ಮಂಗಳೂರು : ಪ್ರಧಾನ ಮಂತ್ರಿಗಳು ಇತ್ತೀಚೆಗೆ ಘೋಷಿಸಿದ ಸಾಮಾಜಿಕ ಸುರಕ್ಷಾ ಹಾಗೂ ‘ಮುದ್ರಾ’ ಸಾಲ ಯೋಜನೆಗಳ ಎರಡನೆಯ ಮಾಹಿತಿ ಶಿಬಿರವನ್ನು ಆಗಸ್ಟ್ 24ರಂದು ಮಂಗಳೂರು ಹಂಪನಕಟ್ಟಾ ಸಿಂಡಿಕೇಟ್ ಬ್ಯಾಂಕ್ ಕಟ್ಟಡದಲ್ಲಿರುವ “ಆರ್ಥಿಕ ಸೇರ್ಪಡೆ ಸಂಪನ್ಮೂಲ ಕೇಂದ್ರ” ದಲ್ಲಿ ಆಯೋಜಿಸಲಾಗಿದೆ. ಶಿಬಿರದಲ್ಲಿ, ಮುಂಜಾನೆ 11.00 ಘಂಟೆಯಿಂದ ಮಧ್ಯಾಹ್ನ 2.00 ಘಂಟೆಯವರೆಗೆ ನೋಂದಣಿ ಮಾಡಲಾಗುವುದು. ಶಿಬಿರದಲ್ಲಿ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ವಿಮಾ, ಪ್ರಧಾನÀಮಂತ್ರಿ ಜೀವನ ಜ್ಯೋತಿ ವಿಮಾ ಹಾಗೂ ಅಟಲ್ ಪಿಂಚಣಿ ಯೋಜನೆಗಳ ಸಮಗ್ರ ಮಾಹಿತಿ ನೀಡಿ ನೋಂದಣಿ ಮಾಡಲಾಗುವುದು. ಅಲ್ಲದೇ ಪ್ರಧಾನ ಮಂತ್ರಿ ‘ಮುದ್ರಾ’ ಸಾಲ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಫಲಾನುಭವಿಗಳಿಂದ ‘ಮುದ್ರಾ’ ಸಾಲ ಯೋಜನೆಯ ಸಾಲದ ಅರ್ಜಿ ಪಡೆದುಕೊಳ್ಳಲಾಗುವುದು.
ಸಾಮಾಜಿಕ ಸುರಕ್ಷಾ ಹಾಗೂ ಪಿಂಚಣಿ ಯೋಜನೆಗಳ ನೋಂದಣಿ ಮಾಡಲು ಫಲಾನುಭವಿಗಳು ತಮ್ಮ ಬ್ಯಾಂಕ್ ಪಾಸು ಪುಸ್ತಕ ಹಾಗೂ ವಯಸ್ಸಿನ ದಾಖಲೆಯೊಂದಿಗೆ ಶಿಬಿರಕ್ಕೆ ಆಗಮಿಸಿ ನೋಂದಣಿ ಮಾಡಬಹುದು. ‘ಮುದ್ರಾ’ ಸಾಲ ಯೋಜನೆಯಡಿಯಲ್ಲಿ ಕಿರು ಉದ್ದಿಮೆಗಳನ್ನು ಪ್ರಾರಂಭಿಸಲು ಆಸಕ್ತಿಯುಳ್ಳ ಫಲಾನುಭವಿಗಳು ‘ಮುದ್ರಾ’ ಸಾಲದ ಅರ್ಜಿಗಳನ್ನು ಸಹ ಶಿಬಿರದಲ್ಲಿ ಸಲ್ಲಿಸಬಹುದು. ಸಾಲದ ಅರ್ಜಿಗಳನ್ನು ಯಾವುದೇ ಬ್ಯಾಂಕಿನ ಶಾಖೆಯಿಂದ ಪಡೆದುಕೊಳ್ಳಬಹುದು ಅಲ್ಲದೇ ಮಂಗಳೂರು ಹಂಪನಕಟ್ಟಾ ಸಿಂಡಿಕೇಟ್ ಬ್ಯಾಂಕ್ ಕಟ್ಟಡದಲ್ಲಿರುವ ಲೀಡ್ ಡಿಸ್ರ್ಟಿಕ್ಟ್ ಆಫೀಸ್ (ಜಲ್ಲಾ ಅಗ್ರಣಿ ಬ್ಯಾಂಕ್) ನಲ್ಲಿ ‘ಮುದ್ರಾ’ ಸಾಲ ಯೋಜನೆಯ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬಹುದು.
ಶಿಬಿರದಲ್ಲಿ ಪಡೆದುಕೊಂಡ ‘ಮುದ್ರಾ’ ಸಾಲ ಯೋಜನೆಯ ಅರ್ಜಿಗಳನ್ನು ಸಂಬಂಧಪಟ್ಟ ಬ್ಯಾಂಕ್‍ಗಳಿಗೆ ತಲುಪಿಸಲಾಗುವುದು. ಈ ಶಿಬಿರದ ಪ್ರಯೋಜನೆಯನ್ನು ಕಿರು ಉದ್ದಿಮೆಯಲ್ಲಿ ಆಸಕ್ತಿ ಹೊಂದಿದ ಎಲ್ಲಾ ಫಲಾನುಭವಿಗಳು ಹಾಗೂ ಈ ವರೆಗೆ ಸಾಮಾಜಿಕ ಸುರಕ್ಷಾ ಹಾಗೂ ಪಿಂಚಣಿ ಯೋಜನೆಗಳಲ್ಲಿ ನೋಂದಣಿ ಮಾಡದೇ ಇರುವ ಪ್ರತಿಯೊಬ್ಬರೂ ಪಡೆದುಕೊಳ್ಳಲು ಪ್ರಕಟಣೆ ತಿಳಿಸಿದೆ.