ಮಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಇಲಾಖೆ ವತಿಯಿಂದ ಗುರುವಾರ ವಿಕಲಚೇತನರ ಸಹಾಯವಾಣಿ ಕೇಂದ್ರವನ್ನು ಉದ್ಘಾಟಿಸಿದ ಬಗ್ಗೆ ಹಾಗೂ ವಿಕಲಚೇತನರ ಫಲಾನುಭವಿಗಳಿಗೆ ಯಂತ್ರಚಾಲಿತ ದ್ವಿ ಚಕ್ರವಾಹನ, ವಿಕಲಚೇತನ ವ್ಯಕ್ತಿಗಳಿಗೆ ವಿವಾಹ ಯೋಜನೆ ಹಾಗೂ ಅಂಧ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು. ಗುರುವಾರ ಚಾಲನೆಗೊಂಡ ವಿವಿಧ ಯೋಜನೆಗಳ ವಿವರ ಇಂತಿವೆ;
ವಿಕಲಚೇತನರ ಸಹಾಯವಾಣಿ ಕೇಂದ್ರ:
ವಿಕಲಚೇತನರಿಗೆ ಸರ್ಕಾರದ ವಿವಿಧ ಇಲಾಖೆಯ ಕಾರ್ಯಕ್ರಮ ಯೋಜನೆಗಳಡಿ ದೊರೆಯುವ ಸೇವಾ ಸೌಲಭ್ಯಗಳನ್ನು ಹಾಗೂ ಇನ್ನಿತರ ಪುನರ್ವಸತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಜಿಲ್ಲಾ ಮಟ್ಟದಲ್ಲಿ ವಿಕಲಚೇತನರ ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸುವ ಯೋಜನೆಯನ್ನು 2015-16ನೇ ಸಾಲಿನಲ್ಲಿ ಸರ್ಕಾರ ಮಂಜೂರಾತಿ ನೀಡಿರುತ್ತದೆ. ಅದರಂತೆ 2 ಸಲಹೆಗಾರರನ್ನು ನೇಮಿಸಿಕೊಂಡು ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ.
ವಿಕಲಚೇತನರನ್ನು ಸಾಮಾನ್ಯರು ವಿವಾಹವಾದರೆ ಪ್ರೋತ್ಸಾಹಧನ ಯೋಜನೆ:
2013-14ನೇ ಸಾಲಿನಿಂದ ಸಾಮಾನ್ಯ ವ್ಯಕ್ತಿಗಳು ವಿಕಲಚೇತನ ಪುರುಷ ಅಥವಾ ಮಹಿಳೆಯನ್ನು ಮದುವೆಯಾದಲ್ಲಿ ದಂಪತಿಗಳ ಹೆಸರಿನಲ್ಲಿ ರೂ.50,000 ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇಟ್ಟು 5 ವರ್ಷದ ನಂತರ ದಂಪತಿಗಳಿಗೆ ಹಸ್ತಾಂತರಿಸಲಾಗುವುದು. ಪ್ರಸ್ತುತ 2015-16ನೇ ಸಾಲಿನಲ್ಲಿ ಮಂಜೂರಾದ ಪ್ರಥಮ ಕಂತಿನ 4 ಫಲಾನುಭವಿಗಳಿಗೆ ತಲಾ 50,000 ದಂತೆ ಸಹಾಯಧನದ ಚೆಕ್ ನೀಡಲಾಗಿದೆ.
ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರವಾಹನ
ಶೇ.75ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿ ವಾರ್ಷಿಕ ಆದಾಯ ರೂ.2 ಲಕ್ಷಕ್ಕಿಂತ ಕಡಿಮೆ ಇರುವ ಮತ್ತು 20 ರಿಂದ 60ರ ವಯೋಮಾನದ ಉದ್ಯೋಗ ನಿರ್ವಹಿಸುವ ಹಾಗೂ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಅರ್ಹರಿಗೆ ಯಂತ್ರಚಾಲಿತ ದ್ವಿಚಕ್ರವಾಹನ ಒದಗಿಸಲಾಗಿದೆ. ಪ್ರಸ್ತುತ 2014-15ನೇ ಸಾಲಿನಲ್ಲಿ 20 ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇವರಿಗೆ ಬೆಂಗಳೂರಿನ ಪ್ರಧಾನ ಕಛೇರಿ ಮೂಲಕ ತಲಾ ರೂ.63,722/-ರ ಮೊತ್ತದ 20 ಯಂತ್ರಚಾಲಿತ ದ್ವಿಚಕ್ರವಾಹನ ವಿತರಿಸಲಾಗಿದೆ. ಸದ್ರಿ ವಾಹನಗಳಿಗೆ ಇಲಾಖೆ ವತಿಯಿಂದ ನೋಂದಣಿ ಮಾಡಿಸಿದ್ದು, ಜೀವನ ಪರ್ಯಂತ ಸದ್ರಿ ವಾಹನವನ್ನು ಪರಬಾರೆ ಮಾಡುವಂತಿಲ್ಲವೆಂಬ ಷರತ್ತನ್ನು ವಿಧಿಸಲಾಗಿದೆ.
ಲ್ಯಾಪ್‍ಟಾಪ್ ವಿತರಣೆ
2014-15ನೇ ಸಾಲಿನಿಂದ ಎಸ್.ಎಸ್.ಎಲ್.ಸಿ ಹಾಗೂ ನಂತರದ ವಿಧ್ಯಾಬ್ಯಾಸ ಮಾಡುವ ಶೇ.40 ಮೇಲ್ಪಟ್ಟ ದೃಷ್ಢಿಹೀನತೆ ಇರುವ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‍ಟಾಪ್ ವಿತರಿಸಲಾಗಿದೆ. ಅದರಂತೆ ಈ ಜಿಲ್ಲೆಯಲ್ಲಿ 25 ಗುರಿ ನಿಗದಿಪಡಿಸಿದ್ದು 19 ಅರ್ಜಿಗಳು ಪ್ರಥಮ ಹಂತದಲ್ಲಿ ಸ್ವೀಕೃತವಾಗಿದ್ದು, ಉಪನಿರ್ದೇಶಕರ ಅಧ್ಯಕ್ಷತೆಯ ಆಯ್ಕೆ ಸಮಿತಿ ಸಭೆಯಲ್ಲಿ 19 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ಟಾಕಿಂಗ್ ಲ್ಯಾಪ್‍ಟಾಪನ್ನು ವಿತರಿಸಲಾಗಿದೆ. ಟಾಕಿಂಗ್ ಲ್ಯಾಪ್‍ಟಾಪ್ ಒಂದರ ಬೆಲೆ ರೂ.49,300/-.ಆಗಿರುತ್ತದೆ.