ನವೆಂಬರ್ 10, 2016ರ ಸೋಮವಾರ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮವು ಕೆಲವೆಡೆ ಹಿಂಸಾತ್ಮಕ ವಿರೋಧಗಳನ್ನು ಎದುರಿಸಿ ಮುಜುಗುರ ಉಂಟಾಗಲು ಇಂತಹ ವ್ಯಕ್ತಿ ಮತ್ತು ಸಂಘಟನೆಗಳೇ ಕಾರಣ ಎನ್ನುವುದನ್ನು ಸರಕಾರ ಗಮನಿಸಬೇಕು. ಇದನ್ನು ಸರಕಾರದ ಸಮಾನತೆಯ ಆಶಯವನ್ನು ಮೂಲೆಗೆ ತಳ್ಳುವ ವಿಚ್ಛಿದ್ರಕಾರಿ ಶಕ್ತಿಗಳ ಷಡ್ಯಂತ್ರ ಎಂಬುದಾಗಿ ಪರಿಗಣಿಸಬೇಕು. ಈ ರೀತಿಯ ಪ್ರಚೋದನಾತ್ಮಕ ಹೇಳಿಕೆಗಳು ಮತ್ತು ಭಾಷಣಗಳಿಂದ ಸಮಾಜ ಉದ್ರೇಕಗೊಂಡು ಪ್ರತಿಭಟನೆಯ ಹಿಂಸೆಯಲ್ಲಿ ಕುಟ್ಟಪ್ಪ ಮತ್ತು ರಾಜು ಎಂಬ ಎರಡು ಅಮೂಲ್ಯ ಜೀವಗಳು ಬಲಿಯಾಗುವಂತಹದ್ದು ದೊಡ್ಡ ದುರಂತ. ಸರಕಾರ ಮತ್ತು ಕೆಲವು ಸ್ಥಳೀಯ ಆಡಳಿತಗಳು ಇದನ್ನು ಮೊದಲೇ ಗ್ರಹಿಸಿ ಸಾಕಷ್ಟು ಮಟ್ಟಿನ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳದೆ ಇದ್ದುದು ನಿಜಕ್ಕೂ ಶೋಚನೀಯ. ಈ ಎರಡು ಬಲಿಗಳಿಗೆ ಕರಾವಳಿ ಮತ್ತು ಮಲೆನಾಡಲ್ಲಿ ಕಾರ್ಯನಿರತವಾಗಿ ಜನಾಂಗೀಯ ದ್ವೇಷವನ್ನು ಹಬ್ಬಿಸುತ್ತಿರುವ ಸಂಘ ಪರಿವಾರವೇ ನೇರ ಹೊಣೆಯೆಂದು ನಾವು ಸರಕಾರಕ್ಕೆ ತಿಳಿಸಬಯಸುತ್ತೇವೆ ಮತ್ತು ಅಮಾಯಕರ ಬಲಿ ಪಡೆದ ಸಂಘಟನೆಗಳು ಮತ್ತು ಅದರ ಹಿಂದಿರುವ ನಾಯಕರುಗಳನ್ನು ಸೂಕ್ತ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.
ಬಿಹಾರದ ಚುನಾವಣಾ ಫಲಿತಾಂಶದಿಂದ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡ ಸಂಘಪರಿವಾರ ಮತ್ತು ಬಿಜೆಪಿಯ ಜನ ಪ್ರತಿನಿಧಿಗಳು ತೆರೆಯ ಮರೆಯಲ್ಲಿ ನಿಂತು ಮಾನವ ಜೀವದ ಜೊತೆ ಚೆಲ್ಲಾಟವಾಡುತ್ತಿವೆ. ಸಮಾಜದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುತ್ತಿವೆ. ಇನ್ನೊಂದೆಡೆ ಕರಾವಳಿ ಭಾಗದ ಪೊಲೀಸ್ ಇಲಾಖೆಯಲ್ಲಿ ಶೇ.60ರಷ್ಟು ಮಂದಿ ಸಂಘಪರಿವಾರಕ್ಕೆ ಸೇರಿದ ಸಂಘಟನೆಗಳ ಅನಧಿಕೃತ ಸದಸ್ಯತ್ವವನ್ನು ಹೊಂದಿರುವವರು ಇದ್ದಾರೆ ಎನ್ನುವುದನ್ನು ಕೋಬ್ರಾ ಪೋಸ್ಟ್ ರಹಸ್ಯ ಕಾರ್ಯಾಚರಣೆಯ ಮೂಲಕ ಆ ನಾಯಕರುಗಳ ಬಾಯಿಂದಲೇ ಹೊರಗೆಡವಿದೆ.
ಕರಾವಳಿಯಲ್ಲಿ ಕೋಮು ದ್ವೇಷದ ಘಟನೆಗಳು ಹೆಚ್ಚುತ್ತಿರುವುದಕ್ಕೆ ಇಂತಹ ಮನಸ್ಥಿತಿಯ ಪೊಲೀಸರೆ ಕಾರಣವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಗ್ಯಾಂಗ್ ಕಲಹಗಳಿಗೂ ಕೋಮು ಹಿನ್ನೆಲೆ ಇರುವಂತೆ ಕಾಣುತ್ತಿದ್ದು ಅಂತಿಮವಾಗಿ ಇವೆಲ್ಲವೂ ದೊಡ್ಡ ಮಟ್ಟಿನ ಕೋಮು ಗಲಭೆಗಳಿಗೆ ಕಾರಣವಾಗಲೂಬಹುದು ಎಂಬುದು ನಮ್ಮ ಅನಿಸಿಕೆಯಾಗಿದೆ. ಆದುದರಿಂದ ಇದೆಲ್ಲವನ್ನು ಈಗಿಂದೀಗಲೆ ಮಟ್ಟ ಹಾಕಲು ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಆಗ್ರಹಿದೆ.