Home Mangalorean News Kannada News ಮಂಗಳೂರು: ಸರಕಾರಿ ಬಸ್ಸು ಸೇವೆಗೆ ಬಜಾಲ್‍ನಲ್ಲಿ ನಾಗರಿಕರಿಂದ ಸ್ವಾಗತ

ಮಂಗಳೂರು: ಸರಕಾರಿ ಬಸ್ಸು ಸೇವೆಗೆ ಬಜಾಲ್‍ನಲ್ಲಿ ನಾಗರಿಕರಿಂದ ಸ್ವಾಗತ

Spread the love

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬಜಾಲ್ ಪ್ರದೇಶವು ತೀರಾ ಹಿಂದುಳಿದ ಪ್ರದೇಶ ಮತ್ತು ಇಲ್ಲಿ ಹೆಚ್ಚಿನ ಜನರು ಬಡವರು, ಮಧ್ಯಮವರ್ಗದವರಾಗಿರುತ್ತಾರೆ. ಒಂದು ಕಡೆ ರೈಲ್ವೇ ಸೇತುವೆ ಸಮಸ್ಯೆಯಿಂದ ಕಷ್ಟಪಡುತ್ತಿದ್ದರೆ ಮತ್ತೊಂದು ನಗರ ಪ್ರದೇಶಕ್ಕೆ ಸಂಚರಿಸಲು ಸರಿಯಾದ ಬಸ್ಸಿನ ಸೌಕರ್ಯಗಳು ಲಭ್ಯವಿರುವುದಿಲ್ಲ. ಈಗಾಗಲೇ ಸದ್ಯದ ಮಟ್ಟಿಗೆ ರೈಲ್ವೇ ಸೇತುವೆ ಸಮಸ್ಯೆ ಬಗೆಹರಿದಿದೆ ಆದರೆ ಇದ್ದಂತಹ ಖಾಸಗೀ ಬಸ್ಸುಗಳು ತಮಗೆ ಬೇಕಾದ ಸಮಯಕ್ಕೆ ಸಂಚರಿಸುತ್ತಿದ್ದಾರೆ. ಮಾತ್ರವಲ್ಲದೇ ಸಾರ್ವಜನಿಕರೊಂದಿಗೆ ಬಸ್ಸು ಸಿಬ್ಬಂದಿಗಳು ವರ್ತಿಸುತ್ತಿರುವ ರೀತಿಯಿಂದ ಹತಾಶರಾದ ಪ್ರಯಾಣಿಕರು ಈ ಪ್ರದೇಶಕ್ಕೆ ಸರಕಾರಿ ಬಸ್ಸಿನ ಬೇಡಿಕೆಯನ್ನು ಒತ್ತಾಯಿಸುತ್ತಾ ಬಂದಿರುತ್ತಾರೆ.

bus

ಇವರ ಈ ಬೇಡಿಕೆಗೆ ಇಲ್ಲಿನ ಡಿವೈಎಫ್‍ಐ ಸಂಘಟನೆ ಸಾರ್ವಜನಿಕರೊಂದಿಗೆ ಸೇರಿ ಹಲವಾರು ಬಾರಿ ಮನವಿಗಳನ್ನು ಕೆಎಸ್‍ಆರ್‍ಟಿಸಿ ಇಲಾಖೆಗೆ ಸಲ್ಲಿಸಿತು ಮಾತ್ರವಲ್ಲ ಆರ್‍ಟಿಎ ಸಭೆಗಳಲ್ಲಿ ನಿರಂತರವಾಗಿ ಒತ್ತಾಯಿಸುತ್ತಾ ಹೋರಾಟಗಳನ್ನು ಮಾಡಿದ ಫಲವಾಗಿ ಬಜಾಲ್ ಪ್ರದೇಶಕ್ಕೆ ನರ್ಮ್ ಯೋಜನೆಯಡಿಯಲ್ಲಿ ನಗರದ ಸ್ಟೇಟ್‍ಬ್ಯಾಂಕ್‍ನಿಂದ ಪಂಪ್‍ವೆಲ್, ಪಡೀಲ್ ಮಾರ್ಗವಾಗಿ ಬಜಾಲ್ ಪಕ್ಕಲಡ್ಕ ಹಾಗೂ ಬಜಾಲ್ ಜಲ್ಲಿಗುಡ್ಡೆಗೆ ಎರಡು ಸರಕಾರಿ ಬಸ್ಸು ಮಂಜೂರಾಗಿದೆ. ಈಗಾಗಲೇ ಬಜಾಲ್ ಪಕ್ಕಲಡ್ಕ ಪ್ರದೇಶಕ್ಕೆ ಸರಕಾರಿ ಬಸ್ಸು ಓಡಾಟ ಪ್ರಾರಂಭಿಸಿದೆ.

ಎರಡು ದಿನದ ಒಳಗೆ ಜಲ್ಲಿಗುಡ್ಡೆ ಪ್ರದೇಶಕ್ಕೂ ಓಟಾಟ ಪ್ರಾರಂಭಿಸಲಿದೆ ಎಂದು ಕೆಎಸ್‍ಆರ್‍ಟಿಸಿ ಅಧಿಕಾರಿಗಳು ತಿಳಿಸಿರುತ್ತಾರೆ. ಈ ನಿಟ್ಟಿನಲ್ಲಿ ಇಂದು ಬೆಳಿಗ್ಗೆ ಪಕ್ಕಲಡ್ಕದಲ್ಲಿ ಡಿವೈಎಫ್‍ಐ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿ ಸರಕಾರಿ ಬಸ್ಸನ್ನು ಸ್ವಾಗತಿಸಿ ಪಟಾಕಿ ಸಿಡಿಸಿ ಪ್ರಯಾಣಿಕರಿಗೆಲ್ಲಾ ಸಿಹಿತಿಂಡಿ ವಿತರಿಸಿ ಸಂಭ್ರಮಿಸಿದರು. ಈ ವೇಳೆ ಡಿವೈಎಫ್‍ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಉಪಸ್ಥಿತರಿದ್ದರು. ಹಾಗೂ ಪ್ರಯಾಣಿಕರಲ್ಲಿ ಸರಕಾರಿ ಬಸ್ಸು ಸೇವೆಯ ಸದುಪಯೋಗ ಪಡೆಯಬೇಕೆಂದು ವಿನಂತಿಸಿದರು.

ಈ ಸಂದರ್ಭ ಸ್ಥಳೀಯ ಡಿವೈಎಫ್‍ಐ ಮುಖಂಡರಾದ ಯಶ್‍ಪಾಲ್, ರಿತೇಶ್, ಶರತ್, ಪ್ರಕಾಶ್, ಪ್ರಶಾಂತ್, ವರಪ್ರಸಾದ್ ಹಾಗೂ ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷರಾದ ಅಶೋಕ್ ಸಾಲ್ಯಾನ್, ಕಾರ್ಯದರ್ಶಿ ಕಮಲಾಕ್ಷ ಶೆಟ್ಟಿ ಉಪಸ್ಥಿತರಿದ್ದರು.


Spread the love

Exit mobile version