Home Mangalorean News Kannada News ಮಂಗಳೂರು ವಿಶ್ವವಿದ್ಯಾನಿಲಯದ ನಾನಾ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ

ಮಂಗಳೂರು ವಿಶ್ವವಿದ್ಯಾನಿಲಯದ ನಾನಾ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ

Spread the love

ಮಂಗಳೂರು ವಿಶ್ವವಿದ್ಯಾನಿಲಯದ ನಾನಾ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ

ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ಖಂಡಿಸಿ, ವಿವಿಧ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕುಂದಾಪುರ‌ ಘಟಕ ಬುಧವಾರ ಇಲ್ಲಿನ‌ ಮಿನಿ ವಿಧಾನ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಬಿವಿಪಿ ಜಿಲ್ಲಾ‌ ಸಂಚಾಲಕ ಕಾರ್ತಿಕ್, ಶಿಕ್ಷಣದ‌ ಕಾಶಿ ಎಂದು ಕರೆಯಲ್ಪಡುವ ನಮ್ಮ ಜಿಲ್ಲೆಯಲ್ಲಿ ಇಂದು ವಿದ್ಯಾರ್ಥಿಗಳು ಕನಿಷ್ಠ ಮೂಲಭೂತ ಸೌಲಭ್ಯಗಳಿಗಾಗಿ ಹೋರಾಡುತ್ತಿರುವುದು ದುರದೃಷ್ಟಕರ. ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ 188 ಕಾಲೇಜುಗಳಲ್ಲಿ 75 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಂತಹ ವಿಶ್ವವಿದ್ಯಾನಿಲಯವು ಇಂದು ಸಮಸ್ಯೆಗಳ ಗೂಡಾಗಿದೆ. ಪದವಿಪೂರ್ವ ತರಗತಿಗಳು ಆರಂಭಗೊಂಡು ಎರಡು ತಿಂಗಳು‌ ಕಳೆದರೂ ಇದುವರೆಗೂ ಹಾಸ್ಟೆಲ್ ಪ್ರವೇಶಾತಿಗೆ ಇಲಾಖೆ ಅನುಮತಿ ಕೊಟ್ಟಿಲ್ಲ. ಗ್ರಾಮೀಣ ಭಾಗದಿಂದ ನಗರಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದು, ಈಗಾಗಲೇ ಹಾಸ್ಟೆಲ್ ಬೇಡಿಕೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಶೀಘ್ರವೇ ಹಾಸ್ಟೆಲ್ ಪ್ರವೇಶಾತಿಗೆ ಅವಕಾಶ‌ ಮಾಡಿಕೊಡಬೇಕು ಮತ್ತು ಹಾಸ್ಟೆಲ್ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.

ಬಹುತೇಕ‌ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಂದ ತರಗತಿಗಳು‌ ನಡೆಯುತ್ತಿದ್ದು, ಅತಿಥಿ ಉಪನ್ಯಾಸಕರಿಲ್ಲದೇ ಸಿಲೇಬಸ್ ಗಳು ಪೂರ್ಣಗೊಳ್ಳುತ್ತಿಲ್ಲ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದ್ದು ಆದಷ್ಟು ಶೀಘ್ರವೇ ಅತಿಥಿ ಉಪನ್ಯಾಸಕರನ್ನು ಸರ್ಕಾರ ನೇಮಿಸಿಕೊಳ್ಳಬೇಕು ಎಂದರು.

ಸಹಸಂಚಾಲಕ ದರ್ಶನ್ ಮಾತನಾಡಿ, ಸೆಮಿಸ್ಟರ್ ಪರೀಕ್ಷೆಯ ಅಂತಿಮ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಬಂದು ಹತ್ತು ದಿನಗಳು ಕಳೆದಿವೆ. ಆದರೆ ಇಂದಿಗೂ ಅನೇಕ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಡಿಜಿಲಾಕರ್ ಮೂಲಕ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಇದರಿಂದಾಗಿ ಉನ್ನತ ಶಿಕ್ಷಣ ಹಾಗೂ ಉದ್ಯೋಗಾಕಾಂಕ್ಷಿಗಳು ಪರದಾಡುತ್ತಿರುವ ಸನ್ನಿವೇಶ ಸೃಷ್ಠಿಯಾಗಿದೆ. ಅಂಕಪಟ್ಟಿಗಾಗಿ ವಿದ್ಯಾರ್ಥಿಗಳ‌ ಬಳಿ ಹಣ ಸಂಗ್ರಹ ಮಾಡಲಾಗುತ್ತದೆ. ಆದರೆ ಸಮರ್ಪಕವಾಗಿ ಅಂಕಪಟ್ಟಿಯನ್ನು ಕಲ್ಪಿಸುವಲ್ಲಿ ವಿಶ್ವವಿದ್ಯಾನಿಲಯ ವಿಫಲವಾಗುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಗೂ ಮುನ್ನ ಶಾಸ್ತ್ರೀ ಸರ್ಕಲ್ ವೃತ್ತದಿಂದ ನಗರದ‌ ಪ್ರಮುಖ ರಸ್ತೆಯ ಮೂಲಕ ಮಿನಿವಿಧಾನ ಸೌಧದವರೆಗೂ ಬೃಹತ್ ಪ್ರತಿಭಟನಾ ರ್ಯಾಲಿ ನಡಡೆಯಿತು. ವಿದ್ಯಾರ್ಥಿ ನಾಯಕ‌ ಆದರ್ಶ್ ಹಾಗೂ ಪ್ರಮುಖರು ತಹಸೀಲ್ದಾರ್ ಶೋಭಾಲಕ್ಷ್ಮೀ ಅವರ ಮುಖಾಂತರ ಮನವಿ‌ ಸಲ್ಲಿಸಿದರು.

ವೃತ್ತನಿರೀಕ್ಷಕ ಜಯರಾಮ್ ಗೌಡ, ಶಂಕರನಾರಾಯಣ ಪಿಎಸ್ಐ ನಾಸೀರ್‌ ಹುಸೇನ್, ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಪುಷ್ಪಾ, ಸಂಚಾರಿ ಠಾಣೆಯ ಪಿಎಸ್ಐ ಪ್ರಸಾದ್ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದರು.

ಎಬಿವಿಪಿ ಪ್ರತಿಭಟನೆಗೆ ಅರ್ಥವೇ ಇಲ್ಲ: ಎನ್ಎಸ್ ಯು ಐ

ಅಗಸ್ಟ್ 22 ರಂದು ಸಭಾಪತಿ ಯುಟಿ ಖಾದರ್ ಅವರ ನೇತೃತ್ವದಲ್ಲಿ ಉಪಕುಲಪತಿಗಳು, ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಎನ್ಎಸ್ ಯು ಐ ವಿದ್ಯಾರ್ಥಿ ಸಂಘಟನೆಯ ಮುಖಂಡರು ಅಂಕಪಟ್ಟಿ ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದು, ಸೆಪ್ಟೆಂಬರ್ 4 ರಿಂದ ಅಂಕಪಟ್ಟಿಯನ್ನು ಸಮರ್ಪಕವಾಗಿ ವಿತರಿಸುವ ಬಗ್ಗೆ ಉಪಕುಲಪತಿಗಳು ಆಶ್ವಾಸನೆ ಕೊಟ್ಟಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನೂ ನೀಡಲಾಗಿದೆ. ಆದರೂ ಎಬಿವಿಪಿ ಪ್ರತಿಭಟನೆ ಮಾಡಿದ್ದು, ಈ ಪ್ರತಿಭಟನೆಗೆ ಅರ್ಥವೇ ಇಲ್ಲ. ಸೆ. 4 ರ ಬಳಿಕ ಸಮಸ್ಯೆ ಸರಿಪಡಿಸದಿದ್ದಲ್ಲಿ ಎನ್ಎಸ್ಯುಐ ಖಂಡಿತವಾಗಿಯೂ ವಿದ್ಯಾರ್ಥಿಗಳ ಪರ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎನ್ಎಸ್ ಯು ಐ ನ ರಾಜ್ಯ ಕಾರ್ಯದರ್ಶಿ ಸಯ್ಯದ್ ಫುರ್ಖಾನ್ ಹಾಗೂ ಕುಂದಾಪುರ ಸಂಚಾಲಕ ಸುಜನ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ‌.


Spread the love

Exit mobile version