ಮಂಗಳೂರು:  ಸಾಮಾನ್ಯ ಪ್ರವೇಶ ಪರೀಕ್ಷೆ-ಜಿಲ್ಲೆಯಲ್ಲಿ 11696 ಅಭ್ಯರ್ಥಿಗಳು

Spread the love

ಮಂಗಳೂರು : ವೈದ್ಯಕೀಯ.ಇಂಜಿನಿಯರಿಂಗ್ ಸೇರಿದಂತೆ ಇನ್ನಿತರೆ ಕೋರ್ಸ್‍ಗಳ ಪ್ರವೇಶಕ್ಕಾಗಿ ಮೇ 12 ಮತ್ತು 13 ರಂದು ಜಿಲ್ಲೆಯ 22 ಕೇಂದ್ರಗಳಲ್ಲಿ ಒಟ್ಟು 11,696 ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ) ಬರೆಯಲಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ.

ಅವರು ಇಂದು ತಮ್ಮ ಕಚೇರಿಯಲ್ಲಿ ಈ ಬಗ್ಗೆ ನಡೆದ ಪೂರ್ವಭಾವೀ ಸಭೆಯಲ್ಲಿ ಈ ವಿಷಯ ತಿಳಿಸಿದರು. ಮಂಗಳೂರು ನಗರದಲ್ಲಿ 11,ಪುತ್ತೂರಿನಲ್ಲಿ 03,ಮೂಡಬಿದಿರೆಯಲ್ಲಿ 06,ಉಜಿರೆಯಲ್ಲಿ 02 ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆಯೆಂದು ಪಿ.ಯು.ಶಿಕ್ಷಣ ಮಂಡಳಿ ಉಪನಿರ್ದೇಶಕ ಕೆ.ಆರ್.ತಿಮ್ಮಪ್ಪ ಸಭೆಗೆ ತಿಳಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ಇವೆ ಎಂಬ ಬಗ್ಗೆ ಪರಿಶೀಲಿಸಲು ಹಾಗೂ ಯಾವುದೇ ರೀತಿಯ ತೊಡಕುಗಳು ಆಗದಂತೆ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಸಮಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸರಬರಾಜು ಮಾಡುವುದು,ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಿ ಸಂಬಂಧಿಸಿದ ಕಚೇರಿಗಳಿಗೆ ಕಳುಹಿಸಲು ವಾಹನಗಳು ಸಿಬ್ಬಂದಿಗಳನ್ನು ನಿಯೋಜಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.

ಮಂಗಳೂರಿನ 11 ಕೇಂದ್ರಗಳಲ್ಲಿ 5344,ಮೂಡಬಿದ್ರೆಯ 06 ಕೇಂದ್ರಗಳಲ್ಲಿ 3712,ಪುತ್ತೂರಿನ 03 ಕೇಂದ್ರಗಳಲ್ಲಿ 1856 ಹಾಗೂ ಉಜಿರೆಯ 02 ಕೇಂದ್ರಗಳಲ್ಲಿ 784 ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಲಿದ್ದಾರೆ.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸಹಾಯಕ ಅಯುಕ್ತ ಡಾ. ಅಶೋಕ್ ಮತ್ತು ಬಸವರಾಜ್ ಮುಂತಾದವರು ಭಾಗವಹಿಸಿದ್ದರು.


Spread the love