ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಕೋಕೆನ್ ಪತ್ತೆ- ಇಬ್ಬರ ಬಂಧನ

Spread the love

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಕೋಕೆನ್ ಪತ್ತೆ- ಇಬ್ಬರ ಬಂಧನ

ಮಂಗಳೂರು: ಗೋವಾ ರಾಜ್ಯದಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ನಿಷೇದಿತ ಮಾದಕ ವಸ್ತುವಾದ ಕೋಕೇನ್ ನ್ನು ಸಾಗಾಟ/ಮಾರಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿ 35 ಗ್ರಾಂ ಕೋಕೆನ್ ನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಮಂಗಳೂರು ನಗರಕ್ಕೆ ಗೋವಾ ರಾಜ್ಯದಿಂದ ನಿಷೇದಿತ ಮಾದಕ ವಸ್ತುವಾದ ಕೋಕೆನ್ ನ್ನು ಖರೀದಿಸಿಕೊಂಡು ಸಾಗಾಟ/ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ನೇತೃತ್ವದ ಸಿಸಿಬಿ ಪೊಲೀಸರು ಉಳ್ಳಾಲ ತಾಲೂಕು ಆಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಮೈದಾನದ ಬಳಿಯಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಕೋಕೆನ್ ನ್ನು ಮಾರಾಟ/ಸಾಗಾಟ ಮಾಡುತ್ತಿದ್ದ ಆರೋಪಿಗಳಾದ ಅಂಬ್ಲಮೊಗರು ನಿವಾಸಿ ಸದಕತ್.ಯು @ ಶಾನ್ ನವಾಜ್(31), ಮತ್ತು ಮಹಮ್ಮದ್ ಅಶ್ಫಕ್ @ ಅಶ್ಫಾ(25 ಎಂಬವರನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ವಶದಲ್ಲಿದ್ದ KA- 19-HL-2021 ನೇ ಹೊಂಡಾ ಅಕ್ಟಿವಾ ಸ್ಕೂಟರ್ ನೇದನ್ನು ಸ್ವಾಧೀನಪಡಿಸಿಕೊಂಡು ಅದರಲ್ಲಿ ಸಾಗಾಟ ಮಾಡುತ್ತಿದ್ದ ರೂ. 2,72,000/- ರೂ ಮೌಲ್ಯದ 35 ಗ್ರಾಂ ನಿಷೇಧಿತ ಮಾದಕ ವಸ್ತು ಕೋಕೆನ್, 3 ಮೊಬೈಲ್ ಫೋನ್ ಗಳನ್ನು, ಡಿಜಿಟಲ್ ತೂಕ ಮಾಪಕ, ನಗದು ರೂ. 5560/-ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 4,00,000/- ಆಗಿರುತ್ತದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಗಳಿಬ್ಬರೂ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಗೋವಾ ರಾಜ್ಯದಿಂದ ಕೋಕೆನ್ ನ್ನು ಖರೀದಿಸಿಕೊಂಡು ಕರ್ನಾಟಕ, ಕೇರಳ ರಾಜ್ಯದ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಈ ಮಾದಕ ವಸ್ತು ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

ಆರೋಪಿಗಳ ಪೈಕಿ ಸದಕತ್.ಯು @ ಶಾನ್ ನವಾಜ್ ಎಂಬಾತನ ವಿರುದ್ದ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸಾಗಾಟದ ಪ್ರಕರಣ ಹಾಗೂ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ.

ಈ ಮಾದಕ ವಸ್ತು ಕೋಕೆನ್ ಮಾರಾಟ/ಸಾಗಾಟದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐಯವರಾದ ಶರಣಪ್ಪ ಭಂಡಾರಿ ಮತ್ತು ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.


Spread the love