಥಿತವಾಗಿ ವಂಚಿಸುವ ಕೆಲಸವನ್ನು ಮೇಲ್ವರ್ಗದ ಜನ ಮಾಡುತ್ತಾ ಬಂದಿದ್ದಾರೆ. ದಲಿತರು ಮತ್ತು ಶೂದ್ರರು ಮಾಧ್ವಮತಕ್ಕೆ ಭಕ್ತಿ ಸಲ್ಲಿಸುವ ಮೂಲಕ ಮುಕ್ತಿ ತಡೆಯಬಹುದು ಎಂಬುದಾಗಿ ಪೇಜಾವರ ಸ್ವಾಮೀಜಿ ಆಹ್ವಾನಿಸುತ್ತಾರೆ. ಆದರೆ ಸಾವಿನ ಬಳಿಕ ದೊರೆಯುವ ಮುಕ್ತಿ ದಲಿತರಿಗೆ ಬೇಕಾಗಿಲ್ಲ; ಬದುಕಿರುವಾಗ ಅವರಿಗೆ ಸಮಾನತೆ, ನ್ಯಾಯ ದೊರಕಬೇಕಾಗಿದೆ ಎಂದವರು ಪ್ರತಿಪಾದಿಸಿದರು.
ಪ್ರತಿಭಟನಾ ಸಭೆಯನ್ನು ಉದ್ಧೇಶಿಸಿ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ)ರು ಹಿರಿಯ ಮುಖಂಡರಾದ ಎಂ. ದೇವರಾಜ್, ಪಿಯುಸಿಎಲ್ನ ಹಿರಿಯ ಮುಖಂಡರಾದ ಪಿ.ಬಿ. ಡೇಸಾ, ಡಿವೈಎಫ್ಐ ರಾಜ್ಯಸಮಿತಿ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಕರ್ನಾಟಕ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕರಾದ ಲಿಂಗಪ್ಪ ನಂತೂರು, ಸಮುದಾಯ ಸಾಂಸ್ಕøತಿಕ ಸಂಘಟನೆಯ ಮುಖಂಡರಾದ ವಾಸುದೇವ ಉಚ್ಚಿಲ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಪ್ರಗತಿಪರ ಚಿಂತಕರ ವೇದಿಕೆಯ ಅಧ್ಯಕ್ಷ ಡಿ.ಎ. ಪ್ರಸನ್ನ, ನಿವೃತ್ತ ಪ್ರಾಧ್ಯಾಪಕ ಪ್ರೊ| ನರಸಿಂಹ ಮೂರ್ತಿ, ಮಕ್ಕಳ ಹಕ್ಕುಗಳ ಸಂಘಟನೆಯ ರೆನ್ನಿ ಡಿ’ಸೋಜ, ರಂಗ ಕಲಾವಿದ ನಾದಾ ಮಣಿನಾಲ್ಕೂರು, ನೆಹರೂ ಯುವಕೇಂದ್ರದ ಸಂಘಟಕ ರಘುವೀರ್ ಹಾಗೂ ಎಸ್ಎಫ್ಐ ದಲಿತ ಹಕ್ಕುಗಳ ಸಮಿತಿಯ ಪ್ರಮುಖ ಕಾರ್ಯಕ್ರಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಎಸ್ಎಫ್ಐ ಸಂಘಟನೆಯ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ವಂದಿಸಿದರು.