ಮಂಗಳೂರು ವಿವಿ ಭ್ರಷ್ಟಾಚಾರದ ಕುರಿತು ತನಿಖ ಸಮಿತಿ ರಚಿಸುವಂತೆ ಎಬಿವಿಪಿ ಮನವಿ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ತನಿಖಾ ಸಮಿತಿಯನ್ನು ರಚಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ನಮ್ಮ ಕರಾವಳಿ ಭಾಗದ ಹೆಮ್ಮೆ ಹಾಗೂ ಶೈಕ್ಷಣಿಕ ಕ್ಷೇತ್ರದ ಹಿರಿಮೆ ಎಂಬಂತಿರುವ ಮಂಗಳೂರು ವಿಶ್ವವಿದ್ಯಾಲಯ ಕಳೆದ ಕೆಲವು ವರ್ಷಗಳಿಂದ ತನ್ನ ಘನತೆ-ಪ್ರತಿಷ್ಠೆಗಳಿಗೆ ಸಲ್ಲದ ರೀತಿಯಲ್ಲಿ ಹಲವಾರು ಬಾರಿ ತಲೆ ತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬುದ್ಧಿವಂತ ಮತ್ತು ಪ್ರಜ್ಞಾವಂತ ನಾಡಿನಲ್ಲಿರುವ ಮಂಗಳೂಋ ವಿಶ್ವವಿದ್ಯಾಲಯದ ಘನತೆಗೆ ಮತ್ತು ಗೌರವಕ್ಕೆ ವಿಶ್ವವಿದ್ಯಾಲಯದಲ್ಲಿ ಸಂಭವಿಸಿದ ಕೆಲವೊಂದು ಘಟನೆಗಳು ಮತ್ತು ಪ್ರಕರಣಗಳು ರಾಜ್ಯ ಮಟ್ಟದಲ್ಲಿ ಸುದ್ಧಿಯಾಗಿ ವಿಶ್ವವಿದ್ಯಾಲಯ ಹಿಂದಿನ ಸ್ಥಾನಮಾನವನ್ನು ಕಳೆದುಕೊಂಡಿರುವ ಸಂಗತಿ ತಮ್ಮ ಗಮನಕ್ಕೆ ಈಗಾಗಲೇ ಬಂದಿರುತ್ತದೆ.
ಆದರೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತನ್ನ ಹೋರಾಟ, ಪ್ರತಿಭಟನೆ ಮತ್ತು ಆಂದೋಲನಗಳ ಮೂಲಕ ವಿಶ್ವವಿದ್ಯಾಲಯವನ್ನು ಕಾಲಕಾಲಕ್ಕೆ ಎಚ್ಚರಿಸುತ್ತಲೇ ಬಂದಿದೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಪರೀಕ್ಷೆಯ ಫಲಿತಾಂಶದ ಸಮಸ್ಯೆಗಳು, ಪಠ್ಯಪುಸ್ತಕ ಹಿಂಪಡೆದಂತಹ ಕುಖ್ಯಾತ ಪ್ರಕರಣಗಳಿಂದ ವಿಶ್ವವಿದ್ಯಾಲಯವು ಸಾರ್ವಜನಿಕ ಕ್ಷೇತ್ರದಲ್ಲಿ ತನ್ನ ಘನತೆಯನ್ನು ಕಳೆದುಕೊಂಡು ಪೇಚಿಗೆ ಸಿಲುವಂತಾಗಿದೆ. ಎಬಿವಿಪಿಯ ಗೌರವಯುತ ಹೋರಾಟದ ಫಲಶ್ರುತಿಯಿಂದ ವಿಶ್ವವಿದ್ಯಾಲಯದಲ್ಲಿ ಕೆಲವೊಂದು ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಆದರೆ ವಿಶ್ವವಿದ್ಯಾಲಯದ ಹಿರಿಮೆಗೆ ತಕ್ಕುದಾದ ಶೈಕ್ಷಣಿಕ ವಾತಾವರಣ ಇಲ್ಲಿ ಇನ್ನೂ ಕೂಡ ನಿರ್ಮಾಣವಾಗಿಲ್ಲ.
ಆದ್ದರಿಂದ ಈ ತಾವುಗಳು ವಿಶ್ವವಿದ್ಯಾಲಯದ ಘನತೆ ಮತ್ತು ಗೌರವವನ್ನು ಮರುಸ್ಥಾಪಿಸಲು ಈ ಹಿಂದಿನ ಉಪಕುಲಪತಿಗಳ ಅಧಿಕಾರಾವಧಿಯಲ್ಲಿ ವ್ಯಾಪಕವಾಗಿ ನಡೆದಿದೆ ಎನ್ನಲಾದ ಹಗರಣಗಳ ಹಾಗೂ ಭ್ರಷ್ಠಾಚಾರ ಪ್ರಕರಣಗಳ ಸಮಗ್ರ ತನಿಖೆಗಾಗಿ ತಕ್ಷಣದಲ್ಲಿ ಕಾಲಮಿತಿಯೊಂದಿಗೆ ತನಿಖಾ ಸಮಿತಿಯನ್ನು ರಚಿಸುವಂತೆ ಮತ್ತು ತನಿಖಾ ಸಮಿತಿಯ ವರದಿಯನ್ನು ಆಧರಿಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ನಿಯೋಗದಲ್ಲಿ ಸಂದೇಶ್, ಮಣಿಕಂಠ, ಸಂಕೇತ್, ನಿಶಾನ್, ಅಕ್ಷಯ್, ಭರತ್, ವಚನ್ ಉಪಸ್ಥಿತರಿದ್ದರು.