Home Mangalorean News Kannada News “ಮಂಗಳೂರು ವಿಶ್ವವಿದ್ಯಾಲಯದ ಜ್ವಲಂತ ಸಮಸ್ಯೆಗಳಿಗೆ ಪರಿಹರಿಸಿ”- ಎಬಿವಿಪಿ

“ಮಂಗಳೂರು ವಿಶ್ವವಿದ್ಯಾಲಯದ ಜ್ವಲಂತ ಸಮಸ್ಯೆಗಳಿಗೆ ಪರಿಹರಿಸಿ”- ಎಬಿವಿಪಿ

Spread the love

“ಮಂಗಳೂರು ವಿಶ್ವವಿದ್ಯಾಲಯದ ಜ್ವಲಂತ ಸಮಸ್ಯೆಗಳಿಗೆ ಪರಿಹರಿಸಿ”- ಎಬಿವಿಪಿ

ನಮ್ಮ ಕರಾವಳಿ ಭಾಗದ ಹೆಮ್ಮೆ ಹಾಗೂ ಶೈಕ್ಷಣಿಕ ಕ್ಷೇತ್ರದ ಹಿರಿಮೆ ಎಂಬಂತಿರುವ ಮಂಗಳೂರು ವಿಶ್ವವಿದ್ಯಾಲಯ ಕಳೆದ ಕೆಲವು ವರ್ಷಗಳಿಂದ ತನ್ನ ಘನತೆ-ಪ್ರತಿಷ್ಠೆಗಳಿಗೆ ಸಲ್ಲದ ರೀತಿಯಲ್ಲಿ ಹಲವಾರು ಬಾರಿ ತಲೆ ತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬುದ್ದಿವಂತ ಮತ್ತು ಪ್ರಜ್ಞಾವಂತ ನಾಡಿನಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದ ಘನತೆಗೆ & ಗೌರವಕ್ಕೆ ವಿಶ್ವವಿದ್ಯಾಲಯದಲ್ಲಿ ಸಂಭವಿಸಿದ ಕೆಲವೊಂದು ಘಟನೆಗಳು ಮತ್ತು ಪ್ರಕರಣಗಳು ರಾಜ್ಯ ಮಟ್ಟದಲ್ಲಿ ಸುದ್ಧಿಯಾಗಿ ವಿಶ್ವವಿದ್ಯಾಲಯ ಹಿಂದಿನ ಸ್ಥಾನಮಾನವನ್ನು ಕಳೆದುಕೊಳ್ಳುವಂತಾಗಿದೆ. ಆದರೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತನ್ನ ಹೋರಾಟ, ಪ್ರತಿಭಟನೆ ಮತ್ತು ಆಂದೋಲನಗಳ ಮೂಲಕ ವಿಶ್ವವಿದ್ಯಾಲಯವನ್ನು ಕಾಲಕಾಲಕ್ಕೆ ಎಚ್ಚರಿಸುತ್ತಲೇ ಬಂದಿದೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಪರೀಕ್ಷೆಯ ಫಲಿತಾಂಶದ ಸಮಸ್ಯೆಗಳು, ಪಠ್ಯಪುಸ್ತಕ ಹಿಂಪಡೆದಂತಹ ಕುಖ್ಯಾತ ಪ್ರಕರಣಗಳಿಂದ ವಿಶ್ವವಿದ್ಯಾಲಯವು ಸಾರ್ವಜನಿಕ ಕ್ಷೇತ್ರದಲ್ಲಿ ತನ್ನ ಘನತೆಯನ್ನು ಕಳೆದುಕೊಂಡು ಪೇಚಿಗೆ ಸಿಲುವಂತಾಗಿದೆ. ಎಬಿವಿಪಿಯ ಗೌರವಯುತ ಹೋರಾಟದ ಫಲಶ್ರುತಿಯಿಂದ ವಿಶ್ವವಿದ್ಯಾಲಯದಲ್ಲಿ ಕೆಲವೊಂದು ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಆದರೆ ವಿಶ್ವವಿದ್ಯಾಲಯದ ಹಿರಿಮೆಗೆ ತಕ್ಕುದಾದ ಶೈಕ್ಷಣಿಕ ವಾತಾವರಣ ಇಲ್ಲಿ ಇನ್ನೂ ಕೂಡ ನಿರ್ಮಾಣವಾಗಿಲ್ಲ.

ವಿಶ್ವವಿದ್ಯಾಲಯದ ಸುದೀರ್ಘ ಇತಿಹಾಸದಲ್ಲಿ ಮೊದಲನೇ ಬಾರಿಗೆ ಇದೇ ಭಾಗದ ಕುಲಪತಿಗಳಾಗಿರುವ ತಮ್ಮ ಮೇಲೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಮತ್ತು ಸಾರ್ವಜನಿಕರು ಸಹಜವಾಗಿ ಒಂದು ಭಾವನಾತ್ಮಕವಾದ ನಿರೀಕ್ಷೆಗಳನ್ನು ಇಟ್ಟಿದ್ದಾರೆ. ಯಾವ ವಿಶ್ವವಿದ್ಯಾಲಯದ ಕ್ಯಾಂಪಸ್ ಶೈಕ್ಷಣಿಕ ಜಿಜ್ಞಾಸೆ, ಸಂಶೋಧನೆ ಮತ್ತು ಪಾಠಪ್ರಚವನಗಳಿಗೆ ಸಾಕ್ಷಿಯಾಗಬೇಕೋ, ಅದೇ ವಿಶ್ವವಿದ್ಯಾಲಯ ಇಂದು ಬೇರೆ ಬೇರೆ ದುರ್ಘಟನೆಗಳಿಗೆ ಸಾಕ್ಷಿಯಾಗುತ್ತಿದ್ದು ಈ ತೆರನಾದ ಅಹಿತಕರ ಬೆಳವಣಿಗೆಗಳು ಇತ್ತೀಚೆಗೆ ಮಂಗಳೂರು ವಿವಿ ಉಪಕುಲಪತಿಗಳಾಗಿ ನೇಮಕಾತಿಗೊಂಡಿರುವ ತಮ್ಮ ಸಾರಥ್ಯದಲ್ಲಿ ಕೊನೆಗೊಳ್ಳಬಹುದೆಂದು ಆಶಿಸಲಾಗಿದೆ.

ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಮತ್ತು ನಡೆದ ಕೆಲವೊಂದು ಅನಪೇಕ್ಷಿತ ಹಾಗೂ ಕುಖ್ಯಾತ ಪ್ರಕರಣಗಳು ಇನ್ನೂ ಇತ್ಯಥ್ರ್ಯವಾಗಿಲ್ಲ, ಆದ್ದರಿಂದ ವಿದ್ಯಾರ್ಥಿ ಪರಿಷತ್ ಅವುಗಳ ಕುರಿತು ಕಾನೂನುಸಮ್ಮತ ಹಾಗೂ ನ್ಯಾಯೋಚಿತ ವಿಚಾರಣೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸುತ್ತ ಈ ನಿಟ್ಟಿನಲ್ಲಿ ಕೆಲವೊಂದು ಬೇಡಿಕೆಗಳನ್ನು ತಮ್ಮ ಮುಂದಿಡುತ್ತಿದೆ.

  1. ಈಗಾಗಲೇ ಹದಗೆಟ್ಟಿದೆ ಎಂದು ಹೇಳಲಾದ ವಿಶ್ವವಿದ್ಯಾಲಯದ ಸಧ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ವಿಶ್ವವಿದ್ಯಾಲಯ ತಕ್ಷಣದಲ್ಲಿ ಶ್ವೇತಪತ್ರ ಹೊರಡಿಸಬೇಕು.
  2. ಪ್ರಸ್ತುತ ವಿಶ್ವವಿದ್ಯಾಲಯದಲ್ಲಿರುವ ಶುಲ್ಕವು ಬೇರೆ ಕೆಲವು ವಿಶ್ವವಿದ್ಯಾಲಯ ಮತ್ತು ಖಾಸಗೀ ಕಾಲೇಜುಗಳಿಗಿಂತ ಜಾಸ್ತಿ ಇರುವುದರಿಂದ ವಿಶ್ವವಿದ್ಯಾಲಯದ ಶುಲ್ಕವನ್ನು ಪರಿಷ್ಕರಿಸಬೇಕಾಗಿ ವಿನಂತಿ.
  3. ವಿಶ್ವವಿದ್ಯಾಲಯಕ್ಕೆ ಸೇರಿದ ಅಥವಾ ಕಾನೂನುಬದ್ಧವಾಗಿ ಅದರ ಒಡತನಕ್ಕೆ ಸೇರಿರುವ ಒಟ್ಟು ಭೂ ಪ್ರದೇಶದ ಕುರಿತು ಸರಿಯಾದ ಸರ್ವೇಯನ್ನು ನಡೆಸಬೇಕು ಹಾಗೂ ಈಗಾಗಲೇ ಕಾನೂನುಬಾಹಿರವಾಗಿ ಒತ್ತುವರೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿರುವ ಭೂಪ್ರದೇಶವನ್ನು ಕಾನೂನುಬದ್ಧವಾಗಿ ವಶಪಡಿಸಿಕೊಂಡು ವಿವಿ ಕ್ಯಾಂಪಸ್ಸಿಗೆ ಸೂಕ್ತ ಕಂಪೌಡ್ ಕಟ್ಟಿಸಿ ಅದರ ಜಾಗದ ಗಡಿಗಳನ್ನು ಭದ್ರಗೊಳಿಸಬೇಕು.
  4. ಕಳೆದ 5-6 ವರ್ಷಗಳಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ನಡೆದಿರುವ ಹಾಗೂ ಈ ಹಿಂದೆ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸಾಕಷ್ಟು ವರದಿಯಾದ ಮತ್ತು ರಾಜ್ಯಪಾಲರಿಗೆ ಈಗಾಗಲೇ ಎಬಿವಿಪಿ ಕಡೆಯಿಂದ ಸಲ್ಲಿಸಲಾದ ಮನವಿಯಲ್ಲಿ ಉಲ್ಲೇಖಿತವಾದ ಕಾನೂನುಬಾಹಿರ ಹಗರಣಗಳು ಹಾಗೂ ಭ್ರಷ್ಟಾಚಾರ ಪ್ರಕರಣಗಳ ಕುರಿತು ಸೂಕ್ತ ತನಿಖೆ ನಡೆಸುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರನ್ನು ಮತ್ತು ಸರ್ಕಾರವನ್ನು ಒತ್ತಾಯಿಸಬೇಕು.
  5. ಎಲ್ಲಾ ಕೋರ್ಸಗಳ ಅಂತಿಮ ವರ್ಷ ಮುಗಿಸಿ ತೇರ್ಗಡೆಯಾದಂತಹ ವಿದ್ಯಾರ್ಥಿಗಳಿಗೆ ಅವರು ಮುಂದೆ ತಮ್ಮ ಪದವಿ ಪ್ರಮಾಣಪತ್ರಗಳಿಗಾಗಿ ಅನವಶ್ಯಕ ಪರದಾಟ ಮಾಡುವುದನ್ನು ತಪ್ಪಿಸಲು ಅಂತಹ ಅರ್ಹ ವಿದ್ಯಾರ್ಥಿಗಳಿಗೆ ವಿವಿ ವತಿಯಿಂದಲೇ ಕಡ್ಡಾಯವಾಗಿ ಘಟಿಕೋತ್ಸವದ ಪ್ರಮಾಣ ಪತ್ರಗಳನ್ನು ಘಟಿಕೋತ್ಸವ ನಡೆದ ಒಂದು ತಿಂಗಳಲ್ಲಿ ನೀಡಬೇಕು.
  6. ವಿಶ್ವವಿದ್ಯಾಲಯದ ಎಲ್ಲಾ ಕಾಲೇಜುಗಳಲ್ಲಿ ಮಾದಕವಸ್ತುಗಳ ನಿಯಂತ್ರಣ ಸಮಿತಿಯನ್ನು ಕಡ್ಡಾಯವಾಗಿ ರಚಿಸಲು ವಿವಿ ವತಿಯಿಂದ ಸೂಚನೆಯನ್ನು ನೀಡಬೇಕು ಹಾಗೂ ಅಂತಹ ಸಮಿತಿಗಳು ಮಾದಕ ವಸ್ತುಗಳ ಸೇವನೆಯನ್ನು ತಡೆಗಟ್ಟುವಲ್ಲಿ ತಮ್ಮ – ತಮ್ಮ ಕಾಲೇಜು ವಲಯದಲ್ಲಿ ನಡೆಸಿದ ಕಾರ್ಯಕ್ರಮಗಳ ಕುರಿತಾದ ಮಾಹಿತಿಯನ್ನು ಕಾಲ-ಕಾಲಕ್ಕೆ ತೆಗೆದುಕೊಳ್ಳುವ ವ್ಯವಸ್ಥೆ ಕಲ್ಪಿಸಬೇಕು.
  7. ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿದ ವಿದ್ಯಾರ್ಥಿಗಳ, ಅವರು ಸ್ನಾತಕಪೂರ್ವ ಅಥವಾ ಸ್ನಾತಕೋತ್ತರ ಯಾವುದೇ ಹಂತದಲ್ಲಿದ್ದರೂ – ಅವರ ಕುಂದುಕೊರತೆಗಳನ್ನು ವಿಚಾರಿಸಿಕೊಂಡು ಅವರಿಗೆ ಸಕಾಲಿಕವಾಗಿ ಕಾನೂನುಬದ್ಧ ನ್ಯಾಯ ವೊದಗಿಸಲು ವಿದ್ಯಾರ್ಥಿಸ್ನೇಹಿ ಸಿಬ್ಬಂದಿಯನ್ನು ಹೊಂದಿದ ಪ್ರತ್ಯೇಕ ವ್ಯವಸ್ಥೆಯಾಗಿ ‘Sಣuಜeಟಿಣs’ ಉಡಿievಚಿಟಿಛಿe ಅeಟಟ’ ಸ್ಥಾಪನೆಯನ್ನು ಆದಷ್ಟು ಶೀಘ್ರದಲ್ಲಿ ಮಾಡಬೇಕು.
  8. ವಿದ್ಯಾರ್ಥಿಗಳನ್ನು ಮತ್ತು ಯುವಕರನ್ನು ರಾಷ್ಟ್ರವಾಹಿನಿ ವಿಚಾರಗಳಲ್ಲಿ ಆಸಕ್ತಿವಹಿಸಲು ಅನುಕೂಲವಾಗುವಂತೆ ಉತ್ತಮ ಕಾರ್ಯಕ್ರಮಗಳನ್ನು ವಿಶ್ವವಿದ್ಯಾಲಯದ ಆವರಣಗಳಲ್ಲಿ ಆಯೋಜಿಸಬೇಕು.
  9. ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ದೃಷ್ಠಿಯಿಂದ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಹಾಗೂ ವಿವಿ ಅಧಿಕಾರಕೊಳ್ಳಪಟ್ಟ ಎಲ್ಲಾ ವಿದ್ಯಾಸಂಸ್ಥೆಗಳಲ್ಲಿರುವ ಖಾಯಂ ನೆಲೆಯ ಖಾಲಿ ಹುದ್ದೆಗಳಿಗೆ “ಕಾಂಟ್ರ್ಯಾಕ್ಟ್” ನೆಲೆಯ ಅಧ್ಯಾಪಕರ ಬದಲು ಖಾಯಂ ನೆಲೆಯಲ್ಲಿ ಅರ್ಹ ಅಭ್ಯರ್ಥಿಗಳನ್ನು ಆದಷ್ಟು ಶೀಷ್ರದಲ್ಲಿ ನೇಮಕಾತಿ ಮಾಡಬೇಕು.
  10. ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಗಳ ವಿಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವವರ ಸಂಖ್ಯೆ ಶೇ 60-70 ರಷ್ಟು ದಾಟಿದ್ದರೂ ವಿವಿ ವತಿಯಿಂದ ಪಾಠ ಪಟ್ಟಿಯನ್ನು ಸಿದ್ಧಗೊಳಿಸುವಾಗ ಹಾಗೂ ಪರಾಮರ್ಶನ ಗ್ರಂಥಗಳನ್ನು ಶಿಫಾರಸ್ಸು ಮಾಡುವಾಗ ಹೆಚ್ಚಾಗಿ ಕೇವಲ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಮಾಡುತ್ತಾ ಬರುತ್ತಿರುವುದರಿಂದ ಕನ್ನಡ ಭಾಷಾ ಮಾಧ್ಯಮದವರನ್ನು ಪೂರ್ಣವಾಗಿ ಅಲಕ್ಷಿಸಿದಂತಾಗಿದೆ. ಉದಾಹಣೆಗೆ -2019-2020ನೇ ಸಾಲಿನ ಸಮಾಜ ಶಾಸ್ತ್ರ ಹಾಗೂ ರಾಜ್ಯ ಶಾಸ್ತ್ರ ಪಠ್ಯಕ್ರಮದಲ್ಲಂತೂ ಒಂದೇ ಒಂದು ಕನ್ನಡ ಮಾಧ್ಯಮದ ಪುಸ್ತಕವನ್ನು ಶಿಫಾರಸು ಮಾಡದೆ ಕನ್ನಡ ಮಾಧ್ಯಮಕ್ಕೆ ಫೋರ ಅವಮಾನ ಮಾಡಿದಂತಾಗಿದೆ. ವಿ.ವಿ ಆಡಳಿತ ಮಂಡಳಿ ಈ ಬಗ್ಗೆ ಗಮನಹರಿಸಬೇಕು ಹಾಗೂ ಇವು ಕನ್ನಡ ಮಾಧ್ಯಮದಲ್ಲೂ ಕೂಡ ಲಭ್ಯವಾಗುವಂತಾಗಬೇಕು.
  11. ವಿಶ್ವವಿದ್ಯಾಲಯದ ನೇರ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ ಸ್ನಾತಕೋತ್ತರ ಹಾಗೂ ಪದವಿ ಮಟ್ಟದ ಸಂಸ್ಥೆಗಳಲ್ಲಿ ಕೆಲವು ಅಧ್ಯಾಪಕರಿಗೆ ಹೆಚ್ಚುವರಿ ಜವಾಬ್ದಾರಿಯಾಗಿ ಒಂದಕ್ಕಿಂತಲೂ ಹೆಚ್ಚಿನ ಜವಾಬ್ದಾರಿ(ಉದಾ: ದೂರ ಶಿಕ್ಷಣ ನಿರ್ದೇಶನಾಲಯ, ತುಳುಪೀಠ, ಕೊಡವ ಪೀಠ, ಬ್ಯಾರಿ ಪೀಠ ಕೊಂಕಣಿ ಪೀಠ, ಯಕ್ಷಗಾನ ಪೀಠ ಇನ್ನೂ ಮುಂತಾದವು) ನೀಡಿ ಅವರುಗಳು ಯಾವುದಕ್ಕೂ ಸರಿಯಾದ ನ್ಯಾಯ ದೊರಕುವಂತೆ ಕಾರ್ಯನಿರ್ವಹಿಸಲಾಗುತ್ತಿಲ್ಲ ಹಾಗೂ ವಿದ್ಯಾರ್ಥಿಗಳಿಗೂ ಇದರಿಂದ ತೊಂದರೆಯಾಗುತ್ತಲಿದೆ. ಅರ್ಹತೆಯುಳ್ಳ ಹಲವರ ಸೇವೆ ಲಭ್ಯವಿರುವಾಗ ಇಂತಹ ಜವಾಬ್ದಾರಿಗಳನ್ನು ಬೇರೆ ಬೇರೆಯವರಿಗೆ ನೀಡಿ “ಒಬ್ಬರಿಗೆ – ಒಂದಕ್ಕಿಂತಲೂ ಹೆಚ್ಚಿನ ಹೆಚ್ಚುವರಿ ಜವಾಬ್ದಾರಿ ನೀಡಲಾಗುವುದಿಲ್ಲ ಎಂಬ ಸಾಮಾಜಿಕ ನ್ಯಾಯದ ತತ್ವದ ಹಿನ್ನೇಲೆಯ ನಿಲುವನ್ನು ತಕ್ಷಣದಿಂದಲೇ ಕೈಗೊಂದು ಅನುಷ್ಠಾನಕ್ಕೆತರಬೇಕೆಂದು ಆಗ್ರಹಿಸುತ್ತದೆ.

ಅಲ್ಲದೇ ವಿವಿಧ ಪೀಠಗಳ ಅಧ್ಯಯನ ಕೇಂದ್ರಗಳಲ್ಲಿ ಸಂಶೋಧನ ಸಹಾಯಕರಾಗಿ\ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರಲ್ಲಿ ತಾರತಮ್ಯ ಕಂಡುಬಂದಿದ್ದು ಇದನ್ನು “ಸಮಾನ ದುಡಿಮೆಗೆ ಸಮಾನ ವೇತನ ತತ್ವ” ದಂತೆ ತಕ್ಷಣದಲ್ಲಿ ಪುನರ್ ಪರಿಷ್ಕರಿಸಬೇಕು. ಪೀಠ ಸ್ಥಾಪನೆಯ ಮೂಲ ಉದ್ದೇಶಕ್ಕೆ ಧಕ್ಕೆ ಬಾರದಂತೆ ಹಣದ ದುರ್ಬಳಕೆಯಾಗದಂತೆ ಕಾರ್ಯಕ್ರಮಗಳನ್ನು ರೂಪಿಸುವಂತೆ ಹಾಗೂ ನಡೆಸುವಂತೆ ಕ್ರಮಕೈಗೊಳ್ಳಬೇಕು.

  1. ಸಮಾಜದಲ್ಲಿ ಸಾಕಷ್ಟು ವಿದ್ಯಾವಂತ ನಿರುದ್ಯೋಗಿಗಳಿರುವಾಗ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಕಡೆ ವೇತನ ಪಡೆಯುವ ಕೆಲವು ಉಪನ್ಯಾಸಕರು/ ನೌಕಕರಿರುವ ಸ್ಥಿತಿಯಿದ್ದು ಇದನ್ನು ಸರಿಪಡಿಸಿ “ಸಾಮಾಜಿಕ ನ್ಯಾಯ”ದ ನೆಲೆಯಲ್ಲಿ ಯಾವುದೇ ಸಂಬಳಾಧಾರಿತ ಉದ್ಯೋಗವಿಲ್ಲದ ಅರ್ಹ ಪ್ರತಿಭಾನ್ವಿತ ನಿರುದ್ಯೋಗಿ ಯುವಕರಿಗೆ ನೀಡುವ ಕ್ರಮಕೈಗೊಳ್ಳಬೇಕು.
  2. ವಿಶ್ವವಿದ್ಯಾಲಯದ ಹಾಗೂ ಅದರ ಸಂಯೋಜಿತ ಕಾಲೇಜುಗಳ ಕೆಲವು ವಿಭಾಗಗಳಲ್ಲಿ ಕೆಲವು ಜನರ ಹಿತಾಸಕ್ತಿಯನ್ನು ಪೂರೈಸಲು ಸರ್ಕಾರದ/ವಿಶ್ವವಿದ್ಯಾಲಯದ ಸಂಪನ್ಮೂಲದ ಸೋರಿಕೆಯಾಗುತ್ತಿದ್ದು ಅದನ್ನು ನಿಲ್ಲಿಸಲು ತಕ್ಷಣದಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು.
  3. 2010-2011 ರಲ್ಲಿ ವಿಶ್ವವಿದ್ಯಾಲಯಕ್ಕೆ ಕಳಂಕ ತರುವಂತಹ ರೀತಿಯಲ್ಲಿ ನಡೆದ ಅಂಕಪಟ್ಟಿ ಹಗರಣಗಳ ಕುರಿತು ತನಿಖೆ ನಡೆದು ವರದಿ ನೀಡಲಾಗಿದ್ದರೂ ಅದನ್ನು ಈವರೆಗೂ ಸಿಂಡಿಕೇಟಿನ ಮುಂದೆ ತರದೆ ಅಡಗಿಸಲಾಗಿದೆ ಎಂದು ತಿಳಿದುಬಂದಿದ್ದು ಅದನ್ನು ಈ ಕೂಡಲೇ ಸಿಂಡಿಕೇಟಿನ ಸಭೆಯಲ್ಲಿರಿಸಬೇಕು. ಹಾಗೂ 2016-17 ರಲ್ಲೂ ಕೂಡ ಇನ್ನೊಂದು ರೀತಿಯ ಅಂಕಪಟ್ಟಿ ಹಗರಣ ನಡೆದು ನೂರಾರು ವಿದ್ಯಾರ್ಥಿಗಳು ಬವಣೆ ಪಡುವಂತಾಗಿದ್ದು ವಿಶ್ವವಿದ್ಯಾಲಯವು ತಕ್ಷಣದಲ್ಲಿ ಈ ಬಗ್ಗೆ ಕಾಲಬದ್ಧ ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
  4. ಮಂಗಳೂರು ನಗರದಲ್ಲಿ ಹಲವಾರು ಸಂಜೆ ಕಾಲೇಜುಗಳಿರುವಾಗ ಹಾಗೂ ಅಲ್ಲಿ ವಿದ್ಯಾರ್ಥಿಗಳು ಕಲಿಕೆಗೆ ಬೇಕಾದಷ್ಟು ಸೀಟುಗಳು ಈಗಲೂ ಲಭ್ಯವಿರುವಾಗ ವಿದ್ಯಾರ್ಥಿಗಳಿಂದ ಯಾವುದೇ ಬೇಡಿಕೆಯಿಲ್ಲದೇ ಇದ್ದರೂ ವಿಶಿಷ್ಟ ಅಥವಾ ಅಪರೂಪದ ಹೊಸ ಕೋರ್ಸನ್ನು ಪರಿಚಯಿಸದೆ ಎಲ್ಲಡೆ ಇರುವ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಸಿ.ಎ ಮುಂತಾದ ಕೋರ್ಸಗಳನ್ನು ವಿದ್ಯಾರ್ಥಿಗಳ ತೀವ್ರ ಕೊರೆತೆಯ ನಡುವೆಯೂ ಮಂಗಳೂರು ವಿವಿಗೆ ಸೇರಿದ ಹಂಪನಕಟ್ಟೆಯ ಸಂಜೆ ಕಾಲೇಜುನ್ನು ತೀವ್ರ ನಷ್ಟದಲ್ಲಿ ನಡೆಸುವ ಅಗತ್ಯವಿದಯೇ ಎಂಬುವುದನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಒತ್ತಾಯಿಸುತ್ತದೆ.
  5. ಮಂಗಳೂರು ವಿವಿಗೆ ಅಧ್ಯಯನಕ್ಕೆಂದು ಬರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವಸತಿನಿಲಯದ ಕಟ್ಟಡಕ್ಕೆ ಈಗಾಗಲೇ ಸಾಕಷ್ಟು ಪ್ರಮಾಣದ ಹಣವನ್ನು ದುಂದುವೆಚ್ಚ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಅದರ ಯಾವುದೇ ರೀತಿಯ ಬಳಿಕೆಗೆ ಯೋಗ್ಯ ವಾತವರಣ ನಿರ್ಮಾಣವಾಗಿಲ್ಲ. ಆದ್ದರಿಂದ ಈ ಹಿಂದೆ ನಡೆದ ದುಂದುವೆಚ್ಚದ ತನಿಖೆಯಾಗಬೇಕು ಮತ್ತು ಅದನ್ನು ಆದಷ್ಟು ಬೇಗ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಉಪಯೋಗವಾಗಲು ಅನುಕೂಲ ಮಾಡಿಕೊಡಬೇಕು.
  6. ಮಂಗಳೂರು ವಿವಿ ಕನ್ನಡ ವಿಭಾಗದ “ಬೋರ್ಡ್ ಆಫ್ ಸ್ಟಡೀಸ್” ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ನಿಗದಿಪಡಿಸುವಾಗ ಕಳೆದ ಮೂರು ವರ್ಷಗಳಿಂದ ಸತತವಾಗಿ ಎಂಬಂತೆ ಪ್ರತಿವರ್ಷವೂ ಪಠ್ಯಪುಸ್ತಕದ ಬಗ್ಗೆ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ಪ್ರತಿಭಟನೆ ಎದುರಿಸಬೇಕಾಗಿ ಬಂದಿರುವ ಹಿನ್ನೆಲೆಯಲ್ಲಿ ವಿವಿಯು ಎಚ್ಚೆತ್ತುಕೊಂಡು ಇನ್ನೂ ಮುಂದೆ ಅಂತಹ ವಿವಾದಾಸ್ಪದ ಹಾಗೂ ಸಮಾಜದ ಶಾಂತಿ ಸಾಮರಸ್ಯ ಕದಡುವಂತಹ ಪಾಠವಸ್ತುಗಳನ್ನು ನಿಗದಿಪಡಿಸದಂತೆ ಕ್ರಮ ಜರುಗಿಸಬೇಕು. ಮುಂಜಾಗರೂತಾ ಕ್ರಮವಾಗಿ ಅಂತಹ ಪಾಠವಸ್ತುಗಳನ್ನು ಪಠ್ಯಪುಸ್ತಕಗಳಾಗಿ ನಿಗದಿ ಪಡಿಸುವ ಮುನ್ನ ಈ ಕ್ಷೇತ್ರದ ಹಿರಿಯ ಹಾಗೂ ಪ್ರಜ್ಞರ ಸಮ್ಮತಿ ಪಡೆಯುವ ನಿಟ್ಟಿನಲ್ಲಿಯೂ ಆಲೋಚಿಸಬೇಕೆಂದು ಪರಿಷತ್ ಸಲಹೆ ನೀಡುವುದು.
  7. ವಿಶ್ಯವಿದ್ಯಾಲಯ ಅಕ್ಯಾಡೆಮಿಕ್ ಕೌನಿಲ್ಸ್‍ನಲ್ಲಿ ವಿದ್ಯಾರ್ಥಿಗಳು ಸದಸ್ಯರಾಗಿ ಇರುವ ವ್ಯವಸ್ಥತೆ ಇದ್ದು ಅದನ್ನು ಈ ವರ್ಷ ಕೌನಿಲ್ಸ್‍ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಾರ್ವಜನಿಕ ಹಾಗೂ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ತಮ್ಮ ಮುಂದೆ ಇರಿಸುತ್ತಿರುವ ಈ ಬೇಡಿಕೆಗಳ ಕುರಿತಂತೆ ಸೂಕ್ತ ಗಮನಹರಿಸಿ ಅವುಗಳ ಪರಿಹಾರದ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಹಾಗೂ ವಿವಿ ಕೈಗೊಂಡ ಅಂತಹ ಕ್ರಮದ ಬಗ್ಗೆ ವಿದ್ಯಾರ್ಥಿ ಪರಿಷತ್ ಸಹಿತ ಶಿಕ್ಷಣಾಸಕ್ತ ಸಾರ್ವಜನಿಕರಿಗೆ ಇನ್ನೂ ಒಂದು ತಿಂಗಳಲ್ಲಿ ಮಾಹಿತಿ ನೀಡುವುದರ ಮೂಲಕ ವಿಶ್ವವಿದ್ಯಾಲಯದ ಆಡಳಿತ ಶೈಕ್ಷಣಿಕ ಬದ್ಧತೆಯನ್ನು ತೋರ್ಪಡಿಸಬೇಕೆಂದು ದಕ್ಷಿಣ ಕನ್ನಡ ವಿಭಾಗದ ವಿದ್ಯಾರ್ಥಿ ಪರಿಷತ್ ಘಟಕ ವಿಶ್ವವಿದ್ಯಾಲಯವನ್ನು ಆಗ್ರಹಿಸುತ್ತದೆ. ಈ ಸಂದರ್ಭದಲ್ಲಿ ಕುಲಪತಿಗಳು ನಮ್ಮೆಲ್ಲಾ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.


Spread the love

Exit mobile version