Home Mangalorean News Kannada News ಮಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ದಕ್ಷ ಹಾಗೂ ಪ್ರಾಮಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ – ಕ್ಯಾಪ್ಟನ್...

ಮಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ದಕ್ಷ ಹಾಗೂ ಪ್ರಾಮಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ – ಕ್ಯಾಪ್ಟನ್ ಗಣೇಶ್ ಕಾರ್ಣಿಕ್

Spread the love

ಮಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಆಡಳಿತ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು ಸಂಪೂರ್ಣ ಹದಗೆಟ್ಟಿದೆ. ಕಾನೂನು ಸುವ್ಯವಸ್ಥೆಯ ವಿಫಲತೆಗೆ ಪೋಲೀಸ್ ಇಲಾಖೆಯ ಆಡಳಿತದಲ್ಲಿ ನಿರಂತರ ಮೂಗು ತೂರಿಸುತ್ತಿರುವ ಪ್ರವೃತ್ತಿಯೇ ಕಾರಣ. ನಿಷ್ಠಾವಂತ, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಖಂಡನೀಯ. ಭ್ರಷ್ಟ ಮಂತ್ರಿಗಳ ಮಾತಿಗೆ ಕಿವಿಗೊಟ್ಟು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆಗೊಳಿಸುತ್ತಿರುವ ರೀತಿ ಹಾಗೂ ಇಡೀ ಆಡಳಿತ ವ್ಯವಸ್ಥೆಯನ್ನು ಭ್ರಷ್ಟಾಚಾರ ಹಾಗೂ ಅಪ್ರಾಮಾಣಿಕತೆ ಹಾಗೂ ಒಲೈಸುವಿಕೆಯ ಮೂಲಕ ನಿಷ್ಕ್ರಿಯಗೊಳಿಸುತ್ತಿರುವ ಹುನ್ನಾರ ಆಡಳಿತ ವಿಫಲತೆಗೆ ಹಿಡಿದ ಕೈಗನ್ನಡಿಯಾಗಿದೆ.

ಕೊಪ್ಪಳದಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಅನುಪಮಾ ಶೆಣೈಯವರ ಅನಪೇಕ್ಷಿತ ಎತ್ತಂಗಡಿ ಈ ಸರ್ಕಾರದ ಸರ್ವಾಧಿಕಾರಿ ಪ್ರವೃತ್ತಿಗೆ ಹಿಡಿದ ಕೈಗನ್ನಡಿ. ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅನುಪಮ ಶೆಣೈ ತನ್ನ ಮನೆಯ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯ ಹಿನ್ನಲೆಯಲ್ಲೂ ಸ್ವಪ್ರಯತ್ನ ಹಾಗೂ ಕಠಿಣ  ಪರಿಶ್ರಮದಿಂದ  ಪೋಲೀಸ್ ಅಧಿಕಾರಿಣಿಯಾಗಿ ಕರಾವಳಿ ಕರ್ನಾಟಕವೇ ಹೆಮ್ಮೆ ಪಡುವ ಹಾಗೆ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.  ಅವರ ಕಾರ್ಯದಕ್ಷತೆ ಹಾಗೂ ಪ್ರಾಮಾಣಿಕತೆಯನ್ನು ಧಿಕ್ಕರಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪರಮೇಶ್ವರ ನಾಯ್ಕ್‍ರವರ ಪೋನ್ ಕರೆಯ ಕ್ಷುಲಕ ಕಾರಣವನ್ನು ನೀಡಿ ಇಲಾಖೆಯ ವರ್ಗಾವಣೆ ನೀತಿ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರ ಏಕಾಏಕಿ ಎತ್ತಂಗಡಿ ಮಾಡಿರುವುದು ಉತ್ತಮ ಸೇವೆ ನೀಡುತ್ತಿರುವ ಅಧಿಕಾರಿಗಳ ಧಮನಿಸುವ ನೀತಿಯಾಗಿದೆ.  ಇದರಿಂದಾಗಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಹನೆಯ ಮಿತಿ ಮೀರಲು ಬಹಳ ಸಮಯದ ಅಗತ್ಯವಿಲ್ಲವೆಂಬುದನ್ನು ತೋರಿಸುತ್ತದೆ.  ಸಾರ್ವಜನಿಕರ ಸಹನೆಯನ್ನು ಪರೀಕ್ಷಿಸದೆ ಶ್ರೀಮತಿ ಅನುಪಮಾ ಶೆಣೈರವರನ್ನು ಮೊದಲಿದ್ದ ಜವಬ್ದಾರಿಯಲ್ಲಿಯೇ ಮುಂದುವರೆಸುವ ಮೂಲಕ ಜನತೆಯ ಭಾವನೆ ಹಾಗೂ ಪ್ರಾಮಾಣಿಕತೆ ಮತ್ತು ಧಕ್ಷತೆಯನ್ನು ಗೌರವಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಭಂಡೆ ಪ್ರಕರಣ, ರವೀಂದ್ರನಾಥ್ ಪ್ರಕರಣ, ಮಂಗಳೂರಿನ ಧಕ್ಷ ಅಧಿಕಾರಿ ಶ್ರೀ ಪ್ರಮೋದ್ ಕುಮಾರ್ ವರ್ಗಾವಣೆ, ಸವಿತ್ರತೇಜ ಪ್ರಕರಣ ಈ ರೀತಿಯಲ್ಲಿ ದಕ್ಷ ಅಧಿಕಾರಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆಯನ್ನು ಪಟ್ಟಿ ಮಾಡಬಹುದು. ಸರ್ಕಾರ ಈಗಲಾದರೂ ಎಚ್ಚತ್ತುಕೊಂಡು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಸೇವೆಯನ್ನು ಗೌರವಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ರಾಜ್ಯದ ಜನತೆಯು ನೆಮ್ಮದಿಯಿಂದ ಜೀವನವನ್ನು ಸಾಗಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಮಾನ್ಯ ಮುಖ್ಯ ಮಂತ್ರಿಗಳನ್ನು ಹಾಗೂ ರಾಜ್ಯದ ಗೃಹ ಸಚಿವರನ್ನು ಆಗ್ರಹಿಸುತ್ತೇನೆ.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್


Spread the love

Exit mobile version