Home Mangalorean News Kannada News ಮಂಗಳೂರು ಹಳೆ ಬಂದರು ಅಭಿವೃದ್ಧಿಗೆ 65 ಕೋಟಿ : ಶಾಸಕ ಜೆ.ಆರ್.ಲೋಬೊ

ಮಂಗಳೂರು ಹಳೆ ಬಂದರು ಅಭಿವೃದ್ಧಿಗೆ 65 ಕೋಟಿ : ಶಾಸಕ ಜೆ.ಆರ್.ಲೋಬೊ

Spread the love

ಮಂಗಳೂರು ಹಳೆ ಬಂದರು ಅಭಿವೃದ್ಧಿಗೆ 65 ಕೋಟಿ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರು ಹಳೆ ಬಂದರು ಅಭಿವೃದ್ಧಿಗೆ ಇದೀಗ ಕಾಲಕೂಡಿ ಬಂದಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 65 ಕೋಟಿ ಮಂಜೂರು ಮಾಡಿರುವುದಾಗಿ ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಕೇಂದ್ರ ಸರ್ಕಾರ ತನ್ನ ಪಾಲಾಗಿ 25 ಕೋಟಿ ನೀಡಿದ್ದು ಉಳಿಕೆ ಹಣವನ್ನು ರಾಜ್ಯ ಸರ್ಕಾರ ಪಾವತಿಸುವುದು. ಈ ಕೆಲಸವನ್ನು ಸಂಯುಕ್ತವಾಗಿ ನಿರ್ಮಿಸುತ್ತವೆ ಎಂದರು.

ಶಾಸಕ ಜೆ.ಆರ್.ಲೋಬೊ ಅವರು ಈ ಸಂಬಂಧ ಸರ್ಕಾರಗಳು ನೀಡಿರುವ ಅಂಕಿಅಂಶವನ್ನು ಪರಿಶೀಲಿಸಿ ಮಾತನಾಡಿ ಹಳೆಬಂದರು ಹೂಳೆತ್ತುವ ಕಾಮಗಾರಿಗೆ 29  ಕೋಟಿ ಮಂಜೂರಾಗಿದ್ದು ಈ ಪೈಕಿ ಕೇಂದ್ರ ಸರ್ಕಾರ 15 ಕೋಟಿ ನೀಡಲಿದ್ದು ಉಳಿಕೆ ಮೊತ್ತವನ್ನು ರಾಜ್ಯ ಸರ್ಕಾರ ಪಾವತಿಸಲಿದೆ. ಈಗ ಬಂದರಿನ ಆಳ ಕೇವಲ 4 ಮೀಟರ್ ಮಾತ್ರ ಇದ್ದು ಇದನ್ನು 7 ಮೀಟರ್ ಗೆ ಹೆಚ್ಚಿಸ ಬೇಕಾಗಿದೆ. ಹೀಗೆ ಮಾಡುವುದರಿಂದ ಬೃಹತ್  ಹಡಗುಗಳು ಬರಲು ಸಾಧ್ಯವಾಗುತ್ತದೆ ಎಂದರು.

ಲಕ್ಷದ್ವೀಪಕ್ಕೆ ಉನ್ನತ ಮಟ್ಟದ ನಿಯೋಗವನ್ನು ಕೊಂಡು ಹೋಗಿ ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಿರುವುದರ ಫಲವಾಗಿ ಅಲ್ಲಿನ ಸರ್ಕಾರ ವಿಶೇಷವಾಗಿ ಜೆಟ್ಟಿ ನಿರ್ಮಿಸಲು 68 ಕೋಟಿ ಕೊಡುವ ಬಗ್ಗೆ ಸಹಮತ ವ್ಯಕ್ತಪಡಿಸಿದೆ.

ಲಕ್ಷದ್ವೀಪದ ವ್ಯವಹಾರ ಸಂಪೂರ್ಣವಾಗಿ ಕೇರಳಕ್ಕೆ ಹೋಗಿತ್ತು. ಭೇಟಿಯಾದ ನಂತರ ಒಡಂಬಡಿಕೆಗೆ ತಾತ್ವಿಕವಾಗಿ ಒಪ್ಪಿ ಮತ್ತೆ ವ್ಯವಹಾರ ಕುದುರಿಸುವ ಭರವಸೆಯನ್ನು ಅಲ್ಲಿನ ಆಡಳಿತ ಮಂಡಳಿ ಒಪ್ಪಿರುವುದು ತಮಗೆ ಸಂತಸ ತಂದಿದೆ ಎಂದೂ ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಮಂಗಳೂರು ಹಳೇ ಬಂದರಿನಲ್ಲಿ ಮೀನುಗಾರ ಮಹಿಳೆಯರಿಗೆ ಶೆಡ್ ನಿರ್ಮಿಸಲು ರಾಜ್ಯ ಸರ್ಕಾರ 47 ಲಕ್ಷ ರೂಪಾಯಿಯನ್ನು ಮಂಜೂರು ಮಾಡಿದ್ದು ಇದನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಆದಷ್ಟು ಶೀಘ್ರದಲ್ಲಿ ಕಾಮಗಾರಿಯನ್ನು ಮಾಡಲಾಗುವುದು ಎಂದರು.

ನಾಡದೋಣಿಗಳಿಗೆ ಸರಿಯಾದ ತಂಗುದಾಣ ಇಲ್ಲದಿರುವುದನ್ನು ಮನಗಂಡು ರಾಜ್ಯ ಸರ್ಕಾರ 2.82 ಕೋಟಿ ಮಂಜೂರು ಮಾಡಿದೆ ಎಂದ ಅವರು ಸುಲ್ತಾನ್ ಬತ್ತೇರಿ ಅಭಿವೃದ್ಧಿಗೆ 4.5 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದರು.

ಮೀನುಗಾರಿಕೆ ಬಂದರು ಅಭಿವೃದ್ಧಿಯ 3ನೇ ಹಂತದ ಕಾಮಗಾರಿಗೆ 57.60 ಕೋಟಿ ಮಂಜೂರು ಮಾಡಿದ್ದು ಈ ಪೈಕಿ ಕೇಂದ್ರ ಸರ್ಕಾರ 37.60 ಕೋಟಿ ರೂಪಾಯಿಯನ್ನು ಒದಗಿಸಲಿದೆ ಮತ್ತು ಉಳಿಕೆ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಬೇಕಾಗಿದೆ. ಈ ಮೊದಲು ಕೇಂದ್ರ ಸರ್ಕಾರ 60% ಮತ್ತು ರಾಜ್ಯ ಸರ್ಕಾರ 40% ಹಣ ನೀಡುತ್ತಿತ್ತು. ಈ ಮೊತ್ತವನ್ನೇ ಮುಂದುವರಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಒತ್ತಾಯಿಸಿದರು.


Spread the love

Exit mobile version