ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಥಳೀಯ ಮತ್ತು ಹೊರ ಜಿಲ್ಲೆಗಳಿಗೆ ಕರಾವಳಿ ನಿಯಂತ್ರಣ ವಲಯದಿಂದ ಮರಳು ತೆಗೆದು, ಸಾಗಾಣಿಕೆ ಮಾಡಲು ಅನುಮತಿಯನ್ನು ನೀಡಲಾಗುತ್ತಿದ್ದು, ಅದರಂತೆ ಮರಳು ಸಾಗಾಣಿಕೆದಾರರು ಪರವಾನಿಗೆ ಪಡೆದು ಸಾಗಾಣಿಕೆ ಮಾಡಲಾಗುತ್ತಿದೆ.
ಕರ್ನಾಟಕ ಸರಕಾರದ ಆದೇಶ ಹೊರ ರಾಜ್ಯಗಳಿಗೆ ಮರಳು ಸಾಗಾಣಿಕೆ ಮಾಡುವುದನ್ನು ನಿಷೇಧಿಸಲಾಗಿದ್ದು, ಅದರೆ ಕೆಲವರು ನಾಂದೇಡ್ ಜಿಲ್ಲೆ ಮಹಾರಾಷ್ಟ್ರ ರಾಜ್ಯ ಇಲ್ಲಿನ ಪರವಾನಿಗೆಯನ್ನು ಪಡೆದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಮರಳನ್ನು ಕೇರಳ ರಾಜ್ಯಕ್ಕೆ ಸಾಗಾಣಿಕೆ ಮಾಡುವುದು ಕಂಡು ಬಂದ ಹಿನ್ನೆಲೆಯಲ್ಲಿ, ಹಾಗೂ ಒರಿಸ್ಸಾ ರಾಜ್ಯದ ಬೆರ್ಮಾಪುರ್, ಗಾನಿಯಂ ಇಲ್ಲಿನ ಟ್ಯಾಕ್ಸ್ ಇನ್ ವಾಯ್ಸ್ ಬಿಲ್ಲನ್ನು ಪಡೆದು, ವಾಣಿಜ್ಯ ತೆರಿಗೆಯ ಮೊಹರನ್ನು ನಕಲು ಮಾಡಿ ಸಾಗಾಣಿಕೆ ಮಾಡುವ ಬಗ್ಗೆ ಉಪನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮಂಗಳೂರು ಮತ್ತು ಜಂಟಿ ನಿರ್ದೇಶಕರು, ವಾಣಿಜ್ಯ ತೆರಿಗೆ ಇಲಾಖೆಗಳ ಪರಿಶೀಲನಾ ಸಮಯದಲ್ಲಿ ಕಂಡು ಬಂದಿದ್ದು, ವಾಹನಗಳ ವಿರುದ್ಧ ನಿಯಮದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಯನ್ನು ದಾಖಲಿಸಲಾಗಿರುತ್ತದೆ.
ಕರ್ನಾಟಕ ರಾಜ್ಯದಿಂದ ಹೊರ ರಾಜ್ಯಕ್ಕೆ ಮರಳು ಸಾಗಾಣಿಕೆ ಮಾಡುವುದು ಕಂಡು ಬಂದಿರುವುದರಿಂದ, ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಬೇರೆ ರಾಜ್ಯಗಳಿಂದ ಮರಳು ಸಾಗಾಣಿಕೆ ಮಾಡುವುದನ್ನು ನಿಷೇಧಿಸಿ ಆದೇಶಿಸಿದೆ. ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.