ಮಂಗಳೂರು : ಹೂ ಬೆಳೆಗಾರರಿಗೆ ಪರಿಹಾರ – ಅರ್ಜಿ ಆಹ್ವಾನ
ಮಂಗಳೂರು : ಕೋವಿಡ್-19 ಕಾರಣ ದೇಶದಲ್ಲಿ ವಿಧಿಸಿದ ಲಾಕ್‍ಡೌನ್ ನಿಂದ ಹೂವಿನ ಬೆಳೆಗಾರರಿಗೆ ಉಂಟಾದ ನಷ್ಠಕ್ಕೆ ಪರಿಹಾರ ನೀಡುವ ಬಗ್ಗೆ ಕರ್ನಾಟಕ ಸರ್ಕಾರವು ಹೂವಿನ ಬೆಳೆ ಬೆಳೆದಿರುವ ರೈತರಿಗೆ ಪ್ರತೀ ಹೆಕ್ಟೇರಿಗೆ(ಎರಡೂವರೆ ಎಕರೆ) ಗರಿಷ್ಠ ರೂ 25000/-ಗಳಂತೆ ಪರಿಹಾರ ನೀಡಲು ಕಾರ್ಯಕ್ರಮ ಜಾರಿಗೆ ತಂದಿರುತ್ತದೆ.
2019-20 ನೇ ಸಾಲಿನಲ್ಲಿ ಕೈಗೊಂಡ ಬೆಳೆ ಸಮೀಕ್ಷೆ ದತ್ತಾಂಶಗಳ ಆಧಾರದಲ್ಲಿ ದಾಖಲಾದ ರೈತರಿಗೆ ಪರಿಹಾರ ನೀಡಲು ಕ್ರಮವಹಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯಾ ಗ್ರಾಮಪಂಚಾಯತ್ ಕಛೇರಿಗಳಲ್ಲಿ ಬೆಳೆ ಸಮೀಕ್ಷಾ ದತ್ತಾಂಶದಂತೆ ಹೂವಿನ ಬೆಳೆ ಬೆಳೆದಿರುವ ರೈತರ ವಿವರಗಳನ್ನು ಸಾರ್ವಜನಿಕರ ಅವಗಾಹನೆಗೆ ಪ್ರಕಟಪಡಿಸಲಾಗುತ್ತಿದೆ. ಈ ಪಟ್ಟಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಮೇ 23 ರೊಳಗೆ ತಮ್ಮ ಆಕ್ಷೇಪಣೆಗಳನ್ನು ಬರಹ ಮೂಲಕ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಅಥವಾ ಆಯಾ ರೈತ ಸಂಪರ್ಕ ವ್ಯಾಪ್ತಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಸಲ್ಲಿಸಬೇಕು.
ಪಟ್ಟಿಯಲ್ಲಿ ಯಾವುದೇ ಕಾರಣಕ್ಕೆ ಬಿಟ್ಟು ಹೋದ ಹೂವಿನ ಬೆಳೆ ಕೈಗೊಂಡಿರುವ ಕೃಷಿಕರು ನಿಗಧಿತ ನಮೂನೆಯಲ್ಲಿ ಹೂವಿನ ಬೆಳೆ ಬೆಳೆದಿರುವ ಜಮೀನಿನ ಆರ್.ಟಿ.ಸಿ ಯೊಂದಿಗೆ ಆಧಾರ್ ಕಾರ್ಡ್, ಸ್ವಯಂ ದೃಢೀಕೃತ ಘೋಷಣಾ ಪ್ರಮಾಣ ಪತ್ರ, ರೈತರ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು. ಜಂಟಿ ಖಾತೆಯಾಗಿದ್ದಲ್ಲಿ ಅಥವಾ ಜಮೀನಿನ ಒಡೆತನ ಹೊಂದಿದವರು ಮರಣ ಹೊಂದಿರುವ ಸಂದರ್ಭದಲ್ಲಿ ಸೂಕ್ತ ದೃಢೀಕರಣಗಳೊಂದಿಗೆ ಅರ್ಜಿಯನ್ನು ಮೇ 26 ರೊಳಗೆ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಅಥವಾ ಆಯಾ ರೈತ ಸಂಪರ್ಕ ವ್ಯಾಪ್ತಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಸಲ್ಲಿಸಬೇಕು. ತಾಲೂಕು ಹಾಗೂ ಜಿಲ್ಲಾ ಸಮಿತಿಗಳಿಂದ ಅನುಮೋದಿತವಾದ ಎಲ್ಲಾ ಫಲಾನುಭವಿಗಳಿಗೆ ಹೂವಿನ ಬೆಳೆ ಆವರಿಸಿರುವ ಪ್ರದೇಶಕ್ಕೆ ಪ್ರತೀ ಸೆಂಟ್ಸ್ ಸ್ಥಳಕ್ಕೆ ರೂ. 100 ರಂತೆ ಗರಿಷ್ಠ ಎರಡೂವರೆ ಎಕರೆಗೆ ರೂ 25000 ಗರಿಷ್ಠ ಪರಿಹಾರಧನವನ್ನು ಬೆಳೆಗಾರರ ಆಧಾರ್‍ಕಾರ್ಡ್‍ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸಂದಾಯ ಮಾಡಲಾಗುವುದು. ಹೆಚ್ಚಿನ ವಿವರಗಳಿಗೆ ಸಮೀಪದ ತೋಟಗಾರಿಕೆ ಕಚೇರಿಗಳನ್ನು ಸಂಪರ್ಕಿಸಬಹುದು.
ತೋಟಗಾರಿಕೆ ಉಪನಿರ್ದೇಶಕರು, ದ.ಕ.ಜಿ.ಪಂ., ಮಂಗಳೂರು – 9448999226, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಮಂಗಳೂರು -8277806378 (0824-2423615), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಬಂಟ್ವಾಳ – 8277806371 (08255-234102), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಪುತ್ತೂರು – 9731854527 (08251-230905), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಸುಳ್ಯ – 9880993238 (08257-232020), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಬೆಳ್ತಂಗಡಿ 8277806380 (08256-232148) ಇವರನ್ನು ಸಂಪರ್ಕಿಸಲು ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.