ಮಂಗಳೂರು; ಈ ವರ್ಷದ ಹಜ್ ಯಾತ್ರೆಗೆ ಮಂಗಳೂರು ವಿಮಾನ ನಿಲ್ದಾಣದಿಂದ 771 ಯಾತ್ರಿಕರು ತೆರಳಲಿದ್ದಾರೆ ಎಂದು ಹಜ್ ಹಾಗೂ ವಾರ್ತಾ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ಎಜಾಸ್ ಆಹಮದ್ ತಿಳಿಸಿದ್ದಾರೆ.
ಅವರು ಬುಧವಾರ ನಗರದ ಯೆನಪೋಯಾ ಆಸ್ಪತ್ರೆಯಲ್ಲಿ ಹಜ್ ಯಾತ್ರೆಗೆ ಹೋಗುವ ದಕ್ಷಿಣ ಕನ್ನಡ ಜಿಲ್ಲೆಯ ಯಾತ್ರಿಕರಿಗೆ ಚುಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕದಿಂದ ಒಟ್ಟು 3050 ಮೀಸಲಿಟ್ಟ ಯಾತ್ರಿಗಳು ಹಾಗೂ 2050 ಮಂದಿ ಲಾಟರಿ ಮೂಲಕ ಆಯ್ಕೆಗೊಂಡ ಯಾತ್ರಿಗಳು ಹಜ್‍ಗೆ ತೆರಳಲಿದ್ದಾರೆ. ಕರ್ನಾಟಕದ ಯಾತ್ರಿಕರು ಬೆಂಗಳೂರು, ಮಂಗಳೂರು, ಗೋವಾ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳ ಮೂಲಕ ಹಜ್ ಯಾತ್ರೆಗೆ ತೆರಳಲಿದ್ದಾರೆ ಎಂದು ಅವರು ಹೇಳಿದರು.
ಮಂಗಳೂರು, ಉಡುಪಿ, ಚಿಕ್ಕಮಗಳೂರು, ಹಸನ ಹಾಗೂ ಕೊಡಗು ಜಿಲ್ಲೆಯ ಯಾತ್ರಿಕರು ಮಂಗಳೂರು ವಿಮಾನನಿಲ್ದಾಣದ ಮೂಲಕ ನಿರ್ಗಮಿಸಲಿದ್ದಾರೆ. ಈ ವರ್ಷ ಸೌದಿ ಏರ್‍ಲೈನ್ಸ್‍ನ ಅಂಗಸಂಸ್ಥೆ ನಾಸಾ ಏರ್‍ವೇಸ್ ವಿಮಾನದಲ್ಲಿ ಪ್ರಯಾಣಿಕರು ತೆರಳುವರು ಎಂದು ಎಜಾಸ್ ಅಹಮದ್ ಮಾಹಿತಿ ನೀಡಿದರು.
ರಾಜ್ಯದಲ್ಲಿ ಈ ವರ್ಷದ ಹಜ್ ಯಾತ್ರೆಯ ಮೊದಲ ಪ್ರಕ್ರಿಯೆಗೆ ಮಂಗಳೂರಿನಲ್ಲಿ ಇಂದು ಚಾಲನೆ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ಹಜ್ ಸಮಿತಿ ಕಾರ್ಯನಿರ್ವಹಣಾಧಿಕಾರಿ ಸರ್ಫರಾಝ್ ಖಾನ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ. ರಶೀದ್, ಹಜ್ ನಿರ್ವಹಣಾ ಸಮಿತಿ ಅಧ್ಯಕ್ಷ ಯೆನಪೋಯಾ ಮುಹಮದ್ ಕುಂಞ ಮತ್ತಿತರರು ಇದ್ದರು.