ಮಂಗಳೂರು :ಸಿಸಿಬಿ ಪೋಲಿಸರಿಂದ ಸರಗಳ್ಳತನ ಆರೋಪಿಯ ಬಂಧನ

Spread the love

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಹಿಳೆಯರ ಕುತ್ತಿಗೆಯಿಂದ ಸರಕಳ್ಳತನ ಮಾಡಿದ ಪ್ರಕರಣದಲ್ಲಿ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತ ಆರೋಪಿಯನ್ನು ಜೆಪ್ಪು ಮಾರ್ಕೆಟ್ ಬಳಿ ನಿವಾಸಿ ತೌಸಿಫ್ ಸಯ್ಯದ್, ಪ್ರಾಯ(30) ಎಂದು ಗುರುತಿಸಲಾಗಿದೆ.

ಈತನು ಇನ್ನೋರ್ವ ಆರೋಪಿಯೊಂದಿಗೆ ಈ ಹಿಂದೆ 2013 ನೇ ಇಸವಿಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2013 ನೇ ಇಸವಿಯಲ್ಲಿ ಮುಳಿಹಿತ್ಲು ಫೆರಿ ರೋಡ್ ನಲ್ಲಿ ಶ್ರೀಮತಿ ಉಮಾ ಎಸ್ ಮೆಂಡನ್ ಎಂಬವರು ನಡೆದುಕೊಂಡು ಹೋಗುತ್ತಿದ್ದ ಬೈಕ್ ನಲ್ಲಿ ಬಂದು ಅವರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರವನ್ನು ಕಳ್ಳತನ ಮಾಡಿರುತ್ತಾರೆ. ಅಲ್ಲದೇ ಅತ್ತಾವರದ 6 ನೇ ಅಡ್ಡ ರಸ್ತೆಯಲ್ಲಿ ಶ್ರೀಮತಿ ಸುಪ್ರಿತಾ ಎಂಬವರು ನಡೆದುಕೊಂಡು ಹೋಗುತ್ತಿದ್ದ ಸಮಯ ಬೈಕ್ ನಲ್ಲಿ ಬಂದು ದಾರಿ ಕೇಳುವ ನೆಪದಲ್ಲಿ ಮಾತನಾಡಿ ಕುತ್ತಿಗೆಯಿಂದ ಚಿನ್ನದ ಮಾಂಗಲ್ಯ ಸರವನ್ನು ಎಳೆದು ಸುಲಿಗೆ ಮಾಡಿದ್ದನು. ಅಲ್ಲದೇ ಈತನು ಉಳ್ಳಾಲ, ಸುಳ್ಯ ಹಾಗೂ ಕೇರಳದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಬೈಕ್ ನಲ್ಲಿ ದಾರಿ ಕೇಳುವ ನೆಪದಲ್ಲಿ ಅಮಾಯಕ ಮಹಿಳೆಯರ ಕುತ್ತಿಗೆಯಿಂದ ಸರಕಳ್ಳತನ ಮಾಡಿರುತ್ತಾರೆ. ಈತನ ವಿರುದ್ಧ ಒಟ್ಟು 5 ಸರಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಈ ಪ್ರಕರಣಗಳಲ್ಲಿ ಭಾಗಿಯಾದ ಈತನ ಅಣ್ಣ ಸಯ್ಯದ್ ಸಾಹಿಲ್ ಎಂಬಾತನನ್ನು ಈಗಾಗಲೇ ದಸ್ತಗಿರಿ ಮಾಡಿ ಸುಲಿಗೆ ಮಾಡಿದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈತನು ಸರಕಳ್ಳತನ ಮಾಡಿದ ನಂತರ ತಲೆಮರೆಸಿಕೊಂಡಿದ್ದನು. ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಕಮೀಷನರ್ ಶ್ರೀ.ಎಸ್.ಮುರುಗನ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಶ್ರೀ.-ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಡಾ: ಸಂಜೀವ್ ಎಂ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love