ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ : ಅಕ್ರಮ ಗಾಂಜಾ ಪತ್ತೆ ಇಬ್ಬರು ಆರೋಪಿಗಳ ಸೆರೆ
ಮಂಗಳೂರು : ಮಂಗಳೂರು ನಗರಕ್ಕೆ ಅಂಧ್ರ ಪ್ರದೇಶದಿಂದ ಗಾಂಜಾವನ್ನು ಅಕ್ರಮವಾಗಿ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗಾಂಜಾ ಸಮೇತ ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಶನಿವಾರ ಮಂಗಳೂರು ನಗರಕ್ಕೆ ಅಂಧ್ರಪ್ರದೇಶದಿಂದ ಬೆಂಗಳೂರು ಮೂಲಕ ಅಕ್ರಮವಾಗಿ ಗಾಂಜಾವನ್ನು ತಂದು ಮಂಗಳೂರು ನಗರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು ಪಂಪ್ ವೆಲ್ ವೃತ್ತದ ಬಳಿಯ ಒಮೆಗಾ ಆಸ್ಪತ್ರೆ ಎದುರು ಅಕ್ರಮವಾಗಿ ಗಾಂಜಾವನ್ನು ಹೊಂದಿದ್ದ ಕಣ್ಣೂರು ನಿವಾಸಿ ಜುನೈದ್ (30), ಪುತ್ತೂರು ನಿವಾಸಿ ಅಬ್ದುಲ್ ಕರೀಂ (25) ಎಂಬವರನ್ನು ವಶಕ್ಕೆ ಪಡೆದುಕೊಂಡು ಅವರಿಂದ 9.5 ಕೆಜಿ ಗಾಂಜಾ, 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಗಾಂಜಾ ಹಾಗೂ ಮೊಬೈಲ್ ಫೋನ್ ಗಳ ಒಟ್ಟು ಮೌಲ್ಯ ರೂ. 2,39,000/- ಆಗಿರುತ್ತದೆ. ಈ ಗಾಂಜಾವನ್ನು ಆರೋಪಿಗಳು ಅಂಧ್ರಪ್ರದೇಶದಿಂದ ಖರೀದಿ ಮಾಡಿ ಬೆಂಗಳೂರು ಮೂಲಕ ಮಂಗಳೂರಿಗೆ ತಂದು ಮಂಗಳೂರು ನಗರದಲ್ಲಿ ಮಾರಾಟ ಮಾಡಲು ತಂದಿರುವುದಾಗಿದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಗಾಂಜಾವನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಆರೋಪಿಗಳ ಪೈಕಿ ಅಬ್ದುಲ್ ಕರೀಂ ಎಂಬಾತನ ವಿರುದ್ಧ ಈ ಹಿಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಹಾಗೂ ಬೆಳಗಾಂ ಜಿಲ್ಲೆಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಸಂಚು ರೂಫಿಸಿದ ಪ್ರಕರಣವು ದಾಖಲಾಗಿರುತ್ತದೆ.
ಪೊಲೀಸ್ ಕಮೀಷನರ್ ಶ್ರೀ ವಿಪುಲ್ ಕುಮಾರ್, ಐಪಿಎಸ್ ರವರ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಯವರಾದ ಶ್ರೀ ಹನುಮಂತರಾಯ, ಹಾಗೂ ಅಪರಾಧ & ಸಂಚಾರ ವಿಭಾಗದ ಡಿಸಿಪಿಯವರಾದ ಶ್ರೀಮತಿ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಕೆ. ಶ್ರೀನಿವಾಸ್ ಮತ್ತು ಪಿ.ಎಸ್.ಐ ರವರಾದ ಶ್ಯಾಮ್ ಸುಂದರ್ ಹೆಚ್ ಎಂ, ಕಬ್ಬಾಳ್ ರಾಜ್ ಹೆಚ್ ಡಿ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.