ಮಂಗಳೂರು: ಮಂಗಳಮುಖಿಯರ ಜೀವನಗಾಥೆಯನ್ನು ಆಧರಿಸಿದ ಬಿ.ಎಸ್.ಲಿಂಗದೇವರು ನಿರ್ದೇಶನದ ‘ನಾನು ಅವನಲ್ಲ… ಅವಳು’ ಚಿತ್ರಕ್ಕೆ ಈಗಾಗಲೇ ಎರಡು ರಾಷ್ಟ್ರಪ್ರಶಸ್ತಿ ಸಂದಿದ್ದು ಚಿತ್ರಕ್ಕೆ ರಾಜ್ಯದೆಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲಾತ್ಮಕ ಚಿತ್ರವಾದರೂ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ ಚಿತ್ರದ ಪ್ರಮುಖ ಪಾತ್ರಕ್ಕೆ ನಟ ಸಂಚಾರಿ ವಿಜಯ್ ಜೀವ ತುಂಬಿದ್ದಾರೆ. ಇಂಥ ಚಿತ್ರ ನಿರ್ಮಾಣಗೊಳ್ಳುವುದು ತೀರಾ ಅಪರೂಪ. ಸದಭಿರುಚಿಯ ಚಿತ್ರ ಪ್ರೇಕ್ಷಕರಿಂದ ದೂರವಾಗಬಾರದು ಎಂಬ ನಿಟ್ಟಿನಲ್ಲಿ ‘ಜಯಕಿರಣ ಫಿಲಂಸ್’ ನಗರದ ಪ್ರಭಾತ್ ಚಿತ್ರಮಂದಿರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಡಿಸೆಂಬರ್ 11ರಿಂದ ‘ನಾನು ಅವನಲ್ಲ… ಅವಳು’ ಚಿತ್ರವನ್ನು ಬಹುಜನರ ಅಪೇಕ್ಷೆ ಮೇರೆಗೆ ಪ್ರದರ್ಶನ ಮಾಡಲಾಗುತ್ತಿದೆ.
ರವಿ ಆರ್.ಗರಣಿ ನಿರ್ಮಾಣದ ಚಿತ್ರದಲ್ಲಿ ಮಂಗಳಮುಖಿಯರ ಬದುಕು, ಬವಣೆ ಹಾಗೂ ಜೀವನದ ಏರಿಳಿತದ ಹಾದಿಯನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಕಥಾನಾಯಕ ತಾನು ಅವನಲ್ಲ, ಅವಳು ಎಂಬುದನ್ನು ಅರಿತುಕೊಂಡಾಗ ಆತನಲ್ಲಾಗುವ ತಳಮಳ, ಕುಟುಂಬದ ಮೇಲಾಗುವ ಪ್ರಭಾವ, ಮಂಗಳಮುಖಿಯರನ್ನು ಸಮಾಜ ಕಾಣುವ ದೃಷ್ಟಿಕೋನ ಎಲ್ಲವನ್ನೂ ಸೂಕ್ಷ್ಮವಾಗಿ ಬಿಂಬಿಸುವ ನಿರ್ದೇಶಕ ಲಿಂಗದೇವರು ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದಿದ್ದಾರೆ. ಸಿನಿಮಾದ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ನಟ ಸಂಚಾರಿ ವಿಜಯ್ ಅವರಿಗೆ ಈ ಚಿತ್ರ ಈಗಾಗಲೇ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಹೊಸ ಪ್ರತಿಭೆಗಳು ನಟಿಸಿರುವ ಚಿತ್ರವನ್ನು ವೀಕ್ಷಿಸಿದವರು ಮಂಗಳಮುಖಿಯರ ಕುರಿತ ತಮ್ಮ ದೃಷ್ಟಿಕೋನವನ್ನು ಬದಲಾಯಿಸುವಷ್ಟರ ಮಟ್ಟಿಗೆ ಚಿತ್ರ ಪ್ರಭಾವ ಬೀರುತ್ತದೆ.
ಇತ್ತೀಚೆಗೆ ‘ವಾಟ್ಸ್ ಆ್ಯಪ್ ಓದುಗರ ಬಳಗ’ ಉಡುಪಿಯಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಕೂಡಾ ಇಂಥ ಉತ್ತಮ ಕಥಾಹಂದರವಿರುವ, ಸಾಮಾಜಿಕ ಕಳಕಳಿಯ ಸಿನಿಮಾವನ್ನು ವೀಕ್ಷಿಸಲಿ ಎಂಬ ಹೆಬ್ಬಯಕೆಯೊಂದಿಗೆ ಸಿನಿಮಾವನ್ನು ಮಂಗಳೂರಿನ ಪ್ರಭಾತ್ ಥಿಯೇಟರಿನಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ ಎಂದು ‘ಜಯಕಿರಣ ಫಿಲಂಸ್’ ಹಂಚಿಕೆದಾರ ಪ್ರಕಾಶ್ ಪಾಂಡೇಶ್ವರ್ ತಿಳಿಸಿದ್ದಾರೆ.
ದಿನಾಂಕ 11ರಿಂದ ಪ್ರಭಾತ್ ಥಿಯೇಟರಿನಲ್ಲಿ 10, 1, 4 ಹಾಗೂ ಏಳು ಗಂಟೆಯ ಶೋಗಳಲ್ಲಿ ಚಿತ್ರ ಪ್ರದರ್ಶನವಾಗಲಿದೆ. ಸದಭಿರುಚಿಯ ಚಿತ್ರವನ್ನು ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸಿನಿಮಾ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ.