Home Mangalorean News Kannada News ಮಂಗಳೂರು : ಹೆದ್ದಾರಿ ಕಾಮಗಾರಿ – ಪ್ರಾಧಿಕಾರದೊಂದಿಗೆ ಸಮನ್ವಯತೆ- ನಗರಪಾಲಿಕೆಗೆ ಡಿಸಿ ಸೂಚನೆ

ಮಂಗಳೂರು : ಹೆದ್ದಾರಿ ಕಾಮಗಾರಿ – ಪ್ರಾಧಿಕಾರದೊಂದಿಗೆ ಸಮನ್ವಯತೆ- ನಗರಪಾಲಿಕೆಗೆ ಡಿಸಿ ಸೂಚನೆ

Spread the love

ಮಂಗಳೂರು : ತಲಪಾಡಿ-ಕುಂದಾಪುರ ಹೆದ್ದಾರಿ ಚತುಷ್ಪಥ ಕಾಮಗಾರಿಯಲ್ಲಿ ನಗರಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‍ಎಚ್‍ಎಐ)ದೊಂದಿಗೆ ನಿರಂತರ ಸಮನ್ವಯತೆಯಲ್ಲಿರುವಂತೆ ಮಂಗಳೂರು ಮಹಾನಗರಪಾಲಿಕೆಗೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ.

 ಅವರು ಸೋಮವಾರ ಸಂಜೆ ತಮ್ಮ ಕಚೇರಿಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು. ನಗರಪಾಲಿಕೆ ವ್ಯಾಪ್ತಿಯಲ್ಲಿ ಚತುಷ್ಟಥ ಕಾಮಗಾರಿಯಲ್ಲಿ ಹೆದ್ದಾರಿ ಪ್ರಾಧಿಕಾರ, ನಗರಪಾಲಿಕೆ ಮತ್ತು ಟ್ರಾಫಿಕ್ ಪೊಲೀಸ್ ಮಧ್ಯೆ ಪರಸ್ಪರ ಸಮನ್ವಯತೆ ಇಲ್ಲದೆ, ಪ್ರತೀ ನಿತ್ಯ ಸಂಚಾರ ಸಮಸ್ಯೆ ಏರ್ಪಡುತ್ತಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸಮಸ್ಯೆಯನ್ನು ಒಬ್ಬರೊಬ್ಬರ ಮೇಲೆ ವರ್ಗಾಯಿಸುವುದಕ್ಕಿಂತಲೂ, ಕಾಮಗಾರಿಯ ಬಗ್ಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಮಹಾನಗರಪಾಲಿಕೆ ಅಧಿಕಾರಿಗಳು ಪ್ರತೀನಿತ್ಯವೂ ಎನ್‍ಎಚ್‍ಎಐ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಕಾಮಗಾರಿಯಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಅಲ್ಲದೇ, ಮಹಾನಗರಪಾಲಿಕೆಯು ತನ್ನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಗಳ ಎಲ್ಲಾ ಮಾಹಿತಿ ಹೊಂದಿರಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಪಂಪ್‍ವೆಲ್ ಫ್ಲೈಓವರ್ ಕಾಮಗಾರಿಯ ವಿನ್ಯಾಸವನ್ನು ಬದಲಾಯಿಸಬೇಕು ಎಂದು ನಗರಪಾಲಿಕೆ ಅಧಿಕಾರಿಗಳು ಸಭೆಯಲ್ಲಿಟ್ಟ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿದ ಎನ್‍ಎಚ್‍ಎಐ ಅಧಿಕಾರಿಗಳು,  ಪಂಪ್‍ವೆಲ್ ಮೇಲ್ಸೇತುವೆ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಯಾವುದೇ ಕಾರಣಕ್ಕೂ ಈ ಹಂತದಲ್ಲಿ ವಿನ್ಯಾಸ ಬದಲಾಯಿಸುವುದು ಸಾಧ್ಯವಿಲ್ಲ. ಈಗಾಗಲೇ ಸ್ಥಳೀಯ ಸಂಸದರು ಮತ್ತು ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ್ದು, ಈಗಿನ ಕಾಮಗಾರಿ ವಿನ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು,  ಈಗಾಗಲೇ ಸಾಕಷ್ಟು ವಿಳಂಭವಾಗಿ ಪಂಪ್‍ವೆಲ್ ಮೇಲ್ಸೇತುವೆ ಕಾಮಗಾರಿ ಆರಂಭವಾಗಿದೆ. ಈ ಹಂತದಲ್ಲಿ ಕಾಮಗಾರಿ ವಿನ್ಯಾಸ ಬದಲಾಯಿಸಿದರೆ, ಇನ್ನಷ್ಟು ವಿಳಂಭವಾಗಿ ಸಾರ್ವಜನಿಕ ಸಂಚಾರಕ್ಕೆ ಮತ್ತಷ್ಟು ಸಮಸ್ಯೆಗಳುಂಟಾಗಬಹುದು ಎಂದು ತಿಳಿಸಿದರು. ಅಲ್ಲದೇ, ಮುಂದಿನ ವಾರ ಸಂಸದರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಈ ಬಗ್ಗೆ ಚರ್ಚಿಸಲಾಗುವುದು ಎಂದರು.

ಬಿಕರ್ಣಕಟ್ಟೆ ಸರ್ವೀಸ್ ರಸ್ತೆ ಅಗಲೀಕರಣಕ್ಕೆ ಯಾವುದೇ ತೊಂದರೆ ಇಲ್ಲದಿರುವುದರಿಂದ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು,  ಕೂಳೂರು ಸೇತುವೆ ಮತ್ತು ಬೈಕಂಪಾಡಿ ಕೈಗಾರಿಕಾ ಪ್ರದೇಶ ತಿರುವಿನಲ್ಲಿ ರಸ್ತೆ ಹೊಂಡಗಳನ್ನು ಕೂಡಲೇ ಮುಚ್ಚಬೇಕು, ಮೂಲ್ಕಿ ಪೇಟೆಯಲ್ಲಿ ಚತುಷ್ಪಥ ಕಾಮಗಾರಿಯನ್ನು ತ್ವರಿತಗೊಳಿಸಿ, ಪೂರ್ಣಗೊಳಿಸಬೇಕು ಎಂದು ಎ.ಬಿ. ಇಬ್ರಾಹಿಂ ಅವರು ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.

ಸುರತ್ಕಲ್ ಟೋಲ್‍ಗೇಟ್‍ನಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡದಿರುವ ಬಗ್ಗೆ ಜಿಲ್ಲಾಧಿಕಾರಿಗಳು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಟೋಲ್‍ಗೇಟ್ ಗುತ್ತಿಗೆದಾರರ ಪ್ರತಿನಿಧಿ, ಕೆಎ 19 ನೋಂದಣಿಯ ಖಾಸಗಿ ವಾಹನಗಳಿಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಅಲ್ಲದೇ, ಸ್ಥಳೀಯ ವಾಹನಗಳಿಗೆ ಈಗಾಗಲೇ 1200ಕ್ಕೂ ಅಧಿಕ ಪಾಸು ವಿತರಿಸಲಾಗಿದೆ ಎಂದರು.

ಸಭೆಯಲ್ಲಿ ಮಾತನಾಡಿದ ಎನ್‍ಎಚ್‍ಎಐ ಯೋಜನಾ ನಿರ್ದೇಶಕ ಸ್ಯಾಂಸನ್ ವಿಜಯಕುಮಾರ್, ತಲಪಾಡಿ-ಕುಂದಾಪುರ ನಡುವಿನ ಹೆದ್ದಾರಿ ಚತುಷ್ಪಥ ಕಾಮಗಾರಿಯಲ್ಲಿ ತೊಕ್ಕೊಟು, ಪಂಪ್‍ವೆಲ್ ಹಾಗೂ ಕುಂದಾಪುರ ಮೇಲ್ಸೇತುವೆ ಹೊರತುಪಡಿಸಿದರೆ, ಉಳಿದ ಎಲ್ಲಾ ಕಾಮಗಾರಿಗಳು ಜೂನ್ ಅಂತ್ಯದೊಳಗೆ ಮುಗಿಯಲಿದೆ. ಅಲ್ಲದೇ, ಸರ್ವೀಸ್ ರಸ್ತೆ ಅಗತ್ಯವಿರುವಲ್ಲಿ  ನಿರ್ಮಿಸಲು ಪ್ರಸ್ತಾವನೆ ಕಳುಹಿಸಲಾಗಿದೆ. ಪಂಪ್‍ವೆಲ್ ಮೇಲ್ಸೇತುವೆ  ವಿನ್ಯಾಸವನ್ನು ತಾಂತ್ರಿಕ ತಜ್ಞರ ಸಮಿತಿ ಹಾಗೂ ಹೆದ್ದಾರಿ ಸಚಿವಾಲಯ ಅಂತಿಮಗೊಳಿಸಿದೆ.  ಈ ಹಂತದಲ್ಲಿ ಕಾಮಗಾರಿ ವಿನ್ಯಾಸ ಬದಲಾವಣೆ ಕಷ್ಟಸಾಧ್ಯವಾಗಿದೆ ಎಂದರು. ಮತ್ತು ಕೊಟ್ಟಾರ ಚೌಕಿ ಸರ್ವೀಸ್ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಅಲ್ಲಿ ಚರಂಡಿ ಅಗತ್ಯವಿಲ್ಲದಿದ್ದಲ್ಲಿ ಅದನ್ನು ಮುಚ್ಚಲಾಗುವುದು ಎಂದರು.

ತಲಪಾಡಿ ಟೋಲ್‍ಗೇಟ್ ಸಮೀಪ ಯಾವುದೇ ವಾಣಿಜ್ಯ ಸಂಕೀರ್ಣ ನಿರ್ಮಾಣವಿಲ್ಲ, ತೊಕ್ಕೊಟು ಫ್ಲೈಓವರ್ ಡಿಸೆಂಬರ್‍ನಲ್ಲಿ ಪೂರ್ಣವಾಗಲಿದ್ದು,  ಅದಕ್ಕೂ ಮೊದಲು ಸರ್ವೀಸ್ ರಸ್ತೆ ಕಾಮಗಾರಿ ಶೀಘ್ರವೇ ಮುಗಿಯಲಿದೆ.  ತೊಕ್ಕೊಟು-ಎಕ್ಕೂರು ಚತುಷ್ಪಥ ಪೂರ್ಣಗೊಂಡಿದ್ದು, ಎಕ್ಕೂರು ಸೇತುವೆ ಗರ್ಡರ್ ಕಾಮಗಾರಿ ಮುಗಿದ ತಕ್ಷಣ ಎಕ್ಕೂರು-ಪಂಪ್‍ವೆಲ್ ಚತುಷ್ಪಥ ಆರಂಭವಾಗಲಿದೆ ಎಂದು ಅವರು ಹೇಳಿದರು.

ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಂತೂರು ವೃತ್ತದಲ್ಲಿ ಸಿಗ್ನಲ್ ಅಳವಡಿಸಲಾಗಿದ್ದರೂ, ಬಳಕೆಯಾಗುತ್ತಿಲ್ಲ ಎಂದು ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು,  ಈಗಿನ ಸಿಗ್ನಲ್ ಕಾರ್ಯನಿರ್ವಹಣೆಯಿಂದ ಸಂಚಾರ  ಸಮಸ್ಯೆ ಹೆಚ್ಚಾಗಿದೆ ಎಂದರು.

 ಬೈಕಂಪಾಡಿ ಸೇತುವೆ:  ಬೈಕಂಪಾಡಿ ಹೆದ್ದಾರಿ ನೂತನ ಸೇತುವೆಯಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಮೆಸ್ಕಾಂ ಅಧಿಕಾರಿಗಳು ಈಗಾಗಲೇ ಸಲ್ಲಿಸಿರುವ ಅಂದಾಜುಪಟ್ಟಿಗೆ ಎನ್‍ಎಚ್‍ಎಐ ಅನುಮೋದನೆ ನೀಡಿದೆ. ಆದರೆ ಮೆಸ್ಕಾಂ ಅಧಿಕಾರಿಗಳು, ಈ ಅಂದಾಜುಪಟ್ಟಿಯನ್ನು ಮತ್ತೆ ಬದಲಾಯಿಸಿ ನೀಡಿದ್ದು, ಇದರಿಂದ ಕಂಬಗಳ ಸ್ಥಳಾಂತರ ವಿಳಂಭವಾಗಿದೆ ಎಂದು ಯೋಜನಾ ನಿರ್ದೇಶಕರು ಸಭೆಗೆ ತಿಳಿಸಿದರು.

ಮಂಗಳೂರು-ಮೂಡಬಿದ್ರೆ-ಕಾರ್ಕಳ ಚತುಷ್ಪಥ ಯೋಜನೆ ಈಗಾಗಲೇ ನವದೆಹಲಿಯಲ್ಲಿ ಸಚಿವಾಲಯದಲ್ಲಿದೆ. 2016-17ರಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ಸ್ಯಾಂಸನ್ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಎನ್‍ಎಚ್‍ಎಐ, ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ, ಮಹಾನಗರಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version