ಮಂಗಳೂರು :ಪ್ರಕರಣ ನಡೆದು ಮೂರು ವರ್ಷಗಳ ನಂತರ ವಿಠಲ ಮಲೆಕುಡಿಯ ಮತ್ತು ಆತನ ತಂದೆಯ ಮೇಲೆ ಆರೋಪ ಪಟ್ಟಿ ಸಲ್ಲಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಡಿ.ವೈ.ಎಫ್.ಐ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತಿದೆ. ತಕ್ಷಣವೇ ಆರೋಪಪಟ್ಟಿಯನ್ನು ವಾಪಾಸ್ ಪಡೆದು ಪ್ರಕರಣವನ್ನು ಕೈ ಬಿಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ವಿಠಲ್ ಮಲೆಕುಡಿಯ ಪ್ರಕರಣ ನಕ್ಸಲ್ ನಿಗ್ರಹ ದಳದ ಆಂದಿನ ಮುಖ್ಯಸ್ಥ ಅಲೋಕ್ ಕುಮಾರ್ ಸೃಷ್ಠಿಸಿದ ಕಟ್ಟುಕತೆ. ಮಲೆಕುಡಿಯ ಕುಟುಂಬಗಳನ್ನು ಅರಣ್ಯದಿಂದ ಹೊರದಬ್ಬುವ ಪ್ರಭುತ್ವದ ನೀತಿಯ ಭಾಗವಾಗಿ ವಿದ್ಯಾರ್ಥಿ ವಿಠಲ್ ಮಲೆಕುಡಿಯ ಮತ್ತು ಆತನ ತಂದೆಯನ್ನು ಬಲಿಪಶು ಮಾಡಲಾಗಿತ್ತು. ಡಿ.ವೈ.ಎಫ್.ಐ ಕಾರ್ಯಕರ್ತನಾಗಿ ಪ್ರಜಾಸತ್ತಾತ್ಮಕ ಹಾದಿಯಲ್ಲಿ ಹೋರಾಟ ನಡೆಸುತ್ತಿರುವ ವಿಠಲ್ ಮಲೆಕುಡಿಯ ಬಂಧನದ ವಿರುದ್ಧ ಡಿ.ವೈ.ಎಫ್.ಐ ಸಂಘಟನೆ ತೀವೃ ಹೋರಾಟದ ಫಲವಾಗಿ ಅಂದಿನ ಸದಾನಂದ ಗೌಡ ನೇತ್ರತ್ವದ ಸರ್ಕಾರ ಆರೋಪ ಪಟ್ಟಿ ಸಲ್ಲಿಸದಿರಲು ನಿರ್ಧರಿಸಿತ್ತು. ಅದರಂತ್ತೆ ಪೊಲೀಸರಿಗೆ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ನಿರಾಕರಿಸಲಾಗಿತ್ತು.
ಆದರೆ ಇದೀಗ ಮೂರು ವರ್ಷಗಳ ನಂತರ ರಾಜ್ಯ ಸರ್ಕಾರ ಆರೋಪ ಪಟ್ಟಿ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿವೆ. ಅದೂ ಕೂಡ ಕೃತಕವಾಗಿ ಪ್ರಕರಣವನ್ನು ಸೃಷ್ಟಿಸಿ ವಿಕ್ರಂ ಗೌಡ, ಪ್ರಭಾ ಮುಂತಾದ ಭೂಗತ ನಕ್ಸಲರನ್ನು ವಿಠಲ್ ಮಲೆಕುಡಿಯ ಜೊತೆಗೆ ಸಹ ಆರೋಪಿಗಳನ್ನಾಗಿಸಿರುವುದು ಸರ್ಕಾರರ ದುರುದ್ದೇಶವನ್ನು ಎತ್ತಿ ತೋರಿಸುತ್ತದೆ. ಸರ್ಕಾರ ಆರೋಪಪಟ್ಟಿಯನ್ನು ವಾಪಾಸ್ ಪಡೆದು ಪ್ರಕರಣವನ್ನು ಕೈಬಿಡದಿದ್ದರೆ ಮತ್ತೊಮ್ಮೆ ತೀವೃ ರೀತಿಯ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ಡಿ.ವೈ.ಎಫ್.ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.