ಮಂಗಳೂರು:-ನಾವು ರೋಗ ಮುಕ್ತರಾಗಿ ಆರೋಗ್ಯವಂತರಾಗಿರಲು ನಮ್ಮ ಮನೆ,ಅಂಗಳ ನಮ್ಮ ಸುತ್ತಲಿನ ಪರಿಸರ ಸ್ವಚ್ಛತೆಯಿಂದ ಇದ್ದರೆ ಮಾತ್ರ ಸಾಧ್ಯ ಎಂದು ಅರಣ್ಯ,ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಅವರು ಇಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್,ಜಿಲ್ಲಾ ಆಡಳಿತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು ಮಹಾನಗರಪಾಲಿಕೆ,ವೆನ್ಲಾಕ್ ಜಿಲ್ಲಾ ಮತ್ತು ಲೇಡಿಘೋಷನ್ ಆಸ್ಪತ್ರೆಗಳ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಆರೋಗ್ಯ ದಿನಾಚರಣೆ- 2015 ನ್ನು ಹಾಗೂ ಡೇಂಗಿ ಮಲೇರಿಯಾ ನಿಯಂತ್ರಣ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ರೋಗ ಬಂದ ಮೇಲೆ ಪರಿತಪಿಸುವುದಕ್ಕಿಂತ ರೋಗ ಬಾರದಂತೆ ಎಚ್ಚರಿಕೆ ವಹಿಸಿ ವ್ಯಾಯಾಮ ,ಯೋಗ,ನಡಿಗೆ ವಾಕಿಂಗ್ಗಳ ಮೂಲಕ ಜೀವನ ಶೈಲಿ ಬದಲಾಯಿಸಿಕೊಂಡು ಚೈತನ್ಯಯುಕ್ತ ಜೀವನ ನಡೆಸಲು ಸಾಧ್ಯ ಎಂಬ ತಮ್ಮ ಜೀವನ ಕ್ರಮವನ್ನು ಉದಾಹರಣೆಯಾಗಿ ನೀಡಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಮಲೇರಿಯಾ ಬಗ್ಗೆ “ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು ” ಎಂಬ ಆರೋಗ್ಯ ಕಾರ್ಯಕರ್ತರ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿ ಬಡ ಡೆಂಗಿ ರೋಗಿಗಳಿಗೆ ಅಗತ್ಯವಾದ ಪ್ಲೇಟ್ಲೆಟ್ಸ್ ಗಳನ್ನು ಉಚಿತವಾಗಿ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಿಂದ ವಿತರಿಸಲು ಕ್ರಮ ವಹಿಸಲಾಗಿದೆ. ಆಶಾ ಆರೋಗ್ಯ ಕಾರ್ಯಕರ್ತೆಯರ ಬಾಕಿ ವೇತನ ಸಂಪೂರ್ಣವಾಗಿ ಅವರ ಬ್ಯಾಂಕ್ ಖಾತೆಗೆ ಜಮೆಯಾಗುವಂತೆ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು. ನಮ್ಮ ಸುತ್ತಮುತ್ತಲಿನ ಗೂಡಂಗಡಿ ಬೊಂಡ ವ್ಯಾಪಾರಿಗಳು ಇತರರು ಪರಿಸರ ನೈರ್ಮಲ್ಯ ಹಾಳುಗೆಡವಿದಲ್ಲಿ ಅಂತಹವರ ಪರವಾನಗಿ ಕಡ್ಡಾಯವಾಗಿ ರದ್ದು ಪಡಿಸುವಂತೆ ಮಹಾನಗರಪಾಲಿಕೆ ಪುರಸಭೆ ಮತ್ತು ತಾಲೂಕು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ,ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ.ಚಂದ್ರಕಲಾ ಮಹಾನಗರಪಾಲಿಕೆ ಉಪ ಮೇಯರ್ ಪುರುಷೋತ್ತಮ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ,ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ವಿದ್ಯಾ ,ಮಹಾನಗರಪಾಲಿಕೆ ಆಯುಕ್ತೆ ಹೆಪ್ಸಿಬಾ ರಾಣಿ ಕೋರ್ಲಪತಿ ಮುಂತಾದವರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಗಿರೀಶ್ ನಾವಡ ಮತ್ತು ಬಳಗದವರಿಂದ ಡೆಂಗಿ ಮತ್ತು ಮಲೇರಿಯಾ ಕುರಿತು ಬೀದಿ ನಾಟಕ ಪ್ರದಶರ್ಿಸಲಾಯಿತು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್ ಪ್ರಾಸ್ತಾವಿಕ ಭಾಷಣ ಮಾಡಿದರು.